ನವದೆಹಲಿ: ಭಾರತದಲ್ಲಿ ಡಿಜಿಟಲ್ ಪಾವತಿ ಹೆಚ್ಚಿಸಬೇಕೆಂಬ ಕೇಂದ್ರ ಸರ್ಕಾರ ಮತ್ತು ಆರ್ಬಿಐ ಪ್ರಯತ್ನ ಸಫಲತೆಯೆಡೆಗೆ ಸಾಗುತ್ತಿದೆ. ಆರ್ಬಿಐ ನೀಡಿರುವ ಇತ್ತೀಚಿನ ಡೇಟಾ ಪ್ರಕಾರ ಡಿಜಿಟಲ್ ಪಾವತಿ ಐದು ವರ್ಷಗಳಲ್ಲಿ 6 ಪಟ್ಟು ಹೆಚ್ಚಾಗಿದೆ.
ಕಳೆದ ಕೆಲವು ವರ್ಷಗಳಲ್ಲಿ ಆನ್‌ಲೈನ್ ವಹಿವಾಟಿನ ಮೇಲೆ ವಿಧಿಸಲಾಗುತ್ತಿದ್ದ ಶುಲ್ಕಗಳು ಸಹ ಗಣನೀಯವಾಗಿ ಕಡಿಮೆಯಾಗಿವೆ. ಸ್ಮಾರ್ಟ್ಫೋನ್ ಮತ್ತು ಡಿಜಿಟಲ್ ವಹಿವಾಟಿನ ಮೇಲೆ ಯುವಕರ ಪ್ರಭಾವ ಹೆಚ್ಚಾಗುತ್ತಿರುವುದರಿಂದ ಡಿಜಿಟಲ್ ಪಾವತಿ ಹೆಚ್ಚಾಗುತ್ತಿದೆ ಎಂದು ಆರ್ಬಿಐ ತಿಳಿಸಿದೆ.
2015-16 ರಿಂದ 2019-20ರ ನಡುವಿನ ಅವಧಿಯಲ್ಲಿ ಡಿಜಿಟಲ್ ಪಾವತಿ ವೇಗವಾಗೆ ಬೆಳವಣಿಗೆಯಾಗಿದೆ. 2016 ಮಾರ್ಚ್ ತಿಂಗಳಲ್ಲಿ 593.61 ಕೋಟಿ ಇದ್ದ ಡಿಜಿಟಲ್ ಪಾವತಿ 2020 ಮಾರ್ಚ್ಗೆ 3434.56 ಕೋಟಿಗೆ ಏರಿಕೆಯಾಗಿದೆ. ಐದೇ ವರ್ಷದಲ್ಲಿ 5.8 ಬಾರಿ ಹೆಚ್ಚಳವಾಗಿದ್ದು, ಈ ಸಮಯದಲ್ಲಿ ಡಿಜಿಟಲ್ ವಹಿವಾಟು 920.38 ಲಕ್ಷ ಕೋಟಿ ರೂ. ನಿಂದ 1,623.05 ಲಕ್ಷ ಕೋಟಿ ರೂ.ವರೆಗೆ ಹೆಚ್ಚಳವಾಗಿದೆ.
ಕರೊನಾ ಲಾಕ್ಡೌನ್ ಸಮಯದಲ್ಲೂ ಡಿಜಿಟಲ್ ವಹಿವಾಟು ವೇಗವಾಗಿ ಬೆಳೆದಿದೆ. ಡಿಜಿಟಲ್ ವಹಿವಾಟುವಿನ ಮೇಲೆ ಆರ್ಬಿಐ ಗಣನೀಯವಾಗಿ ಕಡಿಮೆ ಮಾಡಿರುವುದು ಮತ್ತು 24 ಗಂಟೆಗಳ ಎನ್ಇಎಫ್ಟಿ ಸೌಲಭ್ಯ ನೀಡಿರುವುದು ಬೆಳವಣಿಗೆಗೆ ಕಾರಣವಾಗಿದೆ. (ಏಜೆನ್ಸೀಸ್)