ನ್ಯೂಸ್

ಕುವೆಂಪು ಕೃತಿಗಳು ಒಂದೇ ದಿನಕ್ಕೆ ಆನ್​ಲೈನ್​ನಲ್ಲಿ ಖರೀದಿಗೆ ಲಭ್ಯ

ಬೆಂಗಳೂರು: ಹಂಪಿ ಕನ್ನಡ ವಿಶ್ವವಿದ್ಯಾಲಯ ಪ್ರಕಟಿಸಿರುವ ರಾಷ್ಟ್ರಕವಿ ಕುವೆಂಪು ಅವರ ಸಮಗ್ರ ಸಾಹಿತ್ಯದ 12 ಕೃತಿಗಳ ಡಿಜಿಟಲ್​ ಆವೃತ್ತಿ ಲೋಕಾರ್ಪಣೆಯಾದ ಒಂದೇ ದಿನದಲ್ಲಿ ಆನ್​ಲೈನ್​ನಲ್ಲಿ ಲಭ್ಯವಾಗುತ್ತಿವೆ.

ಕನ್ನಡ ರಾಜ್ಯೋತ್ಸವದ ಕೊಡುಗೆಯಾಗಿ ಉಪ ಮುಖ್ಯಮಂತ್ರಿ ಡಾ. ಸಿ.ಎನ್​. ಅಶ್ವತ್ಥನಾರಾಯಣ ಭಾನುವಾರ ಈ ಕೃತಿಗಳನ್ನು ಲೋಕಾರ್ಪಣೆ ಮಾಡಿದ್ದರು. ಗೂಗಲ್​ಪ್ಲೇ ಬುಕ್​ನಲ್ಲಿ ಈ ಕೃತಿಗಳು ಮಾರಾಟಕ್ಕಿದ್ದು, ಸಾಹಿತ್ಯಾಸಕ್ತರೂ ಖರೀದಿ ಮಾಡಬಹುದು. ರಾಜ್ಯೋತ್ಸವ ಪ್ರಯುಕ್ತ ಮುದ್ರಿತ ಕೃತಿಗಳಿಗೆ ಶೇ.50 ರಿಯಾಯಿತಿಯನ್ನು ಹಂಪಿ ವಿಶ್ವವಿದ್ಯಾಲಯ ಈಗಾಗಲೇ ಘೋಷಿಸಿದೆ.

ಹಂಪಿ ವಿವಿಯ ಕನ್ನಡ ವಿಭಾಗದ ಪ್ರೊ. ಕೆ.ಸಿ.ಶಿವಾರೆಡ್ಡಿ ಈ ಸಂಪುಟಗಳನ್ನು ಸಂಪಾದಿಸಿದ್ದು, ಮುದ್ರಣ ಆವೃತ್ತಿಯೂ ಮಾರಾಟಕ್ಕಿದೆ. ವಿವಿಯ ಬೆಂಗಳೂರು ಕೇಂದ್ರದಲ್ಲಿ ಈ ಕೃತಿಗಳು ದೊರಕುತ್ತವೆ.

ಆನ್​ಲೈನ್​ನಲ್ಲಿ ಖರೀದಿಸಲು ಗೂಗಲ್​ಪ್ಲೇ ಬುಕ್​ಗೆ ಬಂದು ಕುವೆಂಪು ಬುಕ್ಸ್​ ಎಂದು ಟೈಪ್​ ಮಾಡಿದರೆ ಸಾಕು, ಅಷ್ಟು ಸಂಪುಟಗಳು ತೆರೆದುಕೊಳ್ಳುತ್ತವೆ. ಆಸಕ್ತರು ಖರೀದಿಗೂ ಮುನ್ನ ಅಷ್ಟೂ ಸಂಪುಟಗಳ ಶೇ.20 ಭಾಗವನ್ನು ಆನ್​ಲೈನ್​ನಲ್ಲಿಯೇ ಓದಬಹುದು. ಉಳಿದ ಭಾಗವನ್ನು ಓದಬೇಕಾದರೆ ಪುಸ್ತಕಗಳನ್ನು ಖರೀದಿ ಮಾಡಬೇಕು.

ಡಿಜಿಟಲ್​ ವರ್ಷನ್​ ಓದಲು ಅತ್ಯಂತ ವೈಜ್ಞಾನಿಕವಾಗಿದ್ದು, ಸುಲಭವೂ ಆಗಿದೆ ಎಂದು ಡಾ.ಅಶ್ವತ್ಥನಾರಾಯಣ ಅಭಿಪ್ರಾಯಪಟ್ಟಿದ್ದಾರೆ.