ಬೆಂಗಳೂರು: ಕಾನೂನು ಪದವಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಮರುಮೌಲ್ಯಮಾಪನ ಮತ್ತು ಸವಾಲಿನ ಮೌಲ್ಯಮಾಪನ (ಚಾಲೆಂಜಿಂಗ್ ವ್ಯಾಲ್ಯೂವೇಷನ್) ಅಂಕಗಳ ಹಂಚಿಕೆಯಲ್ಲಿ ತಾರತಮ್ಯ ಆಗದಂತೆ ಕ್ರಮ ವಹಿಸಲು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ವಿವಿ ಪರೀಕ್ಷಾ ಸುಗ್ರೀವಾಜ್ಞೆ 2014 ನ್ನು ರದ್ದು ಮಾಡಬೇಕು ಮತ್ತು ಸಂವಿಧಾನ ಕಾನೂನು-1 ವಿಷಯದಲ್ಲಿ ಒಂದು ಅಂಕ ಮತ್ತು ಅಪರಾಧ ಕಾನೂನು-1 ವಿಷಯದಲ್ಲಿ ಮೂರು ಅಂಕಗಳನ್ನು ಮಂಜೂರು ಮಾಡುವಂತೆ ಕೋರಿ ನಗರದ ಬಿಎಂಎಸ್ ಕಾಲೇಜ್ ಆಫ್ ಲಾ ಮೊದಲ ವರ್ಷದ ಕಾನೂನು ಪದವಿ ಓದುತ್ತಿರುವ ಚಿತ್ರದುರ್ಗದ ಯಲಗಟ್ಟೆ ಗೊಲ್ಲರಹಟ್ಟಿ ನಿವಾಸಿ ಜೆ.ಅರ್ಪಿತಾ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಆರ್.ಕೃಷ್ಣ ಕುಮಾರ್ ಏಕಸದಸ್ಯ ಪೀಠ ಈ ಆದೇಶ ಅಲ್ಲದೆ, ಮರು ಮೌಲ್ಯಮಾಪನಕ್ಕಾಗಿ (500) ಅರ್ಜಿ ಸಲ್ಲಿಸುವವರಿಗೆ ಶೇ.5 ಮತ್ತು ಸವಾಲಿನ ಮೌಲ್ಯಮಾಪನಕ್ಕೆ (2100) ಅರ್ಜಿ ಸಲ್ಲಿಸುವವರಿಗೆ ಶೇ.20ರವರೆಗೂ ಅಂಕಗಳನ್ನು ನೀಡುವ ಸಂಬಂಧದ ತಾರತಮ್ಯ ತೆಗೆದು ಹಾಕಬೇಕು. ಮರು ಮೌಲ್ಯಮಾಪನದಲ್ಲಿ ಪಡೆದುಕೊಂಡ ಸಂಪೂರ್ಣ ಅಂಕಗಳನ್ನು ಮಂಜೂರು ಮಾಡಬೇಕೆಂದು ಹೇಳಿದೆ.