- ಸ್ಯಾಂಡಲ್ ವುಡ್ ಆಗಮಿಸಿ 14 ವರ್ಷಗಳ ಸಂತಸದಲ್ಲಿ ರಚಿತಾ ರಾಮ್
- 2013ರ ಮೇ 10ರಂದು ತೆರೆಕಂಡಿದ್ದ ಬುಲ್ ಬುಲ್ ನಟಿಯ ಮೊದಲ ಸಿನಿಮಾ
- ಅಭಿಮಾನಿಗಳಿಂದ ವಿಶೇಷ ಸಿಡಿಪಿ ರಿಲೀಸ್ ಮಾಡಿ ಸಂಭ್ರಮ
ಬೆಂಗಳೂರು: ನಟಿ ರಚಿತಾ ರಾಮ್ ಕನ್ನಡ ಚಿತ್ರರಂಗ ಪ್ರವೇಶಿಸಿ 14 ವರ್ಷಗಳ ಸಂಭ್ರಮದಲ್ಲಿದ್ದಾರೆ. ಕನ್ನಡದ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದ ಅವರು, ದರ್ಶನ್ ಅಭಿನಯದ ‘ಬುಲ್ ಬುಲ್’ ಚಿತ್ರದ ಮೂಲಕ ಚಂದನವನ ಪ್ರವೇಶಿಸಿದ್ದರು. 2013ರ ಮೇ 10ರಂದು ಈ ಸಿನಿಮಾ ರಿಲೀಸ್ ಆಗಿತ್ತು. ಈ ಹಿನ್ನೆಲೆಯಲ್ಲಿ ರಚಿತಾ ರಾಮ್ ಸಂಭ್ರಮಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ‘ಡಿಂಪಲ್ ಕ್ವೀನ್’ ಎಂದೇ ಪ್ರಸಿದ್ಧಿಯಾಗಿರುವ ಅವರು, ‘ಬುಲ್ ಬುಲ್’ ಬಳಿಕ ‘ರನ್ನ’, ‘ರಥಾವರ’, ‘ನಟ ಸಾರ್ವಭೌಮ’, ‘ರುಸ್ತುಂ’, ‘ಮ್ಯಾಡ್ ಬ್ಯಾನರ್ಸ್’ ಸೇರಿ 35ಕ್ಕೂ ಅಧಿಕ ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಹಾಗೆಯೇ ಶಿವರಾಜಕುಮಾರ್, ದರ್ಶನ್, ಪುನೀತ್ ರಾಜಕುಮಾರ್, ಸುದೀಪ್ ಅವರಂತಹ ಖ್ಯಾತ ನಟರ ಜತೆ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. ಇನ್ನು ಪರಭಾಷೆಯಲ್ಲೂ ಗಮನಸೆಳೆದಿರುವ ರಚಿತಾ, ತೆಲುಗಿನ ‘ಸೂಪರ್ ಮಚಿ’, ತಮಿಳಿನಲ್ಲಿ ರಜಿನಿಕಾಂತ್ ಅಭಿನಯದ ‘ಕೂಲಿ’ ಚಿತ್ರದಲ್ಲಿ ನಟಿಸಿದ್ದಾರೆ. ‘ಕೂಲಿ’ ಚಿತ್ರದ ರಚಿತಾ ನಟನೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿತ್ತು. ಹೀಗೆ ನಟಿಯು ಕನ್ನಡ ಸೇರಿ ಪರಭಾಷೆಯಲ್ಲೂ ಸಾಧನೆಯ ಹೆಜ್ಜೆ ಮೂಡಿಸಿದ್ದಾರೆ. ನಟನೆಯಲ್ಲಿ 14 ವರ್ಷಗಳು ಪೂರೈಸಿರುವ ಹಿನ್ನೆಲೆಯಲ್ಲಿ ನಟಿಯ ಸಿಡಿಪಿ ಪ್ರೊಪೈಲ್ ಬಿಡುಗಡೆ ಮಾಡಲಾಗಿದೆ. ಸದ್ಯ ರಚಿತಾ ರಾಮ್ ‘ಅಯೋಗ್ಯ 2’ ಚಿತ್ರೀಕರಣ ಮುಗಿಸಿದ್ದು, ಧ್ರುವ ಸರ್ಜಾ ನಟನೆಯ ‘ಕ್ರಿಮಿನಲ್’ ಶೂಟಿಂಗ್‌ನಲ್ಲಿದ್ದಾರೆ. ತೆಲುಗಿನ ಎರಡು ಹೊಸ ಸಿನಿಮಾಗಳು ಶೀಘ್ರ ಅನೌನ್ಸ್ ಆಗಲಿದ್ದು, ತಮಿಳು ಚಿತ್ರತಂಡದ ಜತೆ ನಟಿ ಮಾತುಕತೆಯಲ್ಲಿದ್ದಾರೆ.