ನ್ಯೂಸ್

ಭವಾನಿಪುರದಲ್ಲಿ ದೀದಿಗೆ ದಾಖಲೆ ಗೆಲುವು; ಸಿಎಂ ಕುರ್ಚಿ ಭದ್ರ

ನವದೆಹಲಿ: ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಅವರು ಭಬಾನಿಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ದಾಖಲೆ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ತನ್ಮೂಲಕ ರಾಜ್ಯದ ಸಿಎಂ ಆಗಿ ಮುಂದುವರಿಯಲು ಅಗತ್ಯವಾಗಿದ್ದ ವಿಧಾನಸಭಾ ಸದಸ್ಯತ್ವವನ್ನು ಸಂಪಾದಿಸಿದ್ದಾರೆ.

ಭಬಾನಿಪುರ ಕ್ಷೇತ್ರಕ್ಕೆ ಸೆಪ್ಟೆಂಬರ್​ 30 ರಂದು ಮತದಾನ ನಡೆದಿತ್ತು. ಇಂದು ನಡೆದ ಮತ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರಿಯಾಂಕಾ ತಿಬ್ರೇವಾಲ್​ಗಿಂತ ಮಮತಾ ಬ್ಯಾನರ್ಜಿ ಅವರಿಗೆ 58,832 ಮತಗಳು ಹೆಚ್ಚಾಗಿ ಬಂದಿರುವುದು ಪ್ರಕಟವಾಗಿದೆ.

ಉಪಚುನಾವಣೆ ಹಿನ್ನೆಲೆ: ಏಪ್ರಿಲ್​-ಮೇನಲ್ಲಿ ನಡೆದಿದ್ದ ಮಹಾಚುನಾವಣೆಯಲ್ಲಿ ಮಮತಾ ತಮ್ಮ ಗಟ್ಟಿ ಕ್ಷೇತ್ರವಾದ ಭಬಾನಿಪುರವನ್ನು ತೊರೆದು ನಂದೀಗ್ರಾಮದಿಂದ ಚುನಾವಣೆ ಸ್ಪರ್ಧಿಸಿದ್ದರು. ಹಾಲಿ ರಾಜ್ಯದ ವಿಪಕ್ಷ ನಾಯಕರಾಗಿರುವ ಬಿಜೆಪಿಯ ಸುವೇಂದು ಅಧಿಕಾರಿ ವಿರುದ್ಧ ಅಲ್ಪ ಅಂತರದಿಂದ ಸೋಲನುಭವಿಸಿದ್ದರು. ತಮ್ಮ ಪಕ್ಷ ಭಾರೀ ಬಹುಮತ ಸಾಧಿಸಿದ ಹಿನ್ನೆಲೆಯಲ್ಲಿ ಸಿಎಂ ಹುದ್ದೆ ಅಲಂಕರಿಸಿದ್ದ ಮಮತಾ, ಸಂವಿಧಾನದ ಪ್ರಕಾರ ಸಿಎಂ ಸ್ಥಾನದಲ್ಲಿ ಮುಂದುವರಿಯಲು 6 ತಿಂಗಳೊಳಗೆ ವಿಧಾನಸಭಾ ಸದಸ್ಯರಾಗಿ ಆಯ್ಕೆಯಾಗಲೇ ಬೇಕಿತ್ತು. ಮಮತಾರ ಹಾದಿ ಸುಗಮವಾಲೆಂದು ಭಬಾನಿಪುರದಿಂದ ಗೆದ್ದಿದ್ದ ಟಿಎಂಸಿಯ ಹಿರಿಯ ನಾಯಕ ಸೋವನ್​ದೇವ್​ ಚಟ್ಟೋಪಾಧ್ಯಾಯ ರಾಜೀನಾಮೆ ನೀಡಿ ಸ್ಥಾನ ತೆರವುಗೊಳಿಸಿದ್ದರಿಂದ ಈ ಉಪಚುನಾವಣೆ ನಡೆದಿತ್ತು. (ಏಜೆನ್ಸೀಸ್)