ಬೆಂಗಳೂರು: ನಗರದ ಹೆಬ್ಬಾಳ್ ಕೆರೆಯಲ್ಲಿ ತೆಗೆದಂತಹ ಡೈನೋಸಾರ್ಗಳ ಫೋಟೋ ಎಂಬ ಅಡಿಬರಹದೊಂದಿಗೆ ಭಾರತೀಯ ಅರಣ್ಯಾಧಿಕಾರಿ ಪರ್ವೀನ್ ಕಾಸ್ವಾನ್ ಅವರು ತಮ್ಮ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಹುಬ್ಬೇರುವಂತೆ ಮಾಡಿದೆ.
ವೈರಲ್ ಫೋಟೋ ಪಕ್ಕಾ ಫೋಟೋಶಾಪ್ ಕೈಚಳಕವಾಗಿದೆ. ಆದರೂ ಸಹ ಅನೇಕರು ಚಕಿತಗೊಂಡಿದ್ದಾರೆ. ಖಂಡಿತವಾಗಿ ಇದೊಂದು ಫೋಟೋಶಾಪ್ ಎಂದು ವಿರೋಧಿಗಳು ಹೇಳುತ್ತಾರೆ. ಲಾಕ್ಡೌನ್ನಿಂದಾಗಿ ಡೈನೋಸಾರ್ಗಳು ಬೆಂಗಳೂರಿನ ಹೆಬ್ಬಾಳ್ ಕರೆಗೆ ಬಂದಿವೆ ಎಂದು ಕಾಸ್ವಾನ್ ಟ್ವಿಟರ್ನಲ್ಲಿ ವ್ಯಂಗ್ಯವಾಗಿ ಬರೆದುಕೊಂಡಿದ್ದಾರೆ.
ಅಸಲಿಗೆ ಈ ಡೈನೋಸಾರ್ ಫೋಟೋ ಹೇಗೆ ಸೃಷ್ಟಿಯಾಯಿತು ಎಂದರೆ ಅದಕ್ಕೆ ಪ್ರಮುಖ ಕಾರಣ ಲಾಕ್ಡೌನ್. ಕರೊನಾ ವೈರಸ್ ತಡೆಗಟ್ಟಲು ಇಡೀ ರಾಷ್ಟ್ರಕ್ಕೆ ದಿಗ್ಭಂದನ ವಿಧಿಸಲಾಗಿದೆ. ಇದರ ನಡುವೆ ವಾಯುಮಾಲಿನ್ಯ ಹಾಗೂ ಶಬ್ದ ಮಾಲಿನ್ಯ ಸೇರಿದಂತೆ ಪರಿಸರ ಸುಧಾರಣೆಯಾಗುತ್ತಿದೆ. ಹೀಗಾಗಿ ಇದನ್ನು ವಿಡಂಬಣಾತ್ಮಕವಾಗಿ ತೋರಿಸುವ ಪ್ರಯತ್ನವಾಗಿ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಅನೇಕ ಚಿತ್ರಗಳು ಹರಿದಾಡುತ್ತಿವೆ. ಅದರಲ್ಲಿ ಡೈನೋಸಾರ್ಗಳ ಫೋಟೋ ಕೂಡ ಒಂದಾಗಿದೆ. ಮಾನವನ ಕೃತ್ಯದಿಂದಾಗಿ ಪರಿಸರ ಮಾತ್ರವಲ್ಲದೇ ಅನೇಕ ಜೀವಿಗಳು ಅಳಿದು ಹೋಗಿವೆ. ಲಾಕ್ಡೌನ್ನಿಂದ ಪ್ರಕೃತಿ ತನ್ನ ಸಹಜ ಸ್ಥಿತಿಗೆ ಮರಳುತ್ತಿದೆ ಎಂದು ಸಾಂಕೇತಿಕವಾಗಿ ತೋರಿಸುವ ಪ್ರಯತ್ನವನ್ನು ಅನೇಕ ನೆಟ್ಟಿಗರು ಮಾಡುತ್ತಿದ್ದಾರೆ.
ಸದ್ಯ ಡೈನೋಸಾರ್ ಫೋಟೋ ಕಾಸ್ವಾನ್ ಅವರ ಖಾತೆಯಿಂದ ಡಿಲೀಟ್ ಆಗಿದ್ದು, ಟ್ವಿಟರ್ನಲ್ಲಿ ಅಪ್ಲೋಡ್ ಆಗಿದ್ದ ವೇಳೆ 3 ಸಾವಿರ ಹೆಚ್ಚು ಲೈಕ್ಗಳು ಬಂದಿದ್ದವು. ಅಲ್ಲದೆ, ಸಾಕಷ್ಟು ಮಂದಿ ಕಮೆಂಟ್ ಮಾಡಿ, ಶೇರ್ ಕೂಡ ಮಾಡಿಕೊಂಡಿದ್ದರು. ನೆಟ್ಟಿಗನೊಬ್ಬ ಭೂಮಿ ತನ್ನಷ್ಟಕ್ಕೆ ತಾನು ಗುಣಮುಖವಾಗುತ್ತಿದೆ ಎಂದರೆ, ಮತ್ತೋರ್ವ ಇದು ನಿಜಕ್ಕೂ ಸುಳ್ಳು ಚಿತ್ರ ಎಂದೆಲ್ಲಾ ಕಮೆಂಟ್ ಮಾಡಿದ್ದರು. (ಏಜೆನ್ಸೀಸ್)