ಜೀವನದಲ್ಲಿ ಎಲ್ಲ ದಿನಗಳೂ ಒಂದೇ ರೀತಿಯಾಗಿರುವುದಿಲ್ಲ. ಕೆಲವೊಮ್ಮೆ ಯಶಸ್ಸು ನಮ್ಮನ್ನು ಅಪ್ಪಿಕೊಳ್ಳುತ್ತದೆ; ಇನ್ನೊಮ್ಮೆ ಸೋಲು ಅಥವಾ ಹಿನ್ನಡೆ ನಮ್ಮನ್ನು ಪರೀಕ್ಷಿಸುತ್ತದೆ. ಆದರೆ ಸೋಲು, ಹಿನ್ನಡೆ ಬದುಕಿನ ಅಂತ್ಯವಲ್ಲ. ಅದು ನಮ್ಮ ಸಾಮರ್ಥ್ಯವನ್ನು ಮತ್ತೊಮ್ಮೆ ಅರಿಯಲು ಸಿಗುವ ಅವಕಾಶ. ಬಿದ್ದಾಗ ಮತ್ತೆ ಎದ್ದು ನಿಲ್ಲುವ ಮನಸ್ಸೇ ನಿಜವಾದ ಜೀವನೋತ್ಸಾಹ. ಸ್ಪೂರ್ತಿ ಎಲ್ಲಿಂದಲಾದರೂ ಬರಬಹುದು. ತಂದೆ-ತಾಯಿಯ ತ್ಯಾಗದಿಂದ, ಗುರುಗಳ ಮಾರ್ಗದರ್ಶನದಿಂದ, ಸಾಧಕರ ಹೋರಾಟದಿಂದ, ಪ್ರಕೃತಿಯ ಸಹನೆಯಿಂದ, ಮಗುವಿನ ಮುಗ್ಧ ನಗುವಿನಿಂದ ಅಥವಾ ನಮ್ಮದೇ ಹಿಂದಿನ ಕಷ್ಟಗಳಿಂದಲೂ ಸ್ಪೂರ್ತಿ ದೊರೆಯಬಹುದು. ಕೆಲವೊಮ್ಮೆ ನಮ್ಮನ್ನು ಪ್ರೇರೇಪಿಸಲು ದೊಡ್ಡ ವ್ಯಕ್ತಿ ಅಥವಾ ದೊಡ್ಡ ಘಟನೆ ಬೇಕಾಗಿಲ್ಲ; ನಿನ್ನೆಗಿಂತ ಇಂದು ನಾನು ಸ್ವಲ್ಪ ಉತ್ತಮವಾಗಬೇಕು ಎಂಬ ಒಂದು ಚಿಕ್ಕ ಸಂಕಲ್ಪವೇ ಸಾಕು. ಅದಕ್ಕೆ ಪೂರಕವಾಗಿ ನಾನು ಸಾಮಾಜಿಕ ಜಾಲತಾಣದಲ್ಲಿ ಓದಿದ ವಿದ್ಯಮಾನದ ಬಗ್ಗೆ ಹೇಳಿದ್ದರ ಸಾರ ಇಲ್ಲಿದೆ.
ಅವರೊಬ್ಬ ವೃದ್ಧ. ಹೆಸರು ರವೀಂದ್ರನಾಥ. ವಯಸ್ಸು 80. ಕೋಲ್ಕೊತ್ತಾದ ಬೀದಿಗಳಲ್ಲಿ ಇಂದಿಗೂ ಟ್ಯಾಕ್ಸಿ ಚಲಾಯಿಸುತ್ತಾರೆ. ಚಳಿ ಇರಲಿ, ಸುಡು ಬಿಸಿಲಿರಲಿ ಕಾಯಕ ನಿಂತಿಲ್ಲ. ದೇಹ ಬೆಂಬಲಿಸದಿದ್ದರೂ ಉತ್ಸಾಹ, ತುಡಿತ ನಿಂತಿಲ್ಲ. ದಿನವಿಡಿ ದುಡಿಯುತ್ತಾರೆ. ಈ ದುಡಿಮೆ 67 ವರ್ಷದ ಪ್ರೀತಿಯ ಪತ್ನಿಯ ಉಸಿರು ಉಳಿಸಿಕೊಳ್ಳುವುದಕ್ಕಾಗಿ. ಇಳಿ ವಯಸ್ಸಿನಲ್ಲಿ ಆಸರೆ ಎಂದು ಯಾರೂ ಇಲ್ಲ. ಪತ್ನಿ ಗಂಭೀರವಾದ ಹೃದಯ ಸಂಬಂಧಿ ಕಾಯಿಲೆಯಿಂದ ನರಳುತ್ತಿದ್ದಾರೆ. ಪ್ರತಿದಿನ ಆಕೆಗೆ ಔಷಧಗಳು ಬೇಕು. ಇತ್ತ ಟ್ಯಾಕ್ಸಿ ಓಡಿಸಿದರೆ ಮಾತ್ರ ಹೊತ್ತಿನ ತುತ್ತು. ಕೆಲವೊಮ್ಮೆ ಇಡೀ ದಿನ ಒಬ್ಬನೇ ಒಬ್ಬ ಪ್ರಯಾಣಿಕ ಸಿಗದಿದ್ದರೂ, ಟ್ಯಾಕ್ಸಿ ಮಾಲೀಕನಿಗೆ ದಿನದ ಬಾಡಿಗೆಯನ್ನು ಕಟ್ಟಲೇಬೇಕಾದ ಅನಿವಾರ್ಯತೆ ಇವರದು. ಆದರೂ ಅವರು ದೂರುವುದಿಲ್ಲ, ಒಂದು ದಿನವೂ ರಜೆ ಪಡೆಯದೆ, ಪತ್ನಿಯ ಮುಖದಲ್ಲಿ ನಗು ಉಳಿಸಲು ತಮ್ಮ ಬೆವರು ಸುರಿಸುತ್ತಲೇ ಇದ್ದಾರೆ.
ಇವರ ಸ್ಪೂರ್ತಿದಾಯಕ ಕಥೆಯನ್ನು ‘ಚೈತಾಲಿ ಬೋಸ್’ ಎಂಬುವವರು ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿದು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನಿಜಕ್ಕೂ, ಇದು ಸ್ಪೂರ್ತಿದಾಯಕವೇ. ಕಷ್ಟಗಳು ಎಷ್ಟೇ ದೊಡ್ಡದಿರಲಿ, ಪ್ರೀತಿ ಮತ್ತು ಜವಾಬ್ದಾರಿಯ ಮುಂದೆ ಅವೆಲ್ಲವೂ ಸಣ್ಣದು ಎಂಬುದನ್ನು ಈ ವೃದ್ಧ ಜೀವ ಜಗತ್ತಿಗೆ ಸಾರುತ್ತಿದ್ದಾರೆ. ಸಣ್ಣಪುಟ್ಟ ಕಷ್ಟಗಳಿಗೇ ಸುಸ್ತಾಗಿ, ಖಿನ್ನತೆಗೆ ಒಳಗಾಗುವ ಇಂದಿನ ಯುವಪೀಳಿಗೆಗೆ ರವೀಂದ್ರನಾಥ್ ಅವರ ಈ ಬದುಕು ಒಂದು ಅತಿ ದೊಡ್ಡ ಪಾಠ ಹಾಗೂ ಸ್ಪೂರ್ತಿ. ಜೀವನೋತ್ಸಾಹದ ಮೂಲ ಆಶಾವಾದ. ಸಮಸ್ಯೆಗಳಿಲ್ಲದ ಬದುಕನ್ನು ನಿರೀಕ್ಷಿಸುವುದಕ್ಕಿಂತ, ಸಮಸ್ಯೆಗಳನ್ನು ಎದುರಿಸುವ ಶಕ್ತಿಯನ್ನು ಬೆಳೆಸಿಕೊಳ್ಳುವುದು ಮುಖ್ಯ. ಕತ್ತಲು ಎಷ್ಟೇ ಗಾಢವಾಗಿದ್ದರೂ ಬೆಳಕು ಮೂಡುವ ಸಾಧ್ಯತೆ ಇದ್ದೇ ಇರುತ್ತದೆ. ಹಾಗೆಯೇ ಕಷ್ಟದ ಸಮಯದಲ್ಲಿ ತಾಳ್ಮೆ, ಪರಿಶ್ರಮ ಮತ್ತು ಆತ್ಮವಿಶ್ವಾಸವನ್ನು ಕಳೆದುಕೊಳ್ಳದೆ ಮುನ್ನಡೆಯುವವನು ಹೊಸ ಅವಕಾಶಗಳನ್ನು ಕಂಡುಕೊಳ್ಳುತ್ತಾನೆ. ನಮ್ಮ ಬದುಕು ನಮಗಾಗಿ ಮಾತ್ರವಲ್ಲ. ಮತ್ತೊಬ್ಬರ ಕಣ್ಣೀರು ಒರೆಸಿದಾಗ, ಸಂಕಷ್ಟದಲ್ಲಿರುವವರಿಗೆ ನೆರವಾದಾಗ, ನಿರಾಶೆಯಲ್ಲಿರುವವರಿಗೆ ಧೈರ್ಯದ ಮಾತು ಹೇಳಿದಾಗ ನಮ್ಮ ಬದುಕಿಗೂ ಹೊಸ ಅರ್ಥ ದೊರೆಯುತ್ತದೆ.
ನಾವು ಸಾಧಿಸಿದ ಯಶಸ್ಸಿಗಿಂತ, ನಮ್ಮಿಂದ ಮತ್ತೊಬ್ಬರ ಬದುಕಿನಲ್ಲಿ ಮೂಡಿದ ಭರವಸೆಯೇ ದೊಡ್ಡ ಸಾಧನೆ. ಆದ್ದರಿಂದ ಜೀವನವನ್ನು ಸಮಸ್ಯೆಗಳ ಪಟ್ಟಿಯಾಗಿ ನೋಡದೆ, ಅನುಭವಗಳ ಪಾಠಶಾಲೆಯಾಗಿ ನೋಡಬೇಕು. ಕಳೆದ ನೋವನ್ನು ಪಾಠವನ್ನಾಗಿ, ಇಂದಿನ ಅವಕಾಶವನ್ನು ಸಾಧನೆಯಾಗಿ ಮತ್ತು ನಾಳೆಯ ಕನಸನ್ನು ಗುರಿಯಾಗಿ ಪರಿವರ್ತಿಸಬೇಕು. ಉಸಿರಿರುವವರೆಗೆ ಆಶೆಯಿರಲಿ, ಆಶೆಯಿರುವವರೆಗೆ ಪ್ರಯತ್ನವಿರಲಿ, ಪ್ರಯತ್ನವಿರುವವರೆಗೆ ಜೀವನೋತ್ಸಾಹ ಜೀವಂತವಾಗಿರಲಿ. ಜೀವನೋತ್ಸಾಹ ಎಂದರೆ ಕೇವಲ ಸಂತೋಷದಿಂದ ಬದುಕುವುದಲ್ಲ; ಬದುಕಿನಲ್ಲಿ ಎದುರಾಗುವ ಸೋಲು, ಸಂಕಷ್ಟ, ನಿರಾಸೆ ಮತ್ತು ಅನಿಶ್ಚಿತತೆಗಳ ನಡುವೆಯೂ ನಾನು ಮುಂದೆ ಸಾಗಬೇಕು ಎಂಬ ಆಂತರಿಕ ಚೈತನ್ಯವನ್ನು ಉಳಿಸಿಕೊಳ್ಳುವುದು. ಸ್ಪೂರ್ತಿ ಎಂದರೆ ಆ ಚೈತನ್ಯಕ್ಕೆ ದಿಕ್ಕು ತೋರಿಸುವ ಶಕ್ತಿ. ಅದು ನಮ್ಮದಾದಾಗ ಸೋಲು, ಹತಾಶೆ ಹಿನ್ನಡೆ ಎಂದುಕೊಂಡು ಖಿನ್ನತೆಗೊಳಗಾಗುವ ಅವಶ್ಯಕತೆ ಇರುವುದಿಲ್ಲ