| ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು
ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ವತಿಯಿಂದ ನಡೆಯುತ್ತಿರುವ ‘ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಮೊದಲ ಪರೀಕ್ಷೆಗೆ (ಕೆ-ಸೆಟ್)’ ಅಧಿಸೂಚನೆ ಪ್ರಕಟಿಸಲಾಗಿದೆ. ಆದರೆ, ಈ ಸಲ ಪರೀಕ್ಷಾ ಕೇಂದ್ರಗಳ ಸಂಖ್ಯೆಯನ್ನು ಕಡಿತಗೊಳಿಸಿ, ವಿಷಯಗಳನ್ನು ಎರಡು ಭಾಗವಾಗಿ ವಿಭಜಿಸಲಾಗಿದೆ. ಇದು ಅಭ್ಯರ್ಥಿಗಳಲ್ಲಿ ಗೊಂದಲ ಮೂಡಿಸಿ, ತೊಂದರೆಗೂ ಸಿಲುಕಿಸಿದೆ.
ಈ ಹಿಂದೆ ಕೆ-ಸೆಟ್ ಪರೀಕ್ಷೆ ನಡೆಸುವ ನೋಡಲ್ ಏಜೆನ್ಸಿಯಾಗಿ ಮೈಸೂರು ವಿಶ್ವವಿದ್ಯಾಲಯ ಕಾರ್ಯನಿರ್ವಹಣೆ ಮಾಡಿತ್ತು. ಇದಕ್ಕೆ ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗ(ಯುಜಿಸಿ) ಮಾನ್ಯತೆ ನೀಡಿತ್ತು. ಪರೀಕ್ಷೆ, ಮೌಲ್ಯಮಾಪನ, ಫಲಿತಾಂಶ ಪ್ರಕಟಣೆ, ಪ್ರಮಾಣಪತ್ರ ವಿತರಣೆ ಕೆಲಸವನ್ನು ಮೈವಿವಿ ಕೆ-ಸೆಟ್ ಕೇಂದ್ರ ಮಾಡುತ್ತಿತ್ತು. ಆದರೀಗ ಇದೆಲ್ಲ ಸ್ಥಗಿತಗೊಂಡಿದೆ. ಈ ಪರೀಕ್ಷೆಯನ್ನು ಆಯೋಜಿಸುವ ಅವಕಾಶವನ್ನು ಮೈಸೂರು ವಿಶ್ವವಿದ್ಯಾಲಯದಿಂದ ಕಿತ್ತುಕೊಂಡು ಬೆಂಗಳೂರು ಕೇಂದ್ರಿತ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (ಕೆಇಎ) ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ. ನವೆಂಬರ್ 26ರಂದು ನಡೆಯುವ ಕೆ-ಸೆಟ್ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅಕ್ಟೋಬರ್ 3 ಕೊನೆಯ ದಿನವಾಗಿದೆ.
23 ವಿಷಯಗಳಿಗೆ 1 ಪರೀಕ್ಷಾ ಕೇಂದ್ರ: ಅಧಿಸೂಚನೆಯಲ್ಲಿ ಬಿ-ಭಾಗದಲ್ಲಿ ನೀಡಲಾಗಿರುವ 23 ವಿಷಯಗಳಿಗೆ ಪರೀಕ್ಷೆ ಬರೆಯಲು ಬೆಂಗಳೂರು ನಗರವನ್ನು ಮಾತ್ರ ಅಭ್ಯರ್ಥಿಗಳು ಆಯ್ಕೆ ಮಾಡಿಕೊಳ್ಳಬೇಕಿದೆ.
ಭೂಗೋಳ ಶಾಸ್ತ್ರ, ಪ್ರವಾಸೋದ್ಯಮ, ಆಡಳಿತ ಮತ್ತು ನಿರ್ವಹಣೆ, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ, ಮನೋವಿಜ್ಞಾನ, ಅಪರಾಧಶಾಸ್ತ್ರ, ಕಾನೂನು, ಸಂಸ್ಕೃತ, ಜಾನಪದ ಸಾಹಿತ್ಯ, ಉರ್ದು, ಸಾರ್ವಜನಿಕ ಆಡಳಿತ, ಪರಿಸರ ವಿಜ್ಞಾನ, ಗೃಹ ವಿಜ್ಞಾನ, ವಿದ್ಯುನ್ಮಾನ ವಿಜ್ಞಾನ, ಭೂವಿಜ್ಞಾನ, ಪುರಾತತ್ವ ಶಾಸ್ತ್ರ (ಆರ್ಕಿಯಾಲಜಿ), ಮಾನವಶಾಸ್ತ್ರ, ಮರಾಠಿ, ತತ್ವಶಾಸ್ತ್ರ, ಮಹಿಳಾ ಅಧ್ಯಯನ, ಭಾಷಾ ಶಾಸ್ತ್ರ, ಪ್ರದರ್ಶಕ ಕಲೆಗಳು, ಸಂಗೀತ, ದೃಶ್ಯ ಕಲೆ ವಿಷಯಗಳ ಪರೀಕ್ಷೆ ಬೆಂಗಳೂರಿನಲ್ಲಿ ಮಾತ್ರ ನಡೆಯಲಿದೆ. ಇದನ್ನು ಹೊರತುಪಡಿಸಿ ಬೇರೆ ಪರೀಕ್ಷಾ ಕೇಂದ್ರಗಳ ಆಯ್ಕೆಯೇ ಇಲ್ಲ. ಇದರಿಂದ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ, ಮಧ್ಯ ಕರ್ನಾಟಕ, ಕರಾವಳಿ ಭಾಗದ ಅಭ್ಯರ್ಥಿಗಳು ರಾಜ್ಯ ರಾಜಧಾನಿಗೆ ಪರೀಕ್ಷೆ ಬರೆಯಲು ಬರಲೇಬೇಕಾಗಿದೆ. ಇದು ತ್ರಾಸದಾಯಕ, ವೆಚ್ಚದಾಯಕವಾಗಿದೆ ಎಂದು ಬಹುತೇಕ ಅಭ್ಯರ್ಥಿಗಳ ಆಕ್ಷೇಪವಾಗಿದೆ.
ಹಿಂದೆ ಈ ರೀತಿ ವ್ಯತ್ಯಾಸ ಇರಲಿಲ್ಲ: ಮೈವಿವಿ ಕೆ-ಸೆಟ್ನಲ್ಲಿ ಈ ರೀತಿ ವ್ಯತ್ಯಾಸ ಇರಲಿಲ್ಲ. ಬೆಂಗಳೂರು, ಮೈಸೂರು, ಬೆಳಗಾವಿ, ಬಳ್ಳಾರಿ, ವಿಜಯಪುರ, ದಾವಣಗೆರೆ, ಧಾರವಾಡ ಮಂಗಳೂರು, ಶಿವಮೊಗ್ಗ ಹಾಗೂ ತುಮಕೂರು ಸೇರಿ 11 ನೋಡಲ್ ಕೇಂದ್ರಗಳಲ್ಲಿ ಕೆ-ಸೆಟ್ ನಡೆಸಲಾಗುತ್ತಿತ್ತು. ಯುಜಿಸಿ ಮಾರ್ಗಸೂಚಿಯಂತೆ ಕನ್ನಡ, ಇಂಗ್ಲಿಷ್, ಅರ್ಥಶಾಸ್ತ್ರ, ವಾಣಿಜ್ಯಶಾಸ್ತ್ರ, ಸಮಾಜಶಾಸ್ತ್ರ, ಭೂಗೋಳಶಾಸ್ತ್ರ, ಜೀವಶಾಸ್ತ್ರ, ಗಣಿತ ಸೇರಿದಂತೆ 41 ವಿಷಯಗಳಿಗೂ ಈ ಎಲ್ಲ ಪರೀಕ್ಷಾ ಕೇಂದ್ರಗಳಲ್ಲೇ ಪರೀಕ್ಷೆ ಬರೆಯಬಹುದಾಗಿತ್ತು. ಈ ರೀತಿಯ ವಿಂಗಡಣೆ ಏಕೆ ? ಎಲ್ಲ ಪರೀಕ್ಷಾ ಕೇಂದ್ರಗಳಲ್ಲೂ ಎಲ್ಲ 41 ವಿಷಯಗಳಿಗೂ ಪರೀಕ್ಷೆ ನಡೆಸಲು ಏನು ಸಮಸ್ಯೆ? ಎಂಬುದು ಅಭ್ಯರ್ಥಿಗಳ ಪ್ರಶ್ನೆಯಾಗಿದೆ.
ಅಭ್ಯರ್ಥಿಗಳ ಸಂಖ್ಯೆ ಕುರಿತು ವಿಶ್ಲೇಷಣೆ ಮಾಡಲಾಗಿದೆ. ಅದನ್ನು ಆಧರಿಸಿ 100ಕ್ಕಿಂತ ಕಡಿಮೆ ಅಭ್ಯರ್ಥಿಗಳು ಇರುವ ವಿಷಯಗಳ ಪರೀಕ್ಷೆಯನ್ನು ಬೆಂಗಳೂರು ನಗರದಲ್ಲಿ ನಡೆಸಲು ತೀರ್ವನಿಸಲಾಗಿದೆ. ಮೈಸೂರು ವಿವಿಯಂತೆ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಕೆ-ಸೆಟ್ನ ಎಲ್ಲ ವಿಷಯಗಳ ಪರೀಕ್ಷೆ ನಡೆಸಲು ಆಗುವುದಿಲ್ಲ. ಒಂದು ವಿಷಯಕ್ಕೆ ಕೇವಲ 3-4 ಅಭ್ಯರ್ಥಿಗಳು ಇರುವ ಪರೀಕ್ಷಾ ಕೇಂದ್ರಗಳಿವೆ. ಇಂತಹ ಕಡೆಗೆ ಪ್ರಶ್ನೆ ಪತ್ರಿಕೆಗಳಿಗೆ ಭದ್ರತೆ ಕಲ್ಪಿಸುವುದು ಕಷ್ಟಕರವಾಗುತ್ತದೆ. | ಎಸ್. ರಮ್ಯಾ, ಕಾರ್ಯನಿರ್ವಾಹಕ ನಿರ್ದೇಶಕಿ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಬೆಂಗಳೂರು 18 ವಿಷಯಗಳಿಗೆ 8 ಪರೀಕ್ಷಾ ಕೇಂದ್ರ, 23 ವಿಷಯಗಳಿಗೆ 1 ಪರೀಕ್ಷಾ ಕೇಂದ್ರ ನಿಗದಿ ಮಾಡಿರುವುದು ಯಾವ ನ್ಯಾಯ? ಬೀದರ್, ರಾಯಚೂರಿನ ಅಭ್ಯರ್ಥಿಗಳು ದೂರದ ಬೆಂಗಳೂರಿಗೆ ಹಿಂದಿನ ದಿನವೇ ಬಂದು ಉಳಿದುಕೊಂಡು ಪರೀಕ್ಷೆ ಬರೆಯಬೇಕಾಗಿದೆ. ವ್ಯಾಸ್ತವ್ಯ, ಊಟ, ಪ್ರಯಾಣದ ಖರ್ಚು ಹೆಚ್ಚಾಗಲಿದೆ. ಇದರಿಂದ ಅಭ್ಯರ್ಥಿಗಳಿಗೆ ತೊಂದರೆ ಆಗುತ್ತದೆ. | ವೆಂಕಟರಾಘವ್, ಅಭ್ಯರ್ಥಿ, ಎಚ್.ಡಿ.ಕೋಟೆ ಪರೀಕ್ಷಾ ಕೇಂದ್ರಗಳ ಸಂಖ್ಯೆಯನ್ನು ಇಳಿಕೆ ಮಾಡಲಾಗಿದೆ. ಇದನ್ನು ಹೇಗೋ ಸಹಿಸಿಕೊಳ್ಳಬಹುದು. ಆದರೆ, ಕೆಲ ವಿಷಯಗಳಿಗೆ ರಾಜ್ಯಕ್ಕೆ ಒಂದೇ ಪರೀಕ್ಷಾ ಕೇಂದ್ರ ಮಾಡಿರುವುದು ಸರಿಯಲ್ಲ. ಎಲ್ಲ ವಿಷಯಗಳನ್ನೂ ಎಲ್ಲ ಪರೀಕ್ಷಾ ಕೇಂದ್ರದಲ್ಲೂ ಬರೆಯುವ ಅವಕಾಶ ಕಲ್ಪಿಸಿಕೊಡಬೇಕು. | ಶಿವಮೂರ್ತಿ, ಅಭ್ಯರ್ಥಿ, ಮೈಸೂರು
ಶುಲ್ಕವೂ ಏರಿಕೆ: ಪರೀಕ್ಷಾ ಶುಲ್ಕ ಸಹ ಏರಿಕೆಯಾಗಿದೆ. ಮೈವಿವಿ ಕೆ-ಸೆಟ್ ಪರೀಕ್ಷೆಗೆ ಸಾಮಾನ್ಯ ವರ್ಗಕ್ಕೆ 700 ರೂ., ಎಸ್ಸಿ-ಎಸ್ಟಿಗೆ 400 ರೂ. ನಿಗದಿ ಮಾಡಿತ್ತು. ಕೆಇಎ ಕೆಸೆಟ್ಗೆ ಸಾಮಾನ್ಯ ವರ್ಗಕ್ಕೆ 1000 ರೂ., ಎಸ್ಸಿ-ಎಸ್ಟಿಗೆ 700 ರೂ. ನಿಗದಿ ಮಾಡಿದೆ.
ಕೆಲ ಮಾರ್ಪಾಡು: ಮೈಸೂರು ವಿವಿ ಮಾದರಿಯಲ್ಲೇ ಕೆಇಎ ಸಹ ಕೆ-ಸೆಟ್ ನಡೆಸಲು ಮುಂದಾಗಿದೆ. ಆದರೆ, ಕೆಲ ಸಣ್ಣ ಮಾರ್ಪಾಡು ಮಾಡಿಕೊಂಡಿದೆ. ಅದರಲ್ಲಿ ಮುಖ್ಯವಾಗಿ ಪರೀಕ್ಷಾ ಕೇಂದ್ರಗಳನ್ನು ಕಡಿತಗೊಳಿಸಿರುವುದು ಮತ್ತು ಕೆಲ ವಿಷಯಗಳಿಗೆ ಬೆಂಗಳೂರು ನಗರವನ್ನು ಮಾತ್ರ ಪರೀಕ್ಷಾ ಕೇಂದ್ರವಾಗಿ ಮಾಡಿರುವುದು ರಾಜ್ಯದ ವಿವಿಧ ಭಾಗದ ಸಾವಿರಾರು ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ.
18 ವಿಷಯಗಳಿಗೆ ಎಂಟು ಕೇಂದ್ರಗಳು: ಮೈವಿವಿ ಕೆ-ಸೆಟ್ನಂತೆ ಈಗಲೂ 41 ವಿಷಯಗಳಿಗೆ ಪರೀಕ್ಷೆ ನಡೆಸಲಾಗುತ್ತಿದೆ. ಈ ಪೈಕಿ ‘ಎ’ ಭಾಗದಲ್ಲಿ ನೀಡಲಾಗಿರುವ 18 ವಿಷಯಗಳಿಗೆ ಬೆಂಗಳೂರು, ಬಳ್ಳಾರಿ, ವಿಜಯಪುರ, ದಾವಣಗೆರೆ, ಧಾರವಾಡ, ಕಲಬುರಗಿ, ಮಂಗಳೂರು ಮತ್ತು ಮೈಸೂರು ಸೇರಿದಂತೆ ರಾಜ್ಯದ 8 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಜರುಗಲಿದೆ. ವಾಣಿಜ್ಯಶಾಸ್ತ್ರ, ಕನ್ನಡ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಇತಿಹಾಸ, ಸಮಾಜಶಾಸ್ತ್ರ, ಹಿಂದಿ, ನಿರ್ವಹಣೆ (ಮ್ಯಾನೇಜ್ವೆುಂಟ್), ಶಿಕ್ಷಣ, ಗ್ರಂಥಾಲಯ ಹಾಗೂ ಮಾಹಿತಿ ವಿಜ್ಞಾನ, ಸಮಾಜ ಕಾರ್ಯ, ದೈಹಿಕ ಶಿಕ್ಷಣ, ಗಣಕ ವಿಜ್ಞಾನ ಮತ್ತು ಅನ್ವಯಿಕ, ಭೌತಿಕ ವಿಜ್ಞಾನ, ಗಣಿತ ವಿಜ್ಞಾನ, ರಾಸಾಯನಿಕ ವಿಜ್ಞಾನ, ಜೀವವಿಜ್ಞಾನ ವಿಷಯಗಳ ಅಭ್ಯರ್ಥಿಗಳು ಈ 8 ಕೇಂದ್ರಗಳಲ್ಲಿ ಪರೀಕ್ಷೆ ಬರೆಯಬೇಕಿದೆ.