ನ್ಯೂಸ್

ಡಿಜಿಟಲ್ ಖಾತಾ 5 ಸಾವಿರ ಕೋಟಿ ಖೋತಾ!

ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು

ಸ್ಥಿರಾಸ್ತಿಗಳ ದಸ್ತಾವೇಜು ನೋಂದಣಿಗೆ ಡಿಜಿಟಲ್ ಖಾತಾ (ಇ-ಖಾತಾ) ಕಡ್ಡಾಯ ಮಾಡಿರುವುದರಿಂದ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಸಂಗ್ರಹ ಇಳಿಕೆಯಾಗಿ ಬರೋಬ್ಬರಿ 5 ಸಾವಿರ ಕೋಟಿ ರೂ. ಖೋತಾ ಆಗುವ ಆತಂಕ ಎದುರಾಗಿದೆ. ರಾಜ್ಯ ಸರ್ಕಾರದ ಬೊಕ್ಕಸ ತುಂಬುವಲ್ಲಿ ಪ್ರಮುಖ ಪಾತ್ರವಹಿಸುತ್ತಿರುವ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಿಂದ ರಾಜಸ್ವ ಸಂಗ್ರಹ ಕಡಿಮೆಯಾಗುವ ಸಾಧ್ಯತೆ ಗೋಚರಿಸಿದೆ. ಇದರಿಂದಾಗಿ 5 ಗ್ಯಾರಂಟಿ ಯೋಜನೆಗಳ ಮೇಲೂ ವ್ಯತಿರಿಕ್ತ ಪರಿಣಾಮ ಬೀರುವ ಆತಂಕ ಎದುರಾಗಿದೆ.

2023-24ನೇ ಸಾಲಿನಲ್ಲಿ 25 ಸಾವಿರ ಕೋಟಿ ರೂ. ರಾಜಸ್ವ ಸಂಗ್ರಹ ಟಾರ್ಗೆಟ್ ನೀಡಲಾಗಿತ್ತು. ಕೊನೆಗೆ 20,500 ಸಾವಿರ ಕೋಟಿ ರೂ. ತಲುಪಲಷ್ಟೇ ಸಾಧ್ಯವಾಯಿತು. ಇದೀಗ 2024-25ನೇ ಸಾಲಿನಲ್ಲಿ 26 ಸಾವಿರ ಕೋಟಿ ರೂ. ಗುರಿ ನೀಡಿದ್ದು, ಆಗಸ್ಟ್ ಅಂತ್ಯಕ್ಕೆ 9,827 ಕೋಟಿ ರೂ.(ಶೇ.37.80) ಸಂಗ್ರಹವಾಗಿದೆ. ಮುಂದಿನ ಆರು ತಿಂಗಳ ಅವಧಿಯಲ್ಲಿ 26 ಸಾವಿರ ಕೋಟಿ ರೂ. ಗುರಿ ಮುಟ್ಟಲು ಕಷ್ಟಸಾಧ್ಯವಾಗಿದೆ. ನಿವೇಶನ, ಕಟ್ಟಡ, ಮನೆ, ವಿಲ್ಲಾ, ್ಲ್ಯಾಟ್ ಸೇರಿ ಸ್ಥಿರಾಸ್ತಿಗಳ ನೋಂದಣಿಗೆ ಸೋಮವಾರದ (ಅ7) ನಂತರ ಡಿಜಿಟಲ್ ಖಾತಾ ಕಡ್ಡಾಯ ಮಾಡಲಾಗುತ್ತಿದೆ. ಹೀಗಾಗಿ ಸಬ್ ರಿಜಿಸ್ಟ್ರಾರ್ ಕಚೇರಿಯ ಕಾವೇರಿ 2.0 ಸ್‌ಟಾವೇರ್‌ನಲ್ಲಿ ಭೌತಿಕ ಅಥವಾ ಕೈಬರಹದ ಖಾತಾಗಳನ್ನು ಅಪ್‌ಲೋಡ್‌ಗೆ ಅವಕಾಶವೇ ಇರುವುದಿಲ್ಲ. ಕೇವಲ ಡಿಜಿಟಲ್ ಖಾತಾ ಇದ್ದರಷ್ಟೇ ರಿಜಿಸ್ಟ್ರೇಷನ್‌ಗೆ ಅರ್ಜಿ ಸಲ್ಲಿಸಬಹುದು.

ಬಿಡಿಎ, ಸಕ್ಷಮ ಪ್ರಾಧಿಕಾರದಿಂದ ಅನುಮೋದಿತ ಲೇಔಟ್ ಆಗಿದ್ದರೂ ಮತ್ತು ಎ ಖಾತಾ ಇದ್ದರೂ ಡಿಜಿಟಲ್ ಖಾತಾ ಕಡ್ಡಾಯವಾಗಿದೆ. ಇದರಿಂದ ಸಬ್ ರಿಜಿಸ್ಟ್ರಾರ್‌ನಲ್ಲಿ ರಿಜಿಸ್ಟ್ರೇಷನ್ ಶೇ.70 ಭಾಗ ಸ್ಥಗಿತವಾಗಲಿದೆ. ಬೆಂಗಳೂರು, ಮೈಸೂರು, ಶಿವಮೊಗ್ಗ, ಹುಬ್ಬಳ್ಳಿ-ಧಾರವಾಡ, ಮಂಗಳೂರು ಸೇರಿ ಮಹಾನಗರ ಮತ್ತು ಜಿಲ್ಲಾ, ತಾಲೂಕು ಕೇಂದ್ರಗಳ ಸುತ್ತಮುತ್ತ ರೆವಿನ್ಯೂ ಬಡಾವಣೆಗಳು ನಿರ್ಮಾಣವಾಗಿವೆ. ಈ ಸೈಟ್‌ಗಳಿಗೆ ಸಣ್ಣ ಮತ್ತು ಮಧ್ಯಮ ವರ್ಗದ ಜನರೇ ಹೆಚ್ಚಿನ ಗ್ರಾಹಕರು. ಅನುಮೋದಿತ ಲೇಔಟ್‌ಗಳಲ್ಲಿ ಹೆಚ್ಚಿನ ಬೆಲೆ ಇರುವ ಕಾರಣಕ್ಕೆ ಬಹುತೇಕರು ರೆವಿನ್ಯೂ ಲೇಔಟ್‌ಗಳತ್ತ ಮುಖ ಮಾಡುತ್ತಿದ್ದರು. ಈ ಸೈಟ್‌ಗಳ ನೋಂದಣಿಯಿಂದಲೇ ಇಲಾಖೆಗೆ ಪ್ರತಿ ವರ್ಷ ಐದಾರು ಸಾವಿರ ರೂ. ಕೋಟಿ ರೂಪಾಯಿ ರಾಜಸ್ವ ಸಂಗ್ರಹ ಆಗುತ್ತಿತ್ತು. ರೆವಿನ್ಯೂ ಸೈಟ್‌ಗಳಿಗೆ ಡಿಜಿಟಲ್ ಖಾತಾ ನೀಡುವುದರ ಬಗ್ಗೆ ಸ್ಪಷ್ಟತೆ ಇಲ್ಲದೆ ರಿಜಿಸ್ಟ್ರೇಷನ್ ಬಂದ್ ಆಗಿದ್ದು, ರಾಜಸ್ವ ಸಂಗ್ರಹ ಖೋತಾ ಆಗಲಿದೆ ಎಂಬುದು ಕಂದಾಯ ಅಧಿಕಾರಿಗಳು ಅಭಿಪ್ರಾಯವಾಗಿದೆ.

ಎ ಖಾತಾದಿಂದಲೂ ನಷ್ಟ

ಬಿಡಿಎ, ಕೆಎಚ್‌ಬಿ ಮತ್ತು ಸಕ್ಷಮ ಪ್ರಾಧಿಕಾರದಿಂದ ಅನುಮೋದಿತ ಬಡಾವಣೆ, ಅಪಾರ್ಟ್‌ಮೆಂಟ್ ಮತ್ತು ವಿಲ್ಲಾಗಳಿಗೂ ಸರ್ಕಾರದಿಂದ ಡಿಜಿಟಲ್ ಖಾತಾ ವಿತರಿಸಿಲ್ಲ. ಇತ್ತೀಚಿನ ಸ್ಥಿರಾಸ್ತಿಗೆ ಮಾತ್ರವೇ ಡಿಜಿಟಲ್ ಖಾತಾ ವಿತರಿಸಲಾಗಿದೆ. ಹತ್ತಾರು ವರ್ಷಗಳ ಹಿಂದೆ ಸೈಟ್, ್ಲ್ಯಾಟ್‌ಗಳನ್ನು ಖರೀದಿ ಮಾಡಿದವರ ಬಳಿ ಕೈಬರಹದ ಎ ಖಾತಾ ಮಾತ್ರ ಇದೆ. ಇವರು ಸಹ ಕ್ರಯ, ದಾನ, ವಿಲ್ ಅಥವಾ ಶೈಕ್ಷಣಿಕ ಸಾಲ, ಕಟ್ಟಡ ಮೇಲಿನ ಸಾಲ ಮತ್ಯಾವುದೇ ಕಷ್ಟ ಕಾಲಕ್ಕೆ ಬಳಸಲು ಡಿಜಿಟಲ್ ಖಾತಾ ಇಲ್ಲದೆ ವ್ಯವಹಾರವೇ ನಡೆಸಲು ಸಾಧ್ಯವಿಲ್ಲ. ಆದರಿಂದ ಎ ಖಾತಾ ಇದ್ದ ಆಸ್ತಿಗಳ ರಿಜಿಸ್ಟ್ರೇಷನ್ ಇಲ್ಲದೆಯೂ ಸರ್ಕಾರಕ್ಕೆ ರಾಜಸ್ವ ಸಂಗ್ರಹ ಕಡಿಮೆಯಾಗಲಿದೆ.

ಇ-ಸ್ವತ್ತಿನಲ್ಲೂ ಬಿ ಖಾತಾ ವಿತರಿಸಿ

ಕರ್ನಾಟಕ ಮುನ್ಸಿಪಾಲ್ಟಿ ತೆರಿಗೆ (ತಿದ್ದುಪಡಿ) ನಿಯಮ 2024ಕ್ಕೆ ತಿದ್ದುಪಡಿ ತಂದು ಅಧಿಕೃತ ಸ್ಥಿರಾಸ್ತಿಗಳಿಗೆ ಾರ್ಮ್ 3ಎ ಮತ್ತು ಅನಧಿಕೃತ ಸ್ಥಿರಾಸ್ತಿಗಳಿಗೆ ಾರ್ಮ್ 3ಬಿ ಖಾತಾ ವಿತರಿಸಲು ನಿರ್ಧರಿಸಲಾಗಿದೆ. ಬಿಬಿಎಂಪಿಯಲ್ಲಿ ಈಗಾಗಲೇ ಎ ಮತ್ತು ಬಿ ಖಾತಾ ನೀಡಲಾಗುತ್ತಿದೆ. ಇದರಿಂದ 12 ಮಹಾನಗರ ಪಾಲಿಕೆ, 57 ನಗರಸಭೆಗಳು, 116 ಪುರಸಭೆಗಳು ಮತ್ತು 97 ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಸ್ಥಿರಾಸ್ತಿಗಳಿಗೆ ಇ-ಆಸ್ತಿ ತಂತ್ರಾಂಶದಲ್ಲಿ 3ಎ ಮತ್ತು 3ಬಿ ಡಿಜಿಟಲ್ ಖಾತಾ ಸಿಗಲಿದೆ. ರಾಜ್ಯದಲ್ಲಿನ 5,975 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೈಟ್, ಮನೆ, ಕಟ್ಟಡ ಇನ್ನಿತರ ರೆವಿನ್ಯೂ ಸೈಟ್‌ಗಳಿಗೆ ಮಾತ್ರ ಬಿ-ಖಾತಾ ನೀಡುವ ಬಗ್ಗೆ ಕ್ರಮ ಕೈಗೊಂಡಿಲ್ಲ. ಇ-ಸ್ವತ್ತು ತಂತ್ರಾಂಶದಲ್ಲಿ ಕೇವಲ ಗ್ರಾಮಠಾಣಾ ಮತ್ತು ಅನುಮೋದಿತ ಬಡಾವಣೆಗಳ ಆಸ್ತಿಗಳಿಗೆ ಮಾತ್ರ ಎ ಖಾತಾ ಆಧಾರದ ಮೇಲೆ ಡಿಜಿಟಲ್ ಖಾತಾ ವಿತರಿಸಲಾಗುತ್ತಿದೆ. ಆದರಿಂದ ರೆವಿನ್ಯೂ ಸೈಟ್‌ನಲ್ಲಿ ನಿರ್ಮಾಣ ಆಗಿರುವ ಆಸ್ತಿಗೂ ಇ-ಸ್ವತ್ತಿನಲ್ಲಿ ಡಿಜಿಟಲ್ ಖಾತಾ ನೀಡಬೇಕೆಂಬುದು ಗ್ರಾಮೀಣಾ ಭಾಗದ ಜನರ ಒತ್ತಾಯವಾಗಿದೆ. ಇದರಿಂದ ಗ್ರಾಮ ಪಂಚಾಯಿತಿಗಳಿಗೆ ತೆರಿಗೆ ಸಂಗ್ರಹ ಹಾಗೂ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಸಹ ಹೆಚ್ಚಾಗಲಿದೆ. ಇಲ್ಲವಾದರೆ, ರಾಜಸ್ವ ಸಂಗ್ರಹದ ಮೇಲೆ ದುಷ್ಪರಿಣಾಮ ಬೀರಲಿದೆ.

ಖಾತಾ ನೀಡಿ ಜಾರಿಗೆ ತನ್ನಿ

ಇ-ಸ್ವತ್ತು ಮತ್ತು ಇ-ಆಸ್ತಿ ತಂತ್ರಾಂಶದಲ್ಲಿ ಸ್ಥಿರಾಸ್ತಿಗಳಿಗೆ ಮೊದಲು ಎ ಮತ್ತು ಬಿ ಖಾತಾಗಳನ್ನು ನಿಗದಿತ ಸಮಯದಲ್ಲಿ ವಿತರಿಸಬೇಕೆಂಬ ಕೂಗು ಕೇಳಿಬಂದಿದೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿ, ಸಿಬ್ಬಂದಿಗೆ ತರಬೇತಿ ಸಹ ಅಗತ್ಯವಿದೆ. ಆನಂತರ ಹಂತಹಂತವಾಗಿ ರಿಜಿಸ್ಟ್ರೇಷನ್‌ಗೆ ಡಿಜಿಟಲ್ ಖಾತಾ ಕಡ್ಡಾಯ ಮಾಡಿದರೆ ಒಳಿತು. ದಸ್ತಾವೇಜು ನೋಂದಣಿಗೆ ಪ್ರಸ್ತುತ ಆಧಾರ್, ಪ್ಯಾನ್ ಮತ್ತು ಪಾಸ್‌ಪೋರ್ಟ್ ಕಡ್ಡಾಯ ಮಾಡಿದ ಪರಿಣಾಮ ಭೂಗಳ್ಳರಿಗೆ ಕಡಿವಾಣ ಬಿದ್ದಿದೆ. ನಕಲಿ ದಾಖಲೆ ಸಲ್ಲಿಸಿ ಭೂ ಕಬ್ಜ ಮಾಡುವ ಸಂಖ್ಯೆಯೂ ಇಳಿಮುಖವಾಗುತ್ತಿದೆ.