ನ್ಯೂಸ್

ಶಿಥಿಲಗೊಂಡ ಅಂಗನವಾಡಿ ಕೇಂದ್ರ

Mysuru - Desk - Ravikumar

ನಂಜನಗೂಡು: ತಾಲೂಕಿನ ಯಾಲಹಳ್ಳಿ ಗ್ರಾಮದಲ್ಲಿರುವ ಅಂಗನವಾಡಿ ಕೇಂದ್ರ ಶಿಥಿಲಗೊಂಡ ಪರಿಣಾಮ ಗ್ರಾಮದ ಹಾಲಿನ ಡೇರಿಯಲ್ಲಿ ಮಕ್ಕಳಿಗೆ ಪಾಠ ಮಾಡಲಾಗುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.


ಗ್ರಾಮದ ಅಂಗನವಾಡಿ ಕೇಂದ್ರ ಶಿಥಿಲಗೊಂಡು ವರ್ಷಗಳೇ ಕಳೆದಿದ್ದರೂ ಕೂಡ ಇದೇ ಅಂಗನವಾಡಿಯಲ್ಲಿ ಮಕ್ಕಳನ್ನು ಕೂರಿಸಲಾಗುತ್ತಿತ್ತು. ಆದರೆ, ಪಾಲಕರು ಭಯಗೊಂಡು ಅಂಗನವಾಡಿ ಕಾರ್ಯಕರ್ತೆಯರನ್ನು ಪ್ರಶ್ನಿಸಿದಾಗ ಪಕ್ಕದಲ್ಲಿದ್ದ ಹಾಲಿನ ಡೇರಿಗೆ ಅಂಗನವಾಡಿ ಕೇಂದ್ರ ವರ್ಗಾಯಿಸಲಾಗಿದೆ. ತಾತ್ಕಾಲಿಕವಾಗಿ ಇಲ್ಲಿ ಅಂಗನವಾಡಿ ನಡೆಸಲಾಗುತ್ತಿದೆ.


ಪ್ರಸ್ತುತವಿರುವ ಅಂಗನವಾಡಿ ಕಟ್ಟಡ ತೀರ ಹಳೆಯದಾಗಿದ್ದು, ಗೋಡೆಗಳು ಬಿರುಕು ಬಿಟ್ಟಿವೆ. ಛಾವಣಿ ಉದುರುತ್ತಿದ್ದು, ಸಣ್ಣ ಮಳೆ ಬಂದರೂ ಸಹ ಕಟ್ಟಡ ಸೋರುತ್ತಿದೆ. ಯಾವುದೇ ಕ್ಷಣದಲ್ಲಾದರೂ ಕಟ್ಟಡ ಕುಸಿದು ಬೀಳುವ ಆತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಪಾಲಕರು ಮಕ್ಕಳನ್ನು ಅಂಗನವಾಡಿ ಕೇಂದ್ರಕ್ಕೆ ಕಳುಹಿಸಲು ಹಿಂದೇಟು ಹಾಕುತ್ತಿದ್ದ ಪರಿಣಾಮ 12 ರಿಂದ 6 ಮಕ್ಕಳಿಗೆ ಹಾಜರಾತಿ ಕುಸಿತಗೊಂಡಿದೆ. ಸದ್ಯ ಮಕ್ಕಳನ್ನು ನಂದಿನಿ ಹಾಲಿನ ಡೇರಿಯಲ್ಲಿ ತಾತ್ಕಾಲಿಕವಾಗಿ ಕೂರಿಸಲಾಗುತ್ತಿದೆ.


ಶಿಥಿಲಗೊಂಡಿರುವ ಕಟ್ಟಡದಲ್ಲಿ ಅಡುಗೆ ತಯಾರಿಸುವುದರ ಜತೆಗೆ, ಪುಟ್ಟ ಮಕ್ಕಳು ತಿನ್ನುವ ಪೌಷ್ಟಿಕ ಆಹಾರ ಧಾನ್ಯಗಳನ್ನು ಹಳೆಯ ಅಂಗನವಾಡಿ ಕೇಂದ್ರದಲ್ಲಿ ಶೇಖರಣೆ ಮಾಡಲಾಗುತ್ತಿದೆ. ಆಹಾರ ಪದಾರ್ಥಗಳು ಎಷ್ಟರಮಟ್ಟಿಗೆ ಸುರಕ್ಷಿತವಾಗಿದೆಯೋ ತಿಳಿದು ಬಂದಿಲ್ಲ. ಅಂಗನವಾಡಿ ಮೇಲ್ವಿಚಾರಣೆ ಹೊಂದಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಭಿವೃದ್ಧಿ ಅಧಿಕಾರಿಗಳು ಶಿಥಿಲಗೊಂಡಿರುವ ಅಂಗನವಾಡಿ ಹಳೆಯ ಕಟ್ಟಡವನ್ನು ನೆಲಸಮಗೊಳಿಸಿ, ಸಂಬಂಧಪಟ್ಟ ಶಾಸಕರ ಗಮನಕ್ಕೆ ತಂದು ನೂತನ ಅಂಗನವಾಡಿ ಕೇಂದ್ರಕ್ಕೆ ಶಿಫಾರಸು ಮಾಡಲಾಗಿದೆ. ಆದರೂ, ನಿರ್ಲಕ್ಷೃ ವಹಿಸಿದ ಪರಿಣಾಮ ಸಮಸ್ಯೆ ತಲೆದೋರಿದ್ದು, ಆದಷ್ಟು ಬೇಗ ಹೊಸ ಕಟ್ಟಡ ನಿರ್ಮಿಸಿಕೊಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಕಟ್ಟಡ ಶಿಥಿಲಕೊಂಡಿರುವುದರಿಂದ ಗ್ರಾಮದಲ್ಲಿ ಬಾಡಿಗೆ ಕಟ್ಟಡಗಳು ದೊರಕದೆ ಹಾಲಿನ ಡೇರಿಯಲ್ಲಿ ಅಂಗನವಾಡಿ ಕೇಂದ್ರ ನಡೆಸಲಾಗುತ್ತಿದೆ. ಶೀಘ್ರದಲ್ಲೇ ಶಾಸಕರ ಗಮನಕ್ಕೆ ತಂದು ಹೊಸ ಕಟ್ಟಡ ನಿರ್ಮಿಸಿಕೊಡುವಂತೆ ಮನವಿ ಮಾಡುತ್ತೇನೆ.ಭವ್ಯಶ್ರೀ, ಸಿಡಿಪಿಒ ನಂಜನಗೂಡು
ಅಂಗನವಾಡಿ ಕಟ್ಟಡ ಶಿಥಿಲಗೊಂಡು ಅನೇಕ ವರ್ಷಗಳೆ ಕಳೆದಿದ್ದು, ನೂತನ ಕಟ್ಟಡ ನಿರ್ಮಾಣಕ್ಕೆ ಅಧಿಕಾರಿಗಳು ಶಿಫಾರಸು ಮಾಡಲು ನಿರ್ಲಕ್ಷೃ ತೋರುತ್ತಿದ್ದಾರೆ. ಜತೆಗೆ ಶಿಥಿಲ ಕಟ್ಟಡದಲ್ಲೇ ಆಹಾರ ಪದಾರ್ಥಗಳನ್ನು ಶೇಖರಣೆ ಮಾಡುತ್ತಿರುವುದು ಕಂಡುಬಂದಿದ್ದು, ಎಷ್ಟರಮಟ್ಟಿಗೆ ಸುರಕ್ಷಿತವಾಗಿದೆ ಎಂಬುದು ತಿಳಿದುಬಂದಿಲ್ಲ.ನಾಗೇಂದ್ರ, ಯಾಲಹಳ್ಳಿ ಗ್ರಾಮಸ್ಥರು.