ನ್ಯೂಸ್

VIDEO| ಕರೊನಾದಿಂದಾಗಿ ರಸ್ತೆಗೆ ಬಂದ ಡೈನೋಸರ್​; ವ್ಯಕ್ತಿಯ ಪ್ಲ್ಯಾನ್​ಗೆ ಭೇಷ್​ ಎಂದ ಜನ

ಸ್ಪೇನ್​: ಕರೊನಾ ವೈರಸ್​ ಪೂರ್ತಿ ಪ್ರಪಂಚವನ್ನೇ ಆವರಿಸಿಕೊಳ್ಳುತ್ತಿದೆ. ಸೋಂಕಿತರ ಸಂಖ್ಯೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚಳ ಕಾಣುತ್ತಿದ್ದು, ಹಲವರು ವೈರಸ್​ನಿಂದ ತಪ್ಪಿಸಿಕೊಳ್ಳುವುದಕ್ಕೆ ವಿಶೇಷ ಉಪಾಯಗಳನ್ನು ಮಾಡಲಾರಂಭಿಸಿದ್ದಾರೆ. ಸ್ಪೇನ್​ನಲ್ಲಿ ವೈರಸ್​ ಭೀತಿ ಹೆಚ್ಚಾದ ಹಿನ್ನೆಲೆ ಬಂದ್​ ನಡೆಸಲಾಗುತ್ತಿದ್ದು, ವ್ಯಕ್ತಿಯೊಬ್ಬ ಡೈನೋಸರ್​ ಆಗಿರುವ ವಿಡಿಯೋ ಇದೀಗ ವೈರಲ್​ ಆಗಿದೆ.

ಸ್ಪೇನ್​ನ ನಿವಾಸಿಯೊಬ್ಬ ಡೈನೋಸರ್​ ಆಗಿ ರಸ್ತೆಯಲ್ಲಿ ಓಡಾಡಿದ್ದಾನೆ. ಅರೇ ಇದೇನಪ್ಪಾ, ಕರೊನಾದಂತಹ ಮಹಾಮಾರಿ ಕಾಡುತ್ತಿರುವ ಈ ಸಮಯದಲ್ಲಿ ಇದೆಂತ ಹುಚ್ಚಾಟ ಎಂದು ಯೋಚಿಸಬೇಡಿ. ಏಕೆಂದರೆ ಡೈನೋಸರ್​ ವೇಷ ತೊಟ್ಟಿದ್ದು ಕೂಡ ಕರೊನಾ ಬಾರದಿರಲಿ ಎನ್ನುವ ಕಾರಣಕ್ಕೇ. ಮನೆಯಲ್ಲಿದ್ದ ಕಸವನ್ನು ಹೊರಗಿರುವ ಕಸದ ಬುಟ್ಟಿಗೆ ಹಾಕಬೇಕಿತ್ತಂತೆ. ಆದರೆ ಮಾಮೂಲಿಯಾಗಿ ಹೋದರೆ ಹೊರಗೆ ಕರೊನಾ ವೈರಸ್​ ತಗಲುವ ಭಯವಿರುವುದರಿಂದ ಆತ ಡೈನೋಸರ್​ ಬಟ್ಟೆಯನ್ನು ತೊಟ್ಟು ಹೋಗಿದ್ದಾನೆ. ಇದನ್ನು ಕಂಡ ಪೊಲೀಸರು ಆತನನ್ನು ನಿಲ್ಲಿಸಿ ಹೊರಗೆ ಬರಬೇಡ ಎಂದು ಹೇಳಿ ಮನೆಯೊಳಗೆ ಕಳುಹಿಸಿದ್ದಾರೆ.

ಈ ವಿಡಿಯೋವನ್ನು ಸ್ವತಃ ಸ್ಪೇನ್​ನ ಪೊಲೀಸ್​ ಇಲಾಖೆಯೇ ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಹಂಚಿಕೊಂಡಿದೆ. ಕರೊನಾ ತಡೆಯುವುದಕ್ಕೆ ವಿಶೇಷ ಉಪಾಯ ಮಾಡಿದ ಈ ವ್ಯಕ್ತಿಗೆ ನೆಟ್ಟಿಗರು ಭಾರೀ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಸ್ಪೇನ್​ನಲ್ಲಿ ಮಾತ್ರ ಡೈನೋಸರ್​ಗಳು ಈ ರೀತಿ ರಸ್ತೆಗೆ ಬರಲು ಸಾಧ್ಯ ಎಂದು ಜನರು ಕಾಮೆಂಟ್​ ಮಾಡಲಾರಂಭಿಸಿದ್ದಾರೆ. (ಏಜೆನ್ಸೀಸ್​)