ಹುಟ್ಟುಹಬ್ಬದಂದು ರಚಿತಾ ರಾಮ್ ಕೆನ್ನೆ ಗಿಂಡಿದ ಅಭಿಮಾನಿ 
ನ್ಯೂಸ್

‘ಡಿಂಪಲ್ ಕ್ವೀನ್’ ರಚಿತಾ ರಾಮ್ ಬರ್ತ್‌ಡೇ; ಸೆಲ್ಫಿ ನೆಪದಲ್ಲಿ ಕೆನ್ನೆ ಗಿಂಡಿ ಓಡಿದ ಅಭಿಮಾನಿ! | Rachita Ram

ನಟಿ ರಚಿತಾ ರಾಮ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಅಭಿಮಾನಿಯೊಬ್ಬ ಸೆಲ್ಫಿ ನೆಪದಲ್ಲಿ ನಟಿಯ ಕೆನ್ನೆ ಗಿಂಡಿ ಓಡಿಹೋದ ಘಟನೆ ನಡೆದಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Rachita Ram Birthday: ಸ್ಯಾಂಡಲ್‌ವುಡ್‌ನ ‘ಡಿಂಪಲ್ ಕ್ವೀನ್’ ರಚಿತಾ ರಾಮ್ ಅವರ ಹುಟ್ಟುಹಬ್ಬದ ಸಂಭ್ರಮದ ವೇಳೆ ನಡೆದ ಘಟನೆಯೊಂದು ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ. ನೆಚ್ಚಿನ ನಟಿಯನ್ನು ನೋಡಲು ಬಂದಿದ್ದ ಅಭಿಮಾನಿಯೊಬ್ಬ, ಸೆಲ್ಫಿ ತೆಗೆಸಿಕೊಳ್ಳುವ ನೆಪದಲ್ಲಿ ರಚಿತಾ ರಾಮ್ ಅವರ ಕೆನ್ನೆ ಗಿಂಡಿ ಅಲ್ಲಿಂದ ಓಡಿಹೋಗಿದ್ದಾನೆ.

ಅಕ್ಟೋಬರ್ 3ರಂದು ರಚಿತಾ ರಾಮ್ ಅವರ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ಅಕ್ಟೋಬರ್ 2ರ ತಡರಾತ್ರಿ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ರಚಿತಾ ಮನೆ ಮುಂದೆ ನೂರಾರು ಅಭಿಮಾನಿಗಳು ಜಮಾಯಿಸಿದ್ದರು. ನೆಚ್ಚಿನ ನಟಿಯ ಬರ್ತ್‌ಡೇ ಆಚರಿಸಲು ಬಂದಿದ್ದ ಅಭಿಮಾನಿಗಳು ಕೇಕ್ ಕಟ್ ಮಾಡಿಸಿ ಸಂಭ್ರಮಿಸಿದ್ದಾರೆ.

ಈ ವೇಳೆ ರಚಿತಾ ರಾಮ್ ಅಭಿಮಾನಿಗಳ ಜತೆ ಫೋಟೋ ಹಾಗೂ ಸೆಲ್ಫಿಗೆ ಪೋಸ್ ಕೊಡುತ್ತಿದ್ದರು. ಇದೇ ಸಂದರ್ಭದಲ್ಲಿ ಅಭಿಮಾನಿಯೊಬ್ಬ ಫೋಟೋ ತೆಗೆಸಿಕೊಳ್ಳುವ ನೆಪದಲ್ಲಿ ನಟಿಯ ಬಳಿ ಬಂದಿದ್ದಾರೆ. ಆದರೆ, ಎಲ್ಲರೂ ನೋಡುತ್ತಿದ್ದಂತೆಯೇ ರಚಿತಾ ರಾಮ್ ಅವರ ಕೆನ್ನೆಯನ್ನು ಗಿಂಡಿ, ತಕ್ಷಣ ಅಲ್ಲಿಂದ ಓಡಿಹೋಗಿದ್ದಾನೆ.

ಅಭಿಮಾನಿಯ ಈ ಏಕಾಏಕಿ ವರ್ತನೆಯಿಂದ ರಚಿತಾ ರಾಮ್ ಕೆಲ ಕ್ಷಣ ಶಾಕ್ ಆಗಿದ್ದಾರೆ. ಆದ್ರೆ, ಅದಕ್ಕೆ ಕೋಪ ಮಾಡಿಕೊಳ್ಳದೆ ನಟಿ ನಗುಮುಖದಲ್ಲೇ ಪರಿಸ್ಥಿತಿಯನ್ನು ನಿಭಾಯಿಸಿದ್ದಾರೆ. ನಟಿಯ ಈ ತಾಳ್ಮೆಯ ವರ್ತನೆ ಇದೀಗ ಅಭಿಮಾನಿಗಳ ಗಮನ ಸೆಳೆದಿದೆ.

ಈ ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ. ರಚಿತಾ ರಾಮ್ ಈ ಸಂದರ್ಭದಲ್ಲಿ ತೋರಿದ ತಾಳ್ಮೆಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಅಭಿಮಾನಿಗಳಾಗಿದ್ದರೂ ಸೆಲೆಬ್ರಿಟಿಗಳ ಜತೆ ಒಂದು ಮಿತಿ ಹಾಗೂ ಗೌರವ ಕಾಪಾಡಿಕೊಳ್ಳಬೇಕು. ಸಾರ್ವಜನಿಕವಾಗಿ ಈ ರೀತಿ ಅತಿರೇಕವಾಗಿ ವರ್ತಿಸುವುದು ಸರಿಯಲ್ಲ ಎಂಬ ಚರ್ಚೆಯೂ ಶುರುವಾಗಿದೆ.

ಇದನ್ನೂ ಓದಿ: ಬಾಲಕಿಯ ಹೊಟ್ಟೆಯಿಂದ 1 ಕೆಜಿ ಕೂದಲು ಹೊರತೆಗೆದ ವೈದ್ಯರು: ಅಷ್ಟೊಂದು ಕೇಶ ಉದರ ಸೇರಿದ್ದು ಹೇಗೆ? ಇಲ್ಲಿದೆ ಶಾಕಿಂಗ್​ ಕಾರಣ...Rapunzel Syndrome

ನೆಚ್ಚಿನ ನಟ-ನಟಿಯರ ಜತೆ ಫೋಟೋ ತೆಗೆಸಿಕೊಳ್ಳಬೇಕು, ಅವರನ್ನು ಹತ್ತಿರದಿಂದ ನೋಡಬೇಕು ಅನ್ನೋ ಆಸೆ ಅಭಿಮಾನಿಗಳಿಗೆ ಇರೋದು ಸಹಜ. ಆದ್ರೆ, ಆ ಉತ್ಸಾಹದ ಹೆಸರಿನಲ್ಲಿ ಅವರ ಅನುಮತಿ ಇಲ್ಲದೆ ದೈಹಿಕವಾಗಿ ಮುಟ್ಟುವುದು ಅಥವಾ ವೈಯಕ್ತಿಕ ಅಂತರ ಮೀರೋದು ಸರಿಯಲ್ಲ. ಅಭಿಮಾನ ಮತ್ತು ಗೌರವ ಎರಡನ್ನೂ ಮಿತಿಯಲ್ಲಿ ಇಟ್ಟುಕೊಂಡು ನಡೆದುಕೊಳ್ಳಬೇಕು ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ.