ಚೆನ್ನೈ OMRನಲ್ಲಿ ಧಸಕ್‌ ಅಂತ ಕುಸಿದ ರಸ್ತೆ 
ನ್ಯೂಸ್

ಚೆನ್ನೈನಲ್ಲಿ ಮೆಟ್ರೋ ಕಾಮಗಾರಿಗೆ ಕುಸಿಯಿತಾ ರಸ್ತೆ?; 10 ಅಡಿ ಗುಂಡಿಗೆ ಬಿದ್ದ ಕಾರು | Chennai road collapse

ಚೆನ್ನೈನ ರಸ್ತೆಯಲ್ಲಿ ದಿಢೀರ್ ಕುಸಿತ ಸಂಭವಿಸಿ ಸುಮಾರು 10 ಅಡಿ ಆಳದ ಗುಂಡಿ ನಿರ್ಮಾಣವಾಗಿದೆ. ಈ ವೇಳೆ ಗುಂಡಿಗೆ ಕಾರೊಂದು ಬಿದ್ದು ಪಲ್ಟಿಯಾಗಿದ್ದು, ಕಾರಿನಲ್ಲಿದ್ದ ಇಬ್ಬರು ಪ್ರಯಾಣಿಕರು ಅದೃಷ್ಟವಶಾತ್ ಸುರಕ್ಷಿತವಾಗಿ ಪಾರಾಗಿದ್ದಾರೆ.

Chennai OMR road collapse: ಚೆನ್ನೈನಲ್ಲಿ ರಸ್ತೆಯಲ್ಲಿ ಆರಾಮಾಗಿ ಕಾರು ಓಡಿಸಿಕೊಂಡು ಹೋಗುತ್ತಿದ್ದವರಿಗೆ ಕ್ಷಣಮಾತ್ರದಲ್ಲಿ ಶಾಕ್ ಎದುರಾಗಿದೆ. ದಿಢೀರ್ ರಸ್ತೆ ಕುಸಿದು ದೊಡ್ಡ ಗುಂಡಿಯೊಂದು ನಿರ್ಮಾಣವಾಗಿದೆ. ಈ ಗುಂಡಿಗೆ ಕಾರೊಂದು ಬಿದ್ದು ಪಲ್ಟಿಯಾಗಿರುವ ಘಟನೆ ಆತಂಕ ಸೃಷ್ಟಿಸಿದೆ.

ಚೆನ್ನೈನ ಪ್ರಮುಖ ಐಟಿ ಕಾರಿಡಾರ್‌ ರಾಜೀವ್ ಗಾಂಧಿ ಸಾಲೈ (OMR)ನಲ್ಲಿ ದಿಢೀರ್ ರಸ್ತೆ ಕುಸಿದು ಸುಮಾರು 10 ಅಡಿ ಆಳದ ಗುಂಡಿ ನಿರ್ಮಾಣವಾಗಿದೆ. ಟೈಡಲ್ ಪಾರ್ಕ್ ಮತ್ತು ತಾರಾಮಣಿ ಬಳಿಯ ತಿರುವನ್ಮಿಯೂರು ಎಂಆರ್‌ಟಿಎಸ್ (MRTS) ನಿಲ್ದಾಣದ ಸಮೀಪ ಘಟನೆ ನಡೆದಿದ್ದು, ಗುಂಡಿಗೆ ಬಿಳಿ ಬಣ್ಣದ ಕಾರಿನ ಮುಂಭಾಗದ ಚಕ್ರ ಸಿಲುಕಿಕೊಂಡಿದೆ. ಮೆಟ್ರೋ ಭೂಗತ ಸುರಂಗ ಕಾಮಗಾರಿ ನಡೆಯುತ್ತಿರುವ ಸ್ಥಳದ ಪಕ್ಕದಲ್ಲೇ ರಸ್ತೆ ಕುಸಿದಿದೆ.

ಇಬ್ಬರು ಪ್ರಯಾಣಿಕರು ಸುರಕ್ಷಿತ

ಇದರ ಬೆನ್ನಲ್ಲೇ ಪಕ್ಕದಲ್ಲಿದ್ದ ಸರ್ಕಾರಿ ಬಸ್ (MTC) ಚಲಿಸಲು ಮುಂದಾದಾಗ ಉಂಟಾದ ಕಂಪನಕ್ಕೆ ಕಾರು ಸಂಪೂರ್ಣವಾಗಿ ಗುಂಡಿಯೊಳಗೆ ತಲೆಕೆಳಗಾಗಿ ಬಿದ್ದಿದೆ. ಕಾರಿನಲ್ಲಿದ್ದ ಇಬ್ಬರು ಪ್ರಯಾಣಿಕರು ಅದೃಷ್ಟವಶಾತ್ ಯಾವುದೇ ಗಂಭೀರ ಗಾಯಗಳಿಲ್ಲದೆ ಪಾರಾಗಿದ್ದು, ಸ್ಥಳೀಯರು ಕೂಡಲೇ ನೆರವಿಗೆ ಧಾವಿಸಿ ಅವರನ್ನು ಸುರಕ್ಷಿತವಾಗಿ ಹೊರಕ್ಕೆ ಕರೆತಂದಿದ್ದಾರೆ.

ಮೆಟ್ರೋ ಕಾಮಗಾರಿಯಿಂದ ರಸ್ತೆ ಕುಸಿತ?

ಈ ಭಾಗದಲ್ಲಿ ಚೆನ್ನೈ ಮೆಟ್ರೋ ಹಂತ-2ರ ಭೂಗತ ಸುರಂಗ ಕಾಮಗಾರಿ ನಡೆಯುತ್ತಿದೆ. ಕಾಮಗಾರಿಯಿಂದ ಮಣ್ಣು ಸ್ಥಳಾಂತರಗೊಂಡು ರಸ್ತೆ ಕುಸಿದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಆದರೆ ರಸ್ತೆ ಕುಸಿತಕ್ಕೆ ನಿಖರ ಕಾರಣ ಏನು ಎಂಬುದು ಇನ್ನಷ್ಟೇ ತಿಳಿಯಬೇಕಿದೆ. ಅಧಿಕಾರಿಗಳು ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.

ಒಎಂಆರ್‌ನಲ್ಲಿ ಭಾರಿ ಟ್ರಾಫಿಕ್ ಜಾಮ್

ರಸ್ತೆ ಕುಸಿದು ಕಾರು ಗುಂಡಿಗೆ ಬಿದ್ದ ಪರಿಣಾಮ ಒಎಂಆರ್‌ನಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಗಿದೆ. ರಸ್ತೆಯಲ್ಲಿ ವಾಹನಗಳ ಸಾಲು ಬೆಳೆದಿದ್ದು, ಸವಾರರು ಹಾಗೂ ಪ್ರಯಾಣಿಕರು ಪರದಾಡುವಂತಾಗಿದೆ. ಸ್ಥಳದಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದು, ಹೆಚ್ಚಿನ ಅನಾಹುತ ಆಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತಿದೆ.