ಬೆಂಗಳೂರು: ರಾಜ್ಯದಲ್ಲಿ ಜಾರಿಗೊಳಿಸಿದ ಐದು ಗ್ಯಾರಂಟಿಗಳಿಂದ ಒಟ್ಟಾರೆ 1.2 ಕೋಟಿ ಕುಟುಂಬಗಳಿಗೆ ನೇರ ಆದಾಯದ ಪ್ರಯೋಜನ ಲಭಿಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗಮನಸೆಳೆದರು.
ವಿಧಾನಸೌಧ ಸಮಿತಿ ಕೊಠಡಿಯಲ್ಲಿ ನೀತಿ ಆಯೋಗದ ಉಪಾಧ್ಯಕ್ಷ ಡಾ.ಸುಮನ್ ಬೆರಿ ಅವರೊಂದಿಗೆ ಮಂಗಳವಾರ ಸಭೆ ನಡೆಸಿದ ಅವರು, ಎಲ್ಲರನ್ನು ಒಳಗೊಳ್ಳುವ ಬೆಳವಣಿಗೆಗೆ ಪ್ರೋತ್ಸಾಹ, ಉತ್ತಮ ಹಾಗೂ ಸಕ್ರಿಯ ಆಡಳಿತಕ್ಕೆ ಊರುಗೋಲಾಗಿರುವ ಪಂಚಸೂತ್ರಗಳನ್ನು ಪ್ರಸ್ತಾಪಿಸಿದರು.
ಗೃಹಲಕ್ಷ್ಮಿ ಯೋಜನೆಯಡಿ 1.2 ಕೋಟಿ ರೂ. ಮಹಿಳೆಯರ ಬ್ಯಾಂಕ್ ಖಾತೆಗೆ ತಲಾ ಎರಡು ಸಾವಿರ ನಗದು ನೇರ ವರ್ಗಾವಣೆ, ಗೃಹಜ್ಯೋತಿಯಡಿ 1.4 ಕೋಟಿ ಕುಟುಂಬಗಳಿಗೆ ಮಾಸಿಕ 200 ಯೂನಿಟ್‌ವರೆಗೆ ಉಚಿತ ವಿದ್ಯುತ್, ಅನ್ನಭಾಗ್ಯದಡಿ 1.2 ಕೋಟಿ ಕುಟುಂಬಗಳ ಪ್ರತಿ ವ್ಯಕ್ತಿಗೆ ಮಾಸಿಕ 170 ರೂ. ನಗದು ನೇರ ವರ್ಗಾವಣೆ, ಶಕ್ತಿ ಯೋಜನೆಯಡಿ ಈವರೆಗೆ 280 ಕೋಟಿ ಮಹಿಳೆಯರು ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣ ಮಾಡಿದ್ದಾರೆ.
ಯುವನಿಧಿಯಡಿ ಪ್ರತಿ ನಿರುದ್ಯೋಗಿ ಪದವೀಧರರಿಗೆ ಮೂರು ಸಾವಿರ ರೂ., ಡಿಪ್ಲೋಮಾ ಹೊಂದಿದವರಿಗೆ 1,500 ರೂ. ಮಾಸಿಕ ಭತ್ಯೆ ನೀಡುತ್ತಿದ್ದು, 1.31 ಲಕ್ಷ ಯುವ ಜನರು ಈ ಸೌಲಭ್ಯ ಪಡೆದುಕೊಂಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ವಿವರಿಸಿದರು.
ಕೇಂದ್ರ ಸರ್ಕಾರ, ನೀತಿ ಆಯೋಗ ವಿವರಿಸಿರುವ ಅನುಗುಣವಾಗಿ ರಾಜ್ಯ ಸರ್ಕಾರ ಕೆಲಸ ಮಾಡುತ್ತಿದೆ. ಆದರೂ ತಳಭಾಗದ 60ರಷ್ಟು ಜನಸಂಖ್ಯೆಯ ಆದಾಯದ ದೃಷ್ಟಿಯಿಂದ ಅಭಿವೃದ್ಧಿ ಕಾರ್ಯಸೂಚಿಯಲ್ಲಿ ಸೇರಿಸುವ ನಿಟ್ಟಿನಲ್ಲಿ ಹಲವು ಹೆಜ್ಜೆಗಳನ್ನು ಇಟ್ಟಿದ್ದೇವೆ.
ಈ ನಿಟ್ಟಿನಲ್ಲಿ ಆರ್ಥಿಕ ಬೆಳವಣಿಗೆ, ಸಾಮಾಜಿಕ ಒಳಗೊಳ್ಳುವಿಕೆ ಹಾಗೂ ಕಲ್ಯಾಣ ಕಾರ್ಯಕ್ರಮಗಳು, ಸುಸ್ಥಿರ ಅಭಿವೃದ್ಧಿ ಮತ್ತು ಪರಿಸರ, ಆಡಳಿತ ಮತ್ತು ದಕ್ಷತೆ, ನೀತಿ ಆಯೋಗದೊಂದಿಗೆ ಸಹಯೋಗ ಎನ್ನುವ ಪಂಚಸೂತ್ರಗಳಡಿ ಕಾರ್ಯತತ್ಪರವಾಗಿದ್ದೇವೆ.
ಕಾರ್ಯಕತಾಂತ್ರಿಕ ಪಾಲುದಾರಿಕೆಗಳು ಹಾಗೂ ಸಹಯೋಗದ ಪ್ರಯತ್ನಗಳು ಪರಿವರ್ತನೆಗೆ ಕಾರಣವಾಗಬಲ್ಲ ಪ್ರಮುಖ ಘಟ್ಟದಲ್ಲಿದ್ದೇವೆ. ನೀತಿ ಆಯೋಗದ ಜತೆಗಿನ ಪಾಲುದಾರಿಕೆಯು ಅಭಿವೃದ್ಧಿ ತಂತ್ರಗಳನ್ನು ರೂಪಿಸುವಲ್ಲಿ ಪ್ರಮುಖಪಾತ್ರವಹಿಸಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಆಯೋಗವು ಒದಗಿಸಿರುವ ಮಾರ್ಗದರ್ಶನ ಮತ್ತು ಬೆಂಭಲವನ್ನು ಮೆಚ್ಚುವುದಲ್ಲದೆ ವಿವಿಧ ಯೋಜನೆಗಳಲ್ಲಿ ಸಹಯೋಗ ಮುಂದುವರಿಸಲು ಉತ್ಸುಕರಾಗಿದ್ದೇವೆ. ರಾಜ್ಯದ ಸಾಮಾನ್ಯ ಗುರಿಗಳನ್ನು ಸಾಧಿಸಲು, ಸಕಾರಾತ್ಮಕ ಪರಿಣಾಮಬೀರಲು ಎಲ್ಲ ಪಾಲುದಾರರ ಜತೆಗೆ ಕೆಲಸ ಮಾಡಲು ಬದ್ಧರಾಗಿದ್ದೇವೆ.
ಪ್ರಗತಿಪರ ಮತ್ತು ಸಮೃದ್ಧ ಭಾರತದ ಸಾಮೂಹಿಕ ದೃಷ್ಟಿಗೆ ಕೊಡುಗೆ ನೀಡಲು ರಾಜ್ಯ ಬದ್ಧವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾನವಿತ್ತರು. ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಸಿಎಂ ರಾಜಕೀಯ ಕಾರ್ಯದರ್ಶಿ ಗೋವಿಂದರಾಜ್, ಅಭಿವೃದ್ಧಿ ಆಯುಕ್ತ ಗೌರವ್ ಗುಪ್ತಾ, ಸಿಎಂ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್ ಇನ್ನಿತರ ಅಧಿಕಾರಿಗಳು ಇದ್ದರು.