ನ್ಯೂಸ್

ಹಣಪಾವತಿ ಡಿಜಿಟಲ್ ಪಾಲು ಶೇ. 99.7! ಚೆಕ್ ಮೂಲಕ ಪೇಮೆಂಟ್ ಶೇ. 2.3ಕ್ಕೆ ಇಳಿಕೆ | ಆರ್​ಬಿಐ ವರದಿ

ಮುಂಬೈ: 2024ರ ಕ್ಯಾಲೆಂಡರ್ ವರ್ಷದಲ್ಲಿ ಒಟ್ಟು ಹಣ ಪಾವತಿಯಲ್ಲಿ ಡಿಜಿಟಲ್ ಪೇಮೆಂಟ್​ನ ಪಾಲು ಶೇಕಡ 99.7ರಷ್ಟಿದ್ದು, ಚೆಕ್ ಮೂಲಕ ಮಾಡುವ ಪೇಮೆಂಟ್​ನ ಪ್ರಮಾಣ ಕೇವಲ ಶೇ. 2.3ರಷ್ಟಾಗಿದೆ. ಪ್ರಸಕ್ತ ವರ್ಷದ ಪ್ರಥಮಾರ್ಧದಲ್ಲೂ ಈ ಟ್ರೆಂಡ್ ಮುಂದುವರಿದಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಗುರುವಾರ ಬಿಡುಗಡೆ ಮಾಡಿದ ವರದಿ ತಿಳಿಸಿದೆ.

ಹಣಪಾವತಿಗೆ ಈಗ ನೆಫ್ಟ್, ಐಎಂಪಿಎಸ್, ಆರ್​ಟಿಜಿಎಸ್, ನಾಚ್, ಯುಪಿಐ, ಡೆಬಿಟ್, ಕ್ರೆಡಿಟ್ ಕಾರ್ಡ್, ಪ್ರಿಪೇಡ್ ಮುಂತಾಗಿ ಅನೇಕ ಡಿಜಿಟಲ್ ಮಾರ್ಗಗಳಿವೆ. ಜೊತೆಗೆ ಬಹುಕಾಲದಿಂದ ನಡೆದುಕೊಂಡು ಬಂದಿರುವ ಚೆಕ್ ವ್ಯವಸ್ಥೆಯೂ ಇದೆ. ಇತ್ತೀಚಿನ ವರ್ಷಗಳಲ್ಲಿ ಡಿಜಿಟಲ್ ಪೇಮೆಂಟ್ ಜಾಸ್ತಿಯಾಗಿದ್ದು, ಚೆಕ್ ಮೂಲಕ ಪಾವತಿ ತೀರಾ ಕಡಿಮೆಯಾಗಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

2019ರಲ್ಲಿ 3,248 ಕೋಟಿಯಷ್ಟಿದ್ದ ಪೇಮೆಂಟ್ ವಹಿವಾಟುಗಳ ಸಂಖ್ಯೆ 2024ರಲ್ಲಿ 20,849 ಕೋಟಿಗೆ ಬೆಳೆದಿದೆ. ಇದರಲ್ಲಿನ ಮೊತ್ತ 1,775 ಲಕ್ಷ ಕೋಟಿ ರೂ.ನಿಂದ 2,830 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. 2025ರ ಮೊದಲ 6 ತಿಂಗಳಲ್ಲಿ ವಹಿವಾಟುಗಳ ಸಂಖ್ಯೆ 12,549 ಕೋಟಿಯಷ್ಟಾಗಿದ್ದು, ಮೊತ್ತ 1,572 ಲಕ್ಷ ಕೋಟಿ ರೂ. ಆಗಿದೆ. ಪೇಮೆಂಟ್​ನ ಪ್ರಮಾಣ ಇಷ್ಟು ಏರಿರುವುದಕ್ಕೆ ಡಿಜಿಟಲ್ ಪಾವತಿಯೇ ಬಹುತೇಕ ಕಾರಣವಾಗಿದೆ.

2019ರಲ್ಲಿ ಒಟ್ಟು ಪೇಮೆಂಟ್​ನಲ್ಲಿ ಡಿಜಿಟಲ್​ನ ಪಾಲು ವಹಿವಾಟುಗಳ ಸಂಖ್ಯೆ ದೃಷ್ಟಿಯಿಂದ ಶೇ. 96.7ರಷ್ಟು ಮತ್ತು ಮೊತ್ತದ ದೃಷ್ಟಿಯಿಂದ ಶೇ. 95.5ರಷ್ಟಿತ್ತು. 2024ರ ವೇಳೆಗೆ ಇದು ಕ್ರಮವಾಗಿ ಶೇ. 99.7 ಮತ್ತು ಶೇ. 97.5ಕ್ಕೆ ಏರಿಕೆಯಾಗಿದೆ. ಈ ಪ್ರವೃತ್ತಿ 2025ರ ಮೊದಲಾರ್ಧದಲ್ಲಿ ಮುಂದುವರೆದಿದ್ದು, ಕ್ರಮವಾಗಿ ಶೇ. 99.8 ಮತ್ತು ಶೇ. 97.7ರಷ್ಟಾಗಿದೆ. 2025ರ ಮೊದಲಾರ್ಧದಲ್ಲಿ ನಡೆದ ಪೇಮೆಂಟ್ ವಹಿವಾಟುಗಳಲ್ಲಿ ಯುಪಿಐ ಶೇ. 85ರಷ್ಟು ದೊಡ್ಡ ಪಾಲನ್ನು ಹೊಂದಿದೆ. ಮೊತ್ತದ ದೃಷ್ಟಿಯಿಂದ ಇದು ಶೇ. 9ರಷ್ಟು ಪಾಲನ್ನು ಒಳಗೊಂಡಿದೆ.

ಯುಪಿಐ ವಹಿವಾಟುಗಳ ಸಂಖ್ಯೆ 2019ರಲ್ಲಿ 1,079 ಕೋಟಿ ಇದ್ದದ್ದು 2024ರಲ್ಲಿ 17,221 ಕೋಟಿಗೆ ಏರಿದೆ. ಇದರಲ್ಲಿನ ಒಟ್ಟು ಮೊತ್ತ 18.4 ಲಕ್ಷ ಕೋಟಿ ರೂ.ನಿಂದ 246.8 ಲಕ್ಷ ಕೋಟಿ ರೂ.ಗೆ ಏರಿದೆ. 2025ರ ಮೊದಲಾರ್ಧದಲ್ಲಿ, 10,637 ಕೋಟಿ ಯುಪಿಐ ವಹಿವಾಟುಗಳು ನಡೆದಿದ್ದು, ಇದರಲ್ಲಿ 143.3 ಲಕ್ಷ ಕೋಟಿ ರೂ. ಮೊತ್ತ ಪಾವತಿಯಾಗಿದೆ. ನೆಫ್ಟ್ ವಹಿವಾಟುಗಳು 2019ರಿಂದ 2024ರವರೆಗಿನ ಅವಧಿಯಲ್ಲಿ 262.2 ಕೋಟಿಯಿಂದ 926.8 ಕೋಟಿಗೆ ಏರಿದ್ದು ಮೂರು ಪಟ್ಟು ಹೆಚ್ಚಾಗಿವೆ. ಮೊತ್ತ 232.9 ಲಕ್ಷ ಕೋಟಿ ರೂ.ನಿಂದ 432.8 ಲಕ್ಷ ಕೋಟಿ ರೂ.ಗೆ ಏರಿದೆ.