ನವದೆಹಲಿ: ಕರೊನಾ ಲಾಕ್‌ಡೌನ್ ಸಮಯದಲ್ಲಿ ಉದಯ್‌ಪುರ ಮೂಲದ ದಿಗ್ವಿಜಯ್ ಸಿಂಗ್ ( Dighvijay Singh ) ಎಂಬ ಯುವಕ ಚಾಕೊಲೇಟ್ ತಯಾರಿಸಲು ಪ್ರಾರಂಭಿಸಿದರು. ಅದನ್ನೇ ಹವ್ಯಾಸವನ್ನಾಗಿ ಮಾಡಿಕೊಂಡ ಆತ ಇಂದು ಕೋಟ್ಯಂತರ ರೂಪಾಯಿ ಗಳಿಸುವ ಮೂಲಕ ಜೀವನದಲ್ಲಿ ಯಶಸ್ಸಿನ ಸಿಹಿ ಸವಿಯುತ್ತಿದ್ದಾನೆ.
ಅಂದಹಾಗೆ ದಿಗ್ವಿಜಯ್ ಸಿಂಗ್ ವಯಸ್ಸು ಕೇವಲ 20 ವರ್ಷ. ಚಾಕೊಲೇಟ್ ಮಾಡುವ ಕಲೆಯನ್ನು ಯೂಟ್ಯೂಬ್ ನೋಡಿ ಕಲಿತರು. ತಮ್ಮ ಉತ್ಪನ್ನಗಳನ್ನು ತಮ್ಮದೇ ಬ್ರಾಂಡ್ ಹೆಸರಿನಲ್ಲಿ ಮಾರಾಟ ಮಾಡುತ್ತಾರೆ. ಈ ಕಂಪನಿಯು ಈಗ ದೇಶಾದ್ಯಂತ ಚಾಕೊಲೇಟ್‌ಗಳನ್ನು ಮಾರಾಟ ಮಾಡುತ್ತಿದೆ. ದಿಗ್ವಿಜಯ್ ಸಿಂಗ್ ಅವರ ಯಶಸ್ಸಿನ ಪಯಣವನ್ನು ನಾವೀಗ ಸಂಪೂರ್ಣವಾಗಿ ತಿಳಿಯೋಣ.
ದಿಗ್ವಿಜಯ್ ಸಿಂಗ್ ಅವರ ಈ ಯಶೋಗಾಥೆಯು ಹವ್ಯಾಸವನ್ನು ಹೇಗೆ ವ್ಯಾಪಾರವಾಗಿ ಪರಿವರ್ತಿಸಬಹುದು ಎಂಬುದನ್ನು ಪ್ರೇರೇಪಿಸುತ್ತದೆ. ಈ ಹುಡುಗನ ಪಯಣ ಶುರುವಾದದ್ದು ಕರೊನಾ ಮಹಾಮಾರಿ ಸಮಯದಲ್ಲಿ. ಲಾಕ್‌ಡೌನ್‌ನಿಂದಾಗಿ ಅವರು ತಮ್ಮ ಅಮೂಲ್ಯ ಸಮಯವನ್ನು ಹೊಸದನ್ನು ಕಲಿಯಲು ಬಳಸಿದರು. ಅನೇಕ ಪ್ರಯತ್ನಗಳ ನಂತರ ಅವರು ಮನೆಯಲ್ಲಿ ಚಾಕೊಲೇಟ್ ಮಾಡಲು ನಿರ್ಧರಿಸಿದರು. 16ನೇ ವಯಸ್ಸಿನಲ್ಲಿ ಇಟ್ಟ ಈ ಸಣ್ಣ ಹೆಜ್ಜೆ ಇಂದು ತಮ್ಮದೇಯಾದ ಕಂಪನಿಯನ್ನು ಪ್ರಾರಂಭಿಸಲು ಕಾರಣವಾಯಿತು.
ದಿಗ್ವಿಜಯ್ ಅವರು ಅತ್ಯುತ್ತಮವಾದ ಚಾಕೊಲೇಟ್‌ಗಳನ್ನು ತಯಾರಿಸುತ್ತಾರೆ. ಇದುವರೆಗೆ ಎರಡು ಟನ್‌ಗೂ ಹೆಚ್ಚು ಚಾಕೊಲೇಟ್‌ಗಳನ್ನು ಮಾರಾಟ ಮಾಡಿದ್ದಾರೆ. ಅವರಿಗೆ ದೆಹಲಿ, ಉದಯಪುರ ಹಾಗೂ ಜೈಪುರ ಮುಂತಾದ ನಗರಗಳಲ್ಲಿ ಗ್ರಾಹಕರಿದ್ದಾರೆ. ಸ್ಥಳೀಯ ಹಣ್ಣುಗಳು, ಜಾಮೂನ್, ಕೇಸರಿ ಹಾಗೂ ಪ್ಲಮ್ ಮುಂತಾದ ವಸ್ತುಗಳನ್ನು ಬಳಸಿ ಚಾಕೊಲೇಟ್ ತಯಾರು ಮಾಡುತ್ತಾರೆ.
ಉದಯ್‌ಪುರದ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ದಿಗ್ವಿಜಯ್‌ಗೆ ಯಾವಾಗಲೂ ವಿಭಿನ್ನವಾಗಿ ಏನಾದರೂ ಮಾಡಬೇಕೆಂಬ ಆಸೆ ಇತ್ತು. ಕೋವಿಡ್ ಲಾಕ್‌ಡೌನ್‌ನಿಂದಾಗಿ ಮನೆಯಲ್ಲಿದ್ದಾಗ ಅವರು ಚಾಕೊಲೇಟ್ ಮಾಡಲು ನಿರ್ಧರಿಸಿದರು. ಈ ವಿಚಾರವನ್ನು ಅವರು ತಮ್ಮ ಸಹೋದರ ಮಹಾವೀರ್ ಸಿಂಗ್ ಅವರೊಂದಿಗೆ ಹಂಚಿಕೊಂಡರು. ಇದಕ್ಕೆ ಸಹೋದರ ಸಹ ಓಕೆ ಅಂದರು. ಆದರೆ, ಆಗ ದಿಗ್ವಿಜಯ್ ಅಥವಾ ಮಹಾವೀರ್ಗೆ ಚಾಕೊಲೇಟ್ ಮಾಡುವುದು ಗೊತ್ತಿರಲಿಲ್ಲ. ದಿಗ್ವಿಜಯ್, ಯೂಟ್ಯೂಬ್ ಸಹಾಯದಿಂದ ಚಾಕೊಲೇಟ್ ಮಾಡುವುದು ಹೇಗೆಂದು ಕಲಿತರು. ಅವರು ತಯಾರಿಸಿದ ಚಾಕಲೇಟ್‌ಗಳನ್ನು ತಮ್ಮ ಕುಟುಂಬ ಸದಸ್ಯರು ಮತ್ತು ಸ್ನೇಹಿತರಿಗೆ ತಿನ್ನಿಸಲು ಪ್ರಾರಂಭಿಸಿದರು.
ದೀಪಾವಳಿ ಸಂದರ್ಭದಲ್ಲಿ ದಿಗ್ವಿಜಯ್ ಅವರ ತಂದೆ ಕಾರು ಖರೀದಿಸಿದರು. ಈ ವೇಳೆ ಅವರಿಗೆ ಚಾಕೊಲೇಟ್ ಬಾಕ್ಸ್ ಉಡುಗೊರೆಯಾಗಿ ನೀಡಲಾಗಿತ್ತು. ಕಾರು ಶೋರೂಂ ಮಾಲೀಕರು ತಮ್ಮ ಗ್ರಾಹಕರಿಗೆ ಪ್ರತಿ ಕಾರು ಮಾರಾಟದಲ್ಲಿ ಒಂದು ಬಾಕ್ಸ್ ಚಾಕೊಲೇಟ್‌ಗಳನ್ನು ನೀಡುತ್ತಾರೆ ಎಂದು ತಿಳಿದ ನಂತರ ದಿಗ್ವಿಜಯ್, ತಮ್ಮ ಮನೆಯಲ್ಲಿ ತಯಾರಿಸಿದ ಚಾಕೊಲೇಟ್‌ಗಳನ್ನು ಮಾರಾಟ ಮಾಡಲು ಹೋಟೆಲ್ ಮಾಲೀಕರು ಮತ್ತು ಕಾರ್ ಶೋರೂಮ್‌ಗಳನ್ನು ಸಂಪರ್ಕಿಸುವ ಆಲೋಚನೆಯನ್ನು ಮಾಡಿದರು.
2021 ರಲ್ಲಿ ದಿಗ್ವಿಜಯ್ ಅವರು ಕಾರು ಶೋರೂಮ್‌ನಿಂದ 1,000 ಚಾಕೊಲೇಟ್‌ಗಳ ಮೊದಲ ಆರ್ಡರ್ ಪಡೆದರು. ಅದೇ ವರ್ಷದಲ್ಲಿ ಅವರು ತಮ್ಮ ಬ್ರಾಂಡ್ ಅನ್ನು ಪ್ರಾರಂಭಿಸಿದರು. ಕಾಲಕ್ರಮೇಣ ಪ್ರಮುಖ ಚಾಕೊಲೇಟ್ ಬ್ರಾಂಡ್ ಆಗಿ ಮಾರ್ಪಟ್ಟಿದೆ. ದೇಶಾದ್ಯಂತ 2 ಟನ್‌ಗಳಿಗಿಂತ ಹೆಚ್ಚು ಚಾಕೊಲೇಟ್‌ಗಳನ್ನು ಮಾರಾಟ ಮಾಡಲಾಗಿದೆ. ದಕ್ಷಿಣ ಭಾರತದ ಕೇರಳ ಮತ್ತು ತಮಿಳುನಾಡಿನಿಂದ ದಿಗ್ವಿಜಯ್ ತಮ್ಮ ಚಾಕಲೇಟ್‌ಗಳಿಗಾಗಿ ಕೋಕೋವನ್ನು ಖರೀದಿಸುತ್ತಾರೆ. ತಮ್ಮ ಹವ್ಯಾಸವನ್ನೇ ವೃತ್ತಿಯನ್ನಾಗಿ ಮಾಡಿಕೊಳ್ಳಲು ಬಯಸುವವರಿಗೆ ದಿಗ್ವಿಜಯ್ ಅವರ ಕಥೆ ಸ್ಪೂರ್ತಿದಾಯಕವಾಗಿದೆ. (ಏಜೆನ್ಸೀಸ್)