ನ್ಯೂಸ್

ಡಿಕೆಶಿ ವಿದೇಶ ಪ್ರವಾಸದ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಡಿನ್ನರ್ ಕಾರ್ಯಾಚರಣೆ: ಆರ್.ಅಶೋಕ್ | R Ashok provoking challenge to DKS

ಬೆಂಗಳೂರು: ಡಿಸಿಎಂ ಡಿ.ಕೆ.ಶಿವಕುಮಾರ್ ವಿದೇಶ ಪ್ರವಾಸಕ್ಕೆ ಹೋಗುವುದನ್ನೇ ಕಾಯುತ್ತಿದ್ದ ಸಿಎಂ ಸಿದ್ದರಾಮಯ್ಯ ಬಣ, ಇತ್ತ ಸಚಿವ ಸತೀಶ್ ಜಾರಕಿಹೊಳಿ ನಿವಾಸದಲ್ಲಿ 35 ಶಾಸಕರ ಡಿನ್ನರ್ ಮೀಟಿಂಗ್ ನಡೆಸಿ ಶಕ್ತಿ ಪ್ರದರ್ಶನ ಮಾಡಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ.

ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ಈ ಕುರಿತು ಸಂದೇಶ ಹಂಚಿಕೊಂಡಿರುವ ಅವರು, ಡಿ.ಕೆ.ಶಿವಕುಮಾರ್ ಅವರೇ, ಅಧಿಕಾರವನ್ನು ಒದ್ದು ಕಿತ್ತುಕೊಳ್ಳುತ್ತೇನೆ ಎಂದು ಸದನದಲ್ಲಿ ತಾವು ಅಬ್ಬರಿಸಿದ್ದನ್ನು ಕಾರ್ಯಗತ ಮಾಡುವ ಸಮಯ ಬಂದಿದೆ ಎಂದು ಕೆಣಕಿದ್ದಾರೆ.

ಡಿಸಿಎಂ ಅನುಪಸ್ಥಿತಿಯಲ್ಲಿ ಸಚಿವ ಸಂಪುಟ ಸಭೆ ನಡೆಯತ್ತದೆ. ಬಸ್ ಟಿಕೆಟ್ ದರ ಶೇ.15ರಷ್ಟು ಹೆಚ್ಚಿಸುವಂತಹ ಪ್ರಮುಖ ನಿರ್ಧಾರವಾಗುತ್ತದೆ ಒಬ್ಬ ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷರ ಅನುಪಸ್ಥಿತಿಯಲ್ಲಿ ಇಂತಹ ನಿರ್ಧಾರಗಳು ಆಗುತ್ತವೆ ಅಂದರೆ ಏನರ್ಥ ? ಎಂದು ಕೇಳಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿ ಡಿ.ಕೆ.ಶಿವಕುಮಾರ್ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆಯೇ ಅಥವಾ ತಮ್ಮ ಅಬ್ಬರ ಏನಿದ್ದರೂ ಮಾಧ್ಯಮಗಳ ಮುಂದೆ ಮಾತ್ರವೆ ?. ಹೀಗೆ ಮುಂದುವರಿದರೆ ತಮ್ಮ ಕನಸು ಕನನಸಾಗಿಯೇ ಉಳಿಯುವುದು ಮಾತ್ರ ಗ್ಯಾರಂಟಿ ಎಂದು ಡಿ.ಕೆ.ಶಿವಕುಮಾರ್‌ಗೆ ಆರ್.ಅಶೋಕ್ ಛೇಡಿಸಿದ್ದಾರೆ.

ಜನಾಬ್ ಪ್ರಿಯಾಂಕ್ ಖರ್ಗೆ ಫತ್ವಾ !

ಸಚಿವ ಪ್ರಿಯಾಂಕ್ ಖರ್ಗೆ ಭಾಷಣದ ವಿಡಿಯೋ ತುಣುಕೊಂದನ್ನು ಆರ್.ಅಶೋಕ್ ತಮ್ಮ ಖಾತೆಯಲ್ಲಿ ಹಂಚಿಕೊಂಡು, ರಿಪಬ್ಲಿಕ್ ಆಫ್ ಕಲಬುರಗಿಯ ನಿಜಾಮ ಜನಾಬ್ ಪ್ರಿಯಾಂಕ್ ಖರ್ಗೆ ಅವರು ಹೊರಡಿಸಿರುವ ಫತ್ವಾ ಏನು ಅಂತ ಒಮ್ಮೆ ಕೇಳಿ:

‘‘ಖರ್ಗೆ ಕುಟುಂಬದವರು ಮನಸ್ಸು ಮಾಡಿದರೆ ಬಿಜೆಪಿ ಕಾರ್ಯಕರ್ತರು ಕಲಬುರಗಿ ಜಿಲ್ಲೆಗೆ ಕಾಲು ಇಡುವುದಕ್ಕೂ ಬಿಡುವುದಿಲ್ಲ’ವಂತೆ !.

ಜನಾಬ್ ಪ್ರಿಯಾಂಕ್ ಖರ್ಗೆಯವರೇ, ಎರಡು ಸಚಿವರಾದ ಮಾತ್ರಕ್ಕೆ ತಾವು ಬಾಬಾಸಾಹೇಬ್ ಅಂಬೇಡ್ಕರ್ ಅವರಿಗಿಂತ ದೊಡ್ಡವರು ಅಂದುಕೊಂಡು ಬಿಟ್ಟಿದ್ದೀರಾ ?. ಡಾ.ಅಂಬೇಡ್ಕರ್ ಅವರ ಸಂವಿಧಾನ ಕಲಬುರಗಿಯಲ್ಲಿ ಅನ್ವಯ ಆಗುವುದಿಲ್ಲವೆ ? ಅಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಸಂವಿಧಾನ ನೀಡಿರುವ ಮೂಲಭೂತ ಹಕ್ಕುಗಳು ಸಿಗುವುದಿಲ್ಲವೆ ?.

ತಾವೂ ನಿಜಾಮರೂ ಅಲ್ಲ, ತಮ್ಮ ಹಿಂಬಾಲಕರು ರಜಾಕರರೂ ಅಲ್ಲ. ಅಧಿಕಾರದ ಮದದಲ್ಲಿ ಮೈಮರೆತು, ತಾವೊಬ್ಬ ಜನಪ್ರತಿನಿಧಿ, ಜನಸೇವಕ ಅನ್ನೋದನ್ನ ಮರೆಯಬೇಡಿ ಎಂದು ಆರ್.ಅಶೋಕ್ ತೀಕ್ಷ್ಣವಾಗಿ ಹೇಳಿದ್ದಾರೆ.