ನ್ಯೂಸ್

ಸಖತ್​ ಐಡಿಯಾ ಗುರು| ಸಣ್ಣ ವ್ಯಾಪಾರಗಳಿಗೆ ಡಿಜಿಟಲ್ ಸ್ಪರ್ಶ

ರಮೇಶ್​ ಕುಮಾರ್​​ ಬಿ ಎಡಮೋಳೆ

ವರುಷಕೊಂದು ಹೊಸತು ಜನ್ಮ, ಹರುಷಕೊಂದು ಹೊಸತು ನೆಲೆಯು... ಇದು ವರಕವಿ ದ.ರಾ. ಬೇಂದ್ರೆಯವರ ಯುಗಾದಿ ಕವನದಲ್ಲಿರುವ ಆಶಯ. ಅದನ್ನೇ ಈ ಕರೊನಾ ಕಾಲದಲ್ಲಿ ಹೊಸ ಕ್ಯಾಲೆಂಡರ್ ವರ್ಷಕ್ಕೂ ಅನ್ವಯಿಸಬಹುದು. ಕಷ್ಟ-ನಷ್ಟದಿಂದ ಕಂಗೆಟ್ಟಿರುವ ಜನ ಹೊಸ ವರ್ಷದ ಹೊಸ್ತಿಲಲ್ಲಿ ದುಡಿಮೆಯ ಹೊಸ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಅಂಥವರಿಗೆ ನೆರವಾಗಲೆಂದೇ ವಿಜಯವಾಣಿ ವಿವಿಧ ರಂಗಗಳ ಪರಿಣತರನ್ನು ಮಾತನಾಡಿಸಿದೆ. 2021 ನಿಮ್ಮ ಪಾಲಿಗೆ ‘ಯಶಸ್ವಿ ವರ್ಷ’ವಾಗಲು 21 ಸಾಧಕರು ನೀಡಿರುವ 21 ಐಡಿಯಾಗಳು ಇಲ್ಲಿವೆ.

ಸಣ್ಣ ವ್ಯಾಪಾರಗಳಿಗೆ ಡಿಜಿಟಲ್ ಸ್ಪರ್ಶ

ಕರೊನಾದಿಂದಾಗಿ ಗ್ರಾಹಕರು ಆರೋಗ್ಯ-ಸುರಕ್ಷತೆಗೆ ಒತ್ತು ನೀಡುತ್ತಿರುವುದರಿಂದ ಖರೀದಿಯ ಪ್ಯಾಟರ್ನ್ ಬದಲಾಗಿದೆ. ಜನ ಡಿಜಿಟಲ್ ವೇದಿಕೆಗಳನ್ನು ಹೆಚ್ಚೆಚ್ಚು ಅವಲಂಬಿಸುತ್ತಿದ್ದಾರೆ. ಸೇವೆ ನೀಡುವವರಿಗೆ ಮತ್ತು ಪಡೆಯುವವರಿಗೆ ಡಿಜಿಟಲ್ ಮಾಧ್ಯಮವೇ ಸಂಪರ್ಕ ಸೇತುವೆ. ಸಣ್ಣ ವ್ಯಾಪಾರಸ್ಥರಿಗೂ ಈಗ ತಂತ್ರಜ್ಞಾನ ಅನಿವಾರ್ಯ. ಆನ್​ಲೈನ್ ಮೂಲಕ ತಮ್ಮ ಅಸ್ತಿತ್ವ ತೋರಿಸುತ್ತಿದ್ದಾರೆ. ಈ ಪ್ರಕ್ರಿಯೆ ಚುರುಕುಗೊಳಿಸಿ ಅದಕ್ಕೆ ವೇಗ ನೀಡುವಲ್ಲಿ ಇ- ಕಾಮರ್ಸ್​ನ ಪಾತ್ರ ನಿರ್ಣಾಯಕ. ಬೇಡಿಕೆ- ಪೂರೈಕೆಯಲ್ಲಿನ ಅಂತರ ನಿವಾರಿಸಲು ಮತ್ತು ಭೌಗೋಳಿಕ ಮಿತಿಯನ್ನು ಮೀರಿ ಗ್ರಾಹಕರನ್ನು ತಲುಪಲು ಇ-ಕಾಮರ್ಸ್ ಸಹಾಯಕ. ಹೊಸ ಗ್ರಾಹಕರನ್ನು ತಲುಪಲು, ಹೊಸ ಬ್ರಾಂಡ್​ಗಳನ್ನು ರೂಪಿಸಲು ಇ-ಕಾಮರ್ಸ್ ಬೇಕೇಬೇಕು. ದೇಶಾದ್ಯಂತ ಈಗಾಗಲೇ 10 ಲಕ್ಷ ಸಣ್ಣ ಮತ್ತು ಮಧ್ಯಮ ವ್ಯಾಪಾರಿಗಳು (ಎಸ್​ಎಂಬಿ) ಅಮೆಜಾನ್​ನೊಂದಿಗೆ ಕೈಜೋಡಿಸಿರುವುದು ಇದಕ್ಕೆ ನಿದರ್ಶನ. ಇ-ಕಾಮರ್ಸ್​ನ ಪಿಕಪ್ ಪಾಯಿಂಟ್​ಗಳಾಗಿ, ಲಾಜಿಸ್ಟಿಕ್ಸ್ ಪಾಲುದಾರರಾಗಿ ಈ ಮಳಿಗೆಗಳು ಕೆಲಸ ಮಾಡುತ್ತಿದ್ದು, ಕೈತುಂಬ ಕಾಸು ಮಾಡಿಕೊಳ್ಳುತ್ತಿವೆ. ಇವು ಇ-ಕಾಮರ್ಸ್ ಕ್ಷೇತ್ರದಲ್ಲಿನ ಕೆಲವು ಸಾಧ್ಯತೆಗಳಷ್ಟೇ. ಇಂತಹುದೇ ನೂರಾರು ಉದ್ಯಮಾವಕಾಶಗಳು ಇ-ಕಾಮರ್ಸ್​ನಲ್ಲಿ ಹೇರಳವಾಗಿವೆ.

| ಚೇತನ್ ಕೃಷ್ಣಸ್ವಾಮಿ ಉಪಾಧ್ಯಕ್ಷ (ಸಾರ್ವಜನಿಕ ನೀತಿ), ಅಮೆಜಾನ್ ಇಂಡಿಯಾ