ನ್ಯೂಸ್

ನೀರಿನಂತೆ ಮನೆ ಮುಂದೆ ಹರಿದುಬಂದಿತು ಲೀಟರ್​ ಗಟ್ಟಲೇ ಡಿಸೇಲ್​! Diesel Leak

ಕೋಝಿಕ್ಕೋಡ್: ಎಲತ್ತೂರಿನ ಇಂಧನ ಸ್ಥಾವರದ ಟ್ಯಾಂಕ್‌ನಿಂದ ಇಂಧನ ಸೋರಿಕೆಯಾದ (Diesel Leak) ಘಟನೆಯಲ್ಲಿ ಎಚ್‌ಪಿಸಿಎಲ್ (ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್) ಅವರಿಂದ ತಪ್ಪಾಗಿದೆ ಎಂದು ಜಿಲ್ಲಾಧಿಕಾರಿ ಅನಿತಾಕುಮಾರಿ ಹೇಳಿದ್ದಾರೆ. ತಹಸೀಲ್ದಾರ್, ಗ್ರಾ.ಪಂ.ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಡಿಸೇಲ್​ ಹರಿದುಬಂದ ಸ್ಥಳವನ್ನು ಪರಿಶೀಲನೆ ನಡೆಸಿದ ಬಳಿಕ ಎಚ್‌ಪಿಸಿಎಲ್‌ ನಿರ್ಲಕ್ಷ್ಯತೆಯನ್ನು ಎತ್ತಿ ಹಿಡಿದಿದ್ದಾರೆ.

ಮನೆಗಳ ಮುಂದಿರುವ ಚರಂಡಿಯಲ್ಲಿ ನೀರು ಹರಿದಂತೆ ಡಿಸೇಲ್ ಹರಿದುಬಂದಿದ್ದು, ಸ್ಥಳೀಯರನ್ನು ಆತಂಕಕ್ಕೆ ದೂಡಿತ್ತು. ಇಂಧನ ಸೋರಿಕೆ ಆಗಿರುವುದು ನಮ್ಮ ಗಮನಕ್ಕೆ ಬಂದಿಲ್ಲ. ಟ್ಯಾಂಕ್​ ಬ್ರೇಕ್​ ಆದಲ್ಲಿ ಎಚ್ಚರಿಸಲು ನಮ್ಮಲ್ಲಿ ಅಲಾರಾಂ ವ್ಯವಸ್ಥೆ ಇದೆ. ಆದರೆ, ಇಂತಹ ಸಮಯದಲ್ಲಿ ಅದು ಕೂಡ ಸರಿಯಾಗಿ ಕೆಲಸ ಮಾಡಿಲ್ಲ ಎಂದು ಎಚ್​ಪಿಸಿಎಲ್ ಅಧಿಕಾರಿಗಳು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ.

ಟ್ಯಾಂಕ್‌ನಲ್ಲಿರುವ ಇಂಧನವನ್ನು ಸಂಪೂರ್ಣವಾಗಿ ತೆಗೆದುಹಾಕಲಾಗುತ್ತದೆ ಮತ್ತು ಪರೀಕ್ಷಿಸಲಾಗುತ್ತದೆ. ಚರಂಡಿಯಲ್ಲಿ ಸೋರಿಕೆಯಾಗುತ್ತಿದೆ ಎಂದು ಸ್ಥಳೀಯರಿಂದ ಆತಂಕ ವ್ಯಕ್ತವಾದ ಹಿನ್ನಲೆಯಲ್ಲಿ ಇಂಧನ ತೆಗೆದು ಪರಿಶೀಲಿಸಲು ತೀರ್ಮಾನಿಸಲಾಗಿದೆ. ಹಳ್ಳಗಳಲ್ಲಿ ಎಷ್ಟು ಪ್ರಮಾಣದ ಇಂಧನ ಹರಡಿದೆ ಎಂಬುದನ್ನು ಪರಿಶೀಲಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಚರಂಡಿ ಸೇರಿದಂತೆ ಜಲಮೂಲಗಳಿಗೆ ಇಂಧನ ಹರಿದು ಬಂದಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿ ಜಲಮೂಲಗಳನ್ನು ಸ್ವಚ್ಛಗೊಳಿಸಲು ಕ್ರಮಕೈಗೊಳ್ಳಲಾಗುವುದು ಎಂದು ಮಾಲಿನ್ಯ ನಿಯಂತ್ರಣ ಇಲಾಖೆ ಮಾಹಿತಿ ಹಂಚಿಕೊಂಡಿದೆ,(ಏಜೆನ್ಸೀಸ್).