ನ್ಯೂಸ್

ಡೀಸೆಲ್ ದರ ಒಂದೇ ಸಲ 8 ರೂಪಾಯಿ ಇಳಿಕೆ

ನವದೆಹಲಿ: ಡೀಸೆಲ್ ದರ ಲೀಟರ್ ಮೇಲೆ ಒಂದೇ ಸಲ 8 ರೂಪಾಯಿ ಇಳಿಕೆಯಾಗಿದೆ. ಆದರೆ, ಇದು ರಾಷ್ಟ್ರ ರಾಜಧಾನಿ ದೆಹಲಿಗೆ ಮಾತ್ರ ಸೀಮಿತ. ಅಲ್ಲಿ ಡೀಸೆಲ್ ಮೇಲೆ ವಿಧಿಸಿದ್ದ ಮೌಲ್ಯ ವರ್ಧಿತ ತೆರಿಗೆ (ವ್ಯಾಟ್)ಯನ್ನು ಶೇ. 30ರಿಂದ ಶೇ. 16.75ಕ್ಕೆ ರಾಜ್ಯ ಸರ್ಕಾರ ಇಳಿಕೆ ಮಾಡಿದೆ. ಪರಿಣಾಮ, ಪ್ರತಿ ಲೀಟರ್ ಡೀಸೆಲ್ ದರ 8.36 ರೂಪಾಯಿಯಷ್ಟು ಇಳಿಕೆಯಾಗಿದೆ.

ಕಳೆದ ಕೆಲ ವಾರಗಳಿಂದ ಏರಿಕೆಯಲ್ಲೇ ಇದ್ದ ಡೀಸೆಲ್ ಬೆಲೆ ಬುಧವಾರ 81.94 ರೂಪಾಯಿಯಷ್ಟಾಗಿತ್ತು. ಪೆಟ್ರೋಲ್​ಗಿಂತ ದುಬಾರಿ ಬೆಲೆಯಲ್ಲಿ ಡೀಸೆಲ್ ಮಾರಾಟವಾಗುತ್ತಿತ್ತು. ಈಗ ಡೀಸೆಲ್ ದರ 73.64 ರೂಪಾಯಿಗೆ ಇಳಿಕೆಯಾಗಿದೆ., ಜೂನ್ 7ರಿಂದ ತೈಲ ದರ ನಿತ್ಯ ಪರಿಷ್ಕರಣೆ ಆರಂಭವಾಗಿದ್ದು, ಡೀಸೆಲ್ ದರ ಲೀಟರ್ ಮೇಲೆ ಒಟ್ಟಾರೆ 12.55 ರೂಪಾಯಿ ಏರಿಕೆ ಆಗಿತ್ತು.

ಬೆಂಗಳೂರಿನಲ್ಲಿ ಪೆಟ್ರೋಲ್ ಗೆ ಪ್ರತಿ ಲೀಟರ್​ನ ಇಂದಿನ ದರ 83.04 ರೂಪಾಯಿ ಆಗಿದೆ. ಜುಲೈ 27ರಿಂದ ಪೆಟ್ರೋಲ್ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಇದೇ ರೀತಿ, ಡೀಸೆಲ್ ದರ ಇಂದು ಪ್ರತಿ ಲೀಟರ್ ಗೆ 77.88 ರೂಪಾಯಿ ಆಗಿದೆ. ಡೀಸೆಲ್ ಬೆಲೆಯಲ್ಲಿ ಕೂಡ ಜುಲೈ 27ರಿಂದ ಯಾವುದೇ ವ್ಯತ್ಯಾಸವಾಗಿಲ್ಲ.  (ಏಜೆನ್ಸೀಸ್)