ನ್ಯೂಸ್

ಸೈನಿಕ ಯುದ್ಧ ಮಾಡಬೇಕೋ? ಶಸ್ತ್ರತ್ಯಾಗ ಮಾಡಬೇಕೋ?

Webdesk - Ravikanth
ಭಾರತದಂಥ ದೇಶಗಳು ತಾವಾಗಿ ಬೇರೆಯವರ ಮೈಮೇಲೆ ಹೋಗುವುದಿಲ್ಲ. ಆದರೆ ಬೇರೆಯವರು ಬಿಡಬೇಕಲ್ಲ. ಹೀಗಾಗಿ ಶಸ್ತ್ರಾಸ್ತ್ರಗಳನ್ನು, ಯುದ್ಧವಿಮಾನಗಳನ್ನು ಗುಡ್ಡೆಹಾಕಿಕೊಂಡು ಸ್ವರಕ್ಷಣೆಗೆ ಸದಾ ಸನ್ನದ್ಧರಾಗಿರಬೇಕಾಗುತ್ತದೆ. ಇನ್ನು ಚೀನಾವಂತೂ ರಕ್ಷಣಾ ಬಜೆಟ್ಟನ್ನು ನಮಗಿಂತ ಮೂರು ಪಟ್ಟು ಹೆಚ್ಚಿಸಿಕೊಂಡಿದೆ.

‘ಸದಾ ಯುದ್ಧಕ್ಕೆ ಸನ್ನದ್ಧರಾಗಿರುವುದರಿಂದ ಮಾತ್ರವೇ ನಾವು ಶಾಂತಿಯನ್ನು ಪಡೆಯಬಹುದು ಎಂಬುದು ನಿಜಕ್ಕೂ ದುರದೃಷ್ಟದ ಸಂಗತಿ’ ಎಂದು ಅಮೆರಿಕದ ಮಾಜಿ ಅಧ್ಯಕ್ಷ ಜಾನ್ ಕೆನಡಿ ಹೇಳಿದ್ದರು. ಅಮೆರಿಕ ವೈರಿ ದೇಶವಾಗಿದ್ದರೂ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರು ಈ ಮಾತನ್ನು ಆದರ್ಶವಾಗಿ ತೆಗೆದುಕೊಂಡಂತಿದೆ. ಯೂಕ್ರೇನ್ ಮೇಲಿನ ಯುದ್ಧಕ್ಕಾಗಿ ಪುತಿನ್ ಟೀಕೆಗೆ ಒಳಗಾಗಿದ್ದರೂ, ಮೇಲ್ನೋಟಕ್ಕೆ ನೋಡಿದರೆ ಅವರ ವಾದ ಬಹಳ ಸರಳವಾದುದು. ಯೂಕ್ರೇನ್ ಒಂದು ಕಾಲಕ್ಕೆ ಯುಎಸ್​ಎಸ್​ಆರ್ ಭಾಗವೇ ಆಗಿತ್ತು. ಇತಿಹಾಸದ ಒಂದು ತಿರುವಿನಲ್ಲಿ, ಕಮ್ಯೂನಿಸ್ಟ್ ಭ್ರಮಾ ಬಲೂನು ಒಡೆದ ಹೊತ್ತಿನಲ್ಲಿ ಅದು ಸ್ವತಂತ್ರ ದೇಶವಾಯಿತು. ಕಟ್ಟಾ ರಾಷ್ಟ್ರೀಯವಾದಿ ನಾಯಕ ಪುತಿನ್ ಈ ವಾಸ್ತವವನ್ನು ಇನ್ನೂ ಪೂರ್ಣವಾಗಿ ಅರಗಿಸಿಕೊಂಡಿಲ್ಲ. ಅದಕ್ಕೆ ಕಾರಣವೂ ಇದೆ. ತೈಲ ಮತ್ತು ಕೃಷಿ ಸಮೃದ್ಧ ಯೂಕ್ರೇನ್ ಕೈತಪ್ಪುವುದು ಎಂಥವರಿಗೂ ಖೇದದ ಸಂಗತಿಯೇ ಸರಿ.

‘ಮೊದಲು ನಮ್ಮದೇ ಭಾಗವಾಗಿದ್ದ ಯೂಕ್ರೇನ್ ನಂತರದಲ್ಲಿ ಯಾವುದೋ ಕಾರಣಕ್ಕೆ ಬೇರೆಯಾಯಿತು ಎನ್ನುವುದು ನಿಜ. ಆದರೆ ಹಿಸೆ ತೆಗೆದುಕೊಂಡ ಮೇಲೆ, ಸುಮ್ಮನೆ ತನ್ನ ಪಾಡಿಗೆ ತಾನು ಜೀವನ ಮಾಡುವುದನ್ನು ಬಿಟ್ಟು, ನಮ್ಮನ್ನು (ರಷ್ಯಾ) ಕಂಡರೆ ಉರಿದುಬೀಳುವ ಅಮೆರಿಕ ಮತ್ತು ನ್ಯಾಟೊ ಜತೆ ಕೈಜೋಡಿಸಿ ನಮ್ಮ ಮೇಲೇ ಮಸಲತ್ತು ಮಾಡಿದರೆ ಯಾರು ತಾನೇ ಸಹಿಸುತ್ತಾರೆ ಹೇಳಿ’ ಎಂಬುದು ಪುತಿನ್ ವಾದ. ‘ನಾವೂ ಹೇಳುವಷ್ಟು ಹೇಳಿದೆವು. ಎಚ್ಚರಿಕೆ ನೀಡಿದೆವು. ಕೇಳಲಿಲ್ಲ. ನಮ್ಮ ರಕ್ಷಣೆ ಬಗ್ಗೆ ನಾವು ನಿಗಾ ವಹಿಸಲೇ ಬೇಕಲ್ವ? ಈ ಹೊತ್ತಿನಲ್ಲಿ ಯುದ್ಧ ಬಿಟ್ಟು ಬೇರೆ ದಾರಿ ಇರಲಿಲ್ಲ’ ಎಂದು ಪುತಿನ್ ಸಮರ್ಥಿಸಿಕೊಳ್ಳುತ್ತಾರೆ. ‘ಅರೆ! ನಮ್ಮದು ಸ್ವತಂತ್ರ ದೇಶ ಸ್ವಾಮಿ. ನಾವೇನು ಈಗ ಯುಎಸ್​ಎಸ್​ಆರ್ ಸುಪರ್ದಿಯಲ್ಲಿ ಇದ್ದೀವಾ? ನಮಗೆ ಬೇಕಾದ ಹಾಗೆ ನಿರ್ಣಯ ಮಾಡಲು ನಮಗೆ ಹಕ್ಕಿಲ್ಲವಾ? ನಾವು ನ್ಯಾಟೋನಾದ್ರೂ ಸೇರಲಿ, ಅಮೆರಿಕಾನಾದ್ರೂ ಸೇರಲಿ. ಇದನ್ನು ಕೇಳೋಕೆ ಪುತಿನ್ ಯಾರು?’ ಎಂದು ಪ್ರತಿವಾದ ಮಂಡಿಸುತ್ತಾರೆ ಯೂಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್​ಸ್ಕಿ.

‘ಯುದ್ಧ ಮತ್ತು ಪ್ರೇಮದಲ್ಲಿ ಎಲ್ಲವೂ ಸರಿ’ ಎಂಬ ಮಾತು ಜನಜನಿತ. ಆದರೆ, ಯುದ್ಧದ ಪರಿಣಾಮಗಳು ಆ ಎರಡು ದೇಶಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ; ಕೆಲವೊಮ್ಮೆ ಪ್ರೇಮದ ಪರಿಣಾಮ ಸಹ. ಈಗ ಆಗುತ್ತಿರುವುದೂ ಅದೇ. ರಷ್ಯಾ-ಯೂಕ್ರೇನ್ ಸಮರದ ಪರಿಣಾಮ ವಿಶ್ವದ ಮೇಲೆ ಬೇರೆ ಬೇರೆ ರೀತಿಯಲ್ಲಿ ಕಂಡುಬರುತ್ತಿದೆ. ನಮ್ಮ ದೇಶವನ್ನೇ ತೆಗೆದುಕೊಂಡರೆ, ಯೂಕ್ರೇನ್ ನಮ್ಮಲ್ಲಿಂದ 5 ಸಾವಿರ ಕಿಲೋಮೀಟರ್​ಗಳಷ್ಟು ದೂರ ಇದ್ದರೂ, ಯುದ್ಧದ ಪರಿಣಾಮ ಈಗಾಗಲೇ ಅನುಭವಕ್ಕೆ ಬಂದಿದೆ. ಹೇಳಿಕೇಳಿ ಅವೆರಡೂ ದೇಶಗಳು ತೈಲ ಮತ್ತು ಖಾದ್ಯತೈಲ ಸಮೃದ್ಧ ದೇಶಗಳು. ಸೂರ್ಯಕಾಂತಿ ಎಣ್ಣೆಯ ಬಹುಭಾಗ ಯೂಕ್ರೇನಿನಿಂದ ಬರಬೇಕಿತ್ತು. ಸಮರದ ಪರಿಣಾಮ ಆ ಪ್ರಮಾಣ ತಗ್ಗಿದೆ; ಬೆಲೆ ಏರಿದೆ. ಖಾದ್ಯ ತೈಲ ದರ ಏರಿದ್ದರಿಂದ ಹೋಟೆಲುಗಳಲ್ಲಿ ತಿಂಡಿತಿನಿಸುಗಳ ದರ ಹೆಚ್ಚಳವಾಗುವ ಸಾಧ್ಯತೆ ಇದೆ. ಕರೊನಾ ಕಾರಣಕ್ಕೆ ಅದಾಗಲೇ ಅಡುಗೆ ಎಣ್ಣೆಗಳ ಬೆಲೆ ಹೆಚ್ಚಳವಾಗಿತ್ತು. ಇದ್ದುದರಲ್ಲಿ ಇಂಧನವೇ ವಾಸಿ. ಏಕೆಂದರೆ, ರಷ್ಯಾ ಶೇಕಡ 30 ರಿಯಾಯಿತಿ ದರದಲ್ಲಿ ಕಚ್ಚಾ ತೈಲವನ್ನು ಭಾರತಕ್ಕೆ ಪೂರೈಸಲು ಒಪ್ಪಿದೆ. ಯುದ್ಧದಲ್ಲಿ ಸಿಲುಕಿರುವ ರಷ್ಯಾಕ್ಕೂ ಹಣಕಾಸಿನ ಮುಗ್ಗಟ್ಟು ಇದೆ. ಅಲ್ಲದೆ, ಅಮೆರಿಕ, ಯುರೋಪ್ ದೇಶಗಳು ರಷ್ಯಾ ಮೇಲೆ ಹಲವು ರೀತಿಯ ನಿರ್ಬಂಧ ಹೇರಿವೆ. ಕಚ್ಚಾ ತೈಲ ದರ 130 ಡಾಲರ್​ಗೆ ಏರಿದಾಗ ಇಲ್ಲೂ ಆತಂಕ ಶುರುವಾಗಿತ್ತು. ಸದ್ಯ ಆ ಆತಂಕ ಸ್ವಲ್ಪ ದೂರವಾಗಿದೆ.

‘ಗ್ಲೋಬಲ್ ವಿಲೇಜ್’ ಎಂಬ ಪರಿಕಲ್ಪನೆ ಬಂದು ಅನೇಕ ವರ್ಷಗಳಾದವು. ಅಂದರೆ ಸಂಪರ್ಕ, ಸಂಚಾರ ಸಾಧನ ಸವಲತ್ತುಗಳಿಂದಾಗಿ ಜಗತ್ತಿನ ದೇಶಗಳ ನಡುವಣ ಅಂತರ ಕಡಿಮೆಯಾಗಿದೆ. ಉದಾರೀಕರಣ, ಜಾಗತೀಕರಣದಿಂದಾಗಿ ಒಂದು ದೇಶ ಇನ್ನೊಂದನ್ನು ಬಿಟ್ಟು ಇರಲು ಸಾಧ್ಯವಿಲ್ಲ ಎಂಬ ಸ್ಥಿತಿಯಿದೆ. ಒಂದು ರೀತಿಯಲ್ಲಿ ಇದು ಸಮೂಹಗಾನದಂತೆ; ಸಾಮೂಹಿಕವಾಗಿ ಗಾಯನ ಪ್ರಸ್ತುತಪಡಿಸುತ್ತಿರುವಾಗ ಯಾರೋ ಒಂದಿಬ್ಬರು ಅಪಸ್ವರ ಎಳೆದರೂ ಒಟ್ಟಾರೆ ಪರಿಣಾಮ ತಗ್ಗುತ್ತದೆ; ಕೇಳುಗರಿಗೆ ಹಿತವೆನಿಸದು. ಇದೂ ಹಾಗೆಯೇ. ಎಲ್ಲೋ ಒಂದೆರಡು ದೇಶಗಳು ಗುದ್ದಾಡಿಕೊಂಡರೂ ಉಳಿದ ದೇಶಗಳ ಮೇಲೆ ದುಷ್ಪರಿಣಾಮ ಆಗುತ್ತದೆ. ಈಗ ಆಗುತ್ತಿರುವುದೂ ಅದೇ. ಇನ್ನೊಂದು ಉದಾಹರಣೆ ನೋಡಿ. ನಮಗೂ-ಚೀನಾಕ್ಕೂ ಒಂದು ರೀತಿಯ ಲವ್-ಹೇಟ್ ಸಂಬಂಧ. ಆ ದೇಶ ಗಡಿಯಲ್ಲಿ ಸದಾ ಕಿರಿಕ್ ಮಾಡುತ್ತಿರುತ್ತದೆ. ಹೀಗಿದ್ದರೂ ಉಭಯ ದೇಶಗಳ ನಡುವೆ ವ್ಯಾಪಾರ ವ್ಯವಹಾರ ಭರ್ಜರಿಯಾಗಿಯೇ ಇದೆ (ಚೀನಾದಿಂದ ನಾವು ಆಮದು ಮಾಡಿಕೊಳ್ಳುವ ಪ್ರಮಾಣ ಹೆಚ್ಚಿಗೆಯಿದ್ದು, ರಫ್ತು ಪ್ರಮಾಣ ಕಡಿಮೆ ಇದೆ. ಇದನ್ನು ವ್ಯಾಪಾರ ಕೊರತೆ (ಠ್ಟಿಚಛಛಿ ಛಛ್ಛಿಜ್ಚಿಜಿಠಿ) ಎನ್ನಲಾಗುತ್ತದೆ). ಬಹುತೇಕ ಎಲ್ಲ ದೇಶಗಳದ್ದೂ ಇದೇ ಕಥೆ. ಉತ್ತರ ಕೊರಿಯಾದ್ದಂತೂ ಮಜಾ ಸಂಗತಿ. ಬಹುತೇಕ ಎಲ್ಲ ದೇಶಗಳು ಅದರ ಮೇಲೆ ನಿರ್ಬಂಧ ಹೇರಿವೆ. ಆದರೆ ಆ ದೇಶ ಮಾತ್ರ ಏನೂ ಆಗಿಲ್ಲವೆಂಬಂತೆ ದಿನದೂಡುತ್ತಿದೆ. ಕಾರಣ ಇಷ್ಟೇ- ನಿರ್ಬಂಧ ಹೇರಿದ ದೇಶಗಳೇ ಕಳ್ಳಮಾರ್ಗದಲ್ಲಿ ಅಲ್ಲಿಗೆ ಸಾಮಗ್ರಿ ರವಾನಿಸುತ್ತವೆ! ಅಲ್ಲಿಂದ ತಮಗೆ ಬೇಕಾದ ವಸ್ತುಗಳನ್ನು ತರಿಸಿಕೊಳ್ಳುತ್ತವೆ. ಇದಲ್ಲವೆ ‘ಸಹಕಾರ’ ಎಂದರೆ!

‘ನಾವು ಯುದ್ಧವನ್ನು ಕೊನೆಗೊಳಿಸದಿದ್ದರೆ ಯುದ್ಧವೇ ನಮ್ಮನ್ನು ಕೊನೆಗೊಳಿಸುತ್ತದೆ’ ಎಂದು ಎಚ್ಚರಿಸುತ್ತಾನೆ ಸಾಹಿತಿ ಎಚ್.ಜಿ.ವೇಲ್ಸ್. ಆದರೆ ಇಂದಿನ ಅತ್ಯಾಧುನಿಕ ಅಸ್ತ್ರಶಸ್ತ್ರಗಳ ಗೌಜುಗದ್ದಲದ ನಡುವೆ ಈ ಕಿವಿಮಾತು ಯಾರ ಕಿವಿ ಮೇಲೆ ಬಿದ್ದೀತು ಎಂಬುದೇ ಪ್ರಶ್ನೆ. ಭಾರತದಂಥ ದೇಶಗಳು ತಾವಾಗಿ ಬೇರೆಯವರ ಮೈಮೇಲೆ ಹೋಗುವುದಿಲ್ಲ. ಆದರೆ ಬೇರೆಯವರು ಬಿಡಬೇಕಲ್ಲ. ಹೀಗಾಗಿ ಶಸ್ತ್ರಾಸ್ತ್ರಗಳನ್ನು, ಯುದ್ಧವಿಮಾನಗಳನ್ನು ಗುಡ್ಡೆಹಾಕಿಕೊಂಡು ಸ್ವರಕ್ಷಣೆಗೆ ಸದಾ ಸನ್ನದ್ಧರಾಗಿರಬೇಕಾಗುತ್ತದೆ. ಇನ್ನು ಚೀನಾವಂತೂ ರಕ್ಷಣಾ ಬಜೆಟ್ಟನ್ನು ನಮಗಿಂತ ಮೂರು ಪಟ್ಟು ಹೆಚ್ಚಿಸಿಕೊಂಡಿದೆ.

‘ಯುದ್ಧ ಅನಿವಾರ್ಯ ಎಂದು ಎಷ್ಟೇ ಸಮರ್ಥಿಸಿಕೊಂಡರೂ ಅದು ಅಪರಾಧ ಎಂಬುದನ್ನು ಮರೆಯಬೇಡ’ ಎನ್ನುತ್ತಾನೆ, ಪ್ರಾಚೀನ ಚೀನಾದ ತತ್ತ್ವಜ್ಞಾನಿ, ಸಮರ ತಂತ್ರಜ್ಞ ಸನ್ ತ್ಸು. ಅದೇ ಉಸಿರಿನಲ್ಲಿ ಅವನು ಹೇಳುತ್ತಾನೆ- ‘ದೀರ್ಘಯುದ್ಧದಿಂದ ಪ್ರಯೋಜನ ಹೊಂದಿದ ಯಾವ ದೇಶವೂ ಇಲ್ಲ.’ ಹಾಗಾದರೆ ಯುದ್ಧದಲ್ಲಿ ಜಯಗಳಿಸಿದೆ ಎನ್ನುವುದೆಲ್ಲ ಉತ್ತರನ ಪೌರುಷವೇ? ಅಥವಾ ಭ್ರಮೆಯೇ ಅಥವಾ ವಾಸ್ತವವೇ? ಭೌತಿಕವಾಗಿ ಸಮರದಲ್ಲಿ ಒಂದು ಪಕ್ಷ ವಿಜಯ ಸಾಧಿಸುವುದು ಯುದ್ಧನಿಯಮವೇ ಆಗಿರಬಹುದು. ಆದರೆ, ಸ್ವಲ್ಪ ಒಳಹೊಕ್ಕು ನೋಡಿದಾಗ- ತಂದೆಯನ್ನು ಕಳೆದುಕೊಂಡ ಮಕ್ಕಳು, ಪತಿಯನ್ನು ಕಳೆದುಕೊಂಡ ಪತ್ನಿಯ ರೋದನ, ಎದೆಯೆತ್ತರದ ಮಕ್ಕಳು ಯುದ್ಧಭೂಮಿಯಲ್ಲಿ ಶವವಾಗಿ ಮಲಗಿರುವುದನ್ನು ಕಂಡು ಎದೆಯೊಡೆದುಕೊಂಡ ಪಾಲಕರು- ಇವರೆಲ್ಲರ ದೃಷ್ಟಿಯಲ್ಲಿ ಈ ಸಮರ ಎನ್ನುವುದು ದುಃಖದ ಮಡುವಲ್ಲದೆ ಬೇರೇನೂ ಅಲ್ಲ. ಯುದ್ಧದಲ್ಲಿ ಸಾವನ್ನಪ್ಪಿದವರಿಗೆ ಪರಿಹಾರ ಸಿಗಬಹುದು. ಆದರೆ ಹೃದಯವನ್ನು ಇರಿಯುವ ನೋವಿಗೆ ಮದ್ದು ಎಲ್ಲಿದೆ?

‘ವೃದ್ಧರು ಯುದ್ಧವನ್ನು ಘೋಷಿಸುತ್ತಾರೆ. ಆದರೆ ಅದರಲ್ಲಿ ಹೋರಾಡಿ ಸಾಯುವವರು ಯುವಕರು’ಎನ್ನುತ್ತಾರೆ, ಅಮೆರಿಕದ ಮಾಜಿ ಅಧ್ಯಕ್ಷ ಹರ್ಬರ್ಟ್ ಹೂವರ್. ಸಮರದ ಕಾರಣ-ಪರಿಣಾಮಗಳೇನೇ ಇರಲಿ, ಸೈನಿಕರ ದೃಷ್ಟಿಯಿಂದ ನೋಡಿದಾಗ ಬೇರೆಯದೇ ಚಿತ್ರಣ ಕಾಣುತ್ತದೆ. ದೇಶವೊಂದು ಸಮರ ಘೋಷಿಸಿದರೆ ಇವರು ಸಜ್ಜಾಗಲೇಬೇಕಾಗುತ್ತದೆ. ಯುದ್ಧದಲ್ಲಿ ಬೆನ್ನುತೋರಿಸುವುದನ್ನು ಅತ್ಯಂತ ಅವಮಾನಕಾರಕ ಎಂಬುದಾಗಿ ಯೋಧರು ಪರಿಗಣಿಸುತ್ತಾರೆ. ದೇಶಕ್ಕಾಗಿ ಯುದ್ಧ ಮಾಡುವುದನ್ನು ಸೈನಿಕರು ಅಪೂರ್ವ ಅವಕಾಶವೆಂದು ಭಾವಿಸುತ್ತಾರೆ ಮತ್ತು ಈ ಕರ್ತವ್ಯದಲ್ಲಿ ಪ್ರಾಣವನ್ನೂ ಲೆಕ್ಕಿಸುವುದಿಲ್ಲ. ಅಷ್ಟಕ್ಕೂ ಸಾವು ಎದುರಿಗೆ ಬಂದರೆ ಸ್ವಾಗತಿಸಲು ಸಿದ್ಧರಾದಂಥ ಮನಸ್ಥಿತಿಯಲ್ಲಿಯೇ ಸೇನೆಗೆ ಸೇರಬೇಕಾಗುತ್ತದೆ. ಅಳ್ಳೆದೆಯವರಿಗೆ ಇಲ್ಲಿ ಜಾಗವಿಲ್ಲ. ನಮ್ಮ ಭಾರತೀಯ ಸೈನಿಕರ ಸಾಹಸ ಶೂರತನದ ಬಗ್ಗೆ ನೂರಾರು, ಸಾವಿರಾರು ನಿದರ್ಶನಗಳಿವೆ. ಈ ಯಾದಿಗೆ ಇನ್ನಷ್ಟು ವೀರಯೋಧರು ಸೇರುತ್ತಲೇ ಇರುತ್ತಾರೆ. ಇದೊಂದು ನಿರಂತರ ಗಂಗಾಪ್ರವಾಹದಂತೆ.

ಕಾರ್ಗಿಲ್ ಸಮರವೀರರಲ್ಲಿ ಒಬ್ಬರಾದ ಕ್ಯಾಪ್ಟನ್ ವಿಕ್ರಮ್ ಬಾತ್ರಾ ಅವರದೇ ಒಂದು ಉದಾಹರಣೆ ನೀಡುವುದಾದರೆ- ಕಾರ್ಗಿಲ್ ಸಮರ ಸಮಯದಲ್ಲಿ ಕಾಶ್ಮೀರದಲ್ಲಿ ನಡೆದ ಕಠಿಣಾತಿಕಠಿಣ ಸೈನಿಕ ಕಾರ್ಯಾಚರಣೆಯೊಂದರ ನೇತೃತ್ವವನ್ನು ಅವರು ವಹಿಸಿದ್ದರು. ಸಮುದ್ರಮಟ್ಟದಿಂದ 17 ಸಾವಿರ ಅಡಿ ಎತ್ತರದಲ್ಲಿರುವ, ಪಾಯಿಂಟ್-5140 ಶಿಖರವನ್ನು ಮರಳಿ ಗೆಲ್ಲುವಲ್ಲಿ ಅವರು ಮುಖ್ಯ ಪಾತ್ರ ವಹಿಸಿದ್ದರು. ಇದರ ನಂತರದಲ್ಲಿ ಇನ್ನೊಂದು ಕಷ್ಟಕರವಾದ ಪಾಯಿಂಟ್-4874 ಪ್ರದೇಶವನ್ನು ವಶಪಡಿಸಿಕೊಳ್ಳುವ ಯತ್ನದಲ್ಲಿದ್ದಾಗ ಬಾತ್ರಾ ಬಲಿದಾನವಾಗುತ್ತದೆ. ಈ ಕಾರ್ಯಾಚರಣೆಗೆ ಹೊರಡುವ ಮುನ್ನ ಅವರು ತಂದೆಗೆ ಫೋನ್ ಮಾಡಿರುತ್ತಾರೆ. ದುರದೃಷ್ಟವಶಾತ್ ಅದೇ ಅವರ ಕೊನೆಯ ಕರೆಯಾಗುತ್ತದೆ. ‘ಒಂದೋ ನಾನು ತ್ರಿವರ್ಣ ಧ್ವಜವನ್ನು ಆರೋಹಣ ಮಾಡಿ ಬರುತ್ತೇನೆ. ಅದಿಲ್ಲವಾದಲ್ಲಿ, ತ್ರಿವರ್ಣ ಧ್ವಜದಿಂದ ನನ್ನ ದೇಹವನ್ನು ಸುತ್ತಿಸಿಕೊಂಡು ಬರುತ್ತೇನೆ. ಒಟ್ಟಿನಲ್ಲಿ, ನಾನು ಬರುವುದಂತೂ ಖರೆ’ ಎಂಬುದು ಅವರ ಪ್ರಸಿದ್ಧ ಮಾತು. ಅವರನ್ನು ಪರಮವೀರ ಚಕ್ರದಿಂದ ಪುರಸ್ಕರಿಸಲಾಯಿತು.

‘ಯಾರಾದರೂ ನಾನು ಸಾವಿಗೆ ಹೆದರುವುದಿಲ್ಲ ಎಂದು ಹೇಳಿದರೆ, ಒಂದೋ ಅವರು ಸುಳ್ಳು ಹೇಳುತ್ತಿದ್ದಾರೆ ಎಂದರ್ಥ ಅಥವಾ ಅವರು ಗೋರ್ಖಾ ಆಗಿರುತ್ತಾರೆ’ ಎಂದಿದ್ದರು ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣೆಕ್​ಷಾ. ಗೋರ್ಖಾಗಳ ಅಸೀಮ ಧೈರ್ಯವನ್ನು ಅವರು ಬಣ್ಣಿಸಿದ್ದು ಹೀಗೆ. ‘ಒಂದೊಮ್ಮೆ ನನಗೇನಾದರೂ ಆದರೆ ನನ್ನ ಪ್ರೀತಿಪಾತ್ರರು, ಕುಟುಂಬಸ್ಥರು ಅಳುವುದು ಬೇಡ ಎಂದು ಹೇಳು. ಏಕೆಂದರೆ ನಾನು ಭಾರತೀಯ ಸೈನಿಕ. ನಾನು ಹುಟ್ಟಿದ್ದೇ ಸಾಯಲು’. ಇದು-ಪ್ರತಿ ಭಾರತೀಯ ಸೈನಿಕನ ಭಾವನೆ. ಈ ದಿಟ್ಟತನಕ್ಕೆ ಸಲಾಂ ಎನ್ನದೆ ಇರಲಾದೀತೆ!

‘ನಾನು ಸೈನಿಕ. ಎಲ್ಲಿ ಹೇಳಿದರೂ ಯುದ್ಧಮಾಡುತ್ತೇನೆ ಮತ್ತು ಗೆಲ್ಲುತ್ತೇನೆ’ ಎನ್ನುತ್ತಾರೆ, ಅಮೆರಿಕ ಸೈನ್ಯದ ಜನರಲ್ ಆಗಿದ್ದ ಮತ್ತು ಎರಡನೇ ಮಹಾಯುದ್ಧದಲ್ಲಿ ಮುಂಚೂಣಿಯಲ್ಲಿದ್ದ ಜಾರ್ಜ್ ಪ್ಯಾಟನ್. ಇದು ಸೈನಿಕರ ಮನಸ್ಥಿತಿ. ಅವರಿಗೆ ಆಯ್ಕೆಗಳು ಕಡಿಮೆ. ಸೇನೆ ಆದೇಶಿಸಿದರೆ, ಎಂಥದೇ ಸನ್ನಿವೇಶವಾದರೂ ಸರಿ ಯುದ್ಧಕ್ಕೆ ಹೊರಡಲೇಬೇಕು. ಅರ್ಜುನನ ವಿಷಾದಯೋಗಕ್ಕೆ ಅಲ್ಲಿ ಆಸ್ಪದವಿಲ್ಲ. ‘ಯುದ್ಧಕ್ಕೆ ಸದಾ ಸನ್ನದ್ಧವಾಗಿರುವುದು ಜನರನ್ನು ಸುರಕ್ಷಿತ ಭಾವದಲ್ಲಿರಿಸುವ ಅತ್ಯಂತ ಪರಿಣಾಮಕಾರಿ ಮಾರ್ಗ’ ಎನ್ನುತ್ತಾರೆ, ಅಮೆರಿಕದ ಮೊದಲ ಅಧ್ಯಕ್ಷ ಜಾರ್ಜ್ ವಾಷಿಂಗ್ಟನ್. ಯಾವುದೇ ದೇಶ ಸೇನಾಸಬಲವಾಗಿದ್ದರೆ ಮಾತ್ರ ರಕ್ಷಣೆ-ಸುರಕ್ಷತೆ ಸಾಧ್ಯ ಎಂಬ ವಾತಾವರಣ ಇವತ್ತು ಇದೆ. ಅಮೆರಿಕವು ಎಲ್ಲರೂ ತನ್ನ ಮಾತು ಕೇಳಬೇಕು; ಕೇಳದಿದ್ದರೆ ಹುಷಾರ್ ಎಂದು ಹೆದರಿಸುವುದು ಈ ಮಿಲಿಟರಿ ಬಲ ಮತ್ತು ಆರ್ಥಿಕ ಬಲದ ಕಾರಣಕ್ಕಾಗಿ. ಅದರಲ್ಲೂ ಮಿಲಿಟರಿ ಉಪಕರಣಗಳ ವ್ಯವಹಾರ ಲಕ್ಷಾಂತರ ಕೋಟಿ ರೂಪಾಯಿಗಳದ್ದು. ಇಲ್ಲಿ ಕಮಿಷನ್ ವ್ಯವಹಾರವೂ ಜೋರಾಗಿಯೇ ಇದೆ. ಈ ಕಾರಣಕ್ಕಾಗಿ ಕೆಲವರು ಯುದ್ಧ ನಡೆಯಲೆಂದು ಬಯಸುತ್ತಾರೆ; ಶಾಂತಿ ಅವರಿಗೆ ವೈರಿ. ಒಟ್ಟಿನಲ್ಲಿ ಯುದ್ಧ ಮನುಕುಲದ ಆದಿಯಿಂದ ಇದೆ; ದುರದೃಷ್ಟ ಎಂದರೆ, ಬಹುಶಃ ಮಾನವ ಇರುವಷ್ಟು ಕಾಲವೂ ಇರುತ್ತದೆ. ಯುದ್ಧಮುಕ್ತ ವಿಶ್ವವೆಂಬುದು ಸುಂದರ ಕನಸು.

ಕೊನೇ ಮಾತು: ಯುದ್ಧವೆನ್ನುವುದು ರಣರಂಗದಲ್ಲಿ, ಬಹಿರಂಗದಲ್ಲಿ ಮಾತ್ರ ನಡೆಯುವುದಲ್ಲ. ಮಾನವನ ಅಂತರಂಗದೊಳಗೂ ಸದಾ ಒಂದು ಸಮರ ನಡೆದಿರುತ್ತದೆ. ಪ್ರತಿಷ್ಠೆ, ಅಹಂಕಾರ, ಹಮ್ಮು ಇತ್ಯಾದಿ ಜತೆ ಗುದ್ದಾಟ ನಡೆಸುತ್ತಿರಬೇಕಾಗುತ್ತದೆ. ಈ ಯುದ್ಧದಲ್ಲಿ ಗೆದ್ದವನೇ ನಿಜವಿಜಯಿ. ಭಾರತದ ಋಷಿಮುನಿಗಳು, ಪ್ರಾಜ್ಞರು ಹೇಳಿದ್ದು ಈ ಸತ್ಯವನ್ನೇ. ವಿವೇಕಾನಂದರು ಈ ಆಧ್ಯಾತ್ಮಿಕ ಬಲದಿಂದಲೇ ವಿಶ್ವವಿಜೇತರಾಗಿದ್ದೇ ವಿನಾ ಅಸ್ತ್ರಶಸ್ತ್ರಗಳಿಂದಲ್ಲ.

(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)