ವಿಶೇಷ ವರದಿ ತುಮಕೂರು
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದರೂ ಪಕ್ಷದ ಆಂತರಿಕ ಚುನಾವಣೆಗಳಲ್ಲಿ ಈ ಹಿಂದೆ ಇದ್ದಷ್ಟು ಜೋಶ್ ಕಾಣುತ್ತಿಲ್ಲ. ಸರ್ಕಾರದಲ್ಲಿ ಪ್ರಭಾವಿ ಸ್ಥಾನ ಪಡೆದಿರುವ ಸಚಿವದ್ವಯರು ಸೇರಿ 7 ಕೈ ಶಾಸಕರು ಜಿಲ್ಲೆಯಲ್ಲಿದ್ದರೂ ಯುವ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಅಷ್ಟಾಗಿ ಹುಮ್ಮಸ್ಸು ಕಾಣುತ್ತಿಲ್ಲ. ಹಾಗಾಗಿ, ಆ.20ರಿಂದ ಆರಂಭವಾಗಿರುವ ಯುವ ಕಾಂಗ್ರೆಸ್ ಸದಸ್ಯತ್ವ ನೋಂದಣಿ ಹಾಗೂ ಚುನಾವಣೆ ಪ್ರಕ್ರಿಯೆಗೆ ಜಿಲ್ಲೆಯಲ್ಲಿ ಎಲ್ಲಿಯೂ ಉತ್ತಮ ಪ್ರತಿಕ್ರಿಯೆ ಕಂಡುಬಂದಿಲ್ಲ.
ಈ ಬಾರಿ ಜಿಲ್ಲಾ ಯುವ ಕಾಂಗ್ರೆಸ್ನ ಆಂತರಿಕ ಚುನಾವಣೆ ಸದ್ದುಗದ್ದಲವಿಲ್ಲದೆ ನಡೆಯುತ್ತಿದೆ. ಪಕ್ಷದೊಳಗೆ ಪರಸ್ಪರ ಪೈಪೋಟಿ, ಗುಂಪುಗಾರಿಕೆ ಸೃಷ್ಟಿಯಾಗಲಿದೆ ಎಂಬ ಕಾರಣಕ್ಕೆ ಅಸೆಂಬ್ಲಿ ಹಾಗೂ ಬ್ಲಾಕ್ ಕಾಂಗ್ರೆಸ್ಗಳಿಗೆ ಈಗಾಗಲೇ ಬಹುತೇಕ ಅವಿರೋಧ ಆಯ್ಕೆ ನಡೆದಿದೆ. ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ, ರಾಜ್ಯ ಪ್ರಧಾನ ಕಾರ್ಯದರ್ಶಿ, ಜಿಲ್ಲಾಧ್ಯಕ್ಷ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಸೆಂಬ್ಲಿ ಅಧ್ಯಕ್ಷ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದ್ದು, ಜಿಲ್ಲೆಯಲ್ಲಿ ಚುನಾವಣೆ ಕಣ ಅಷ್ಟು ರಂಗು ಪಡೆದಿಲ್ಲ.
ತಿಪಟೂರು ಶಾಸಕ ಕೆ.ಷಡಕ್ಷರಿ ಸಹೋದರ ಜಿಪಂ ಮಾಜಿ ಸದಸ್ಯ ದಿವಂಗತ ಕೆ.ರಾಜಶೇಖರ್ ಪುತ್ರ ನಿಖಿಲ್ರಾಜ್ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವುದು ಗಮನಸೆಳೆಯುವಂತೆ ಮಾಡಿದೆ. ಎನ್ಎಸ್ಯುಐನ ಆಕಾಶ್ ಸ್ಪರ್ಧಿಸಿದ್ದು, ಚುನಾವಣೆ ನೆಪಮಾತ್ರಕ್ಕೆ ಎಂಬಂತೆ ಇದೆ. ಜಿಲ್ಲೆಯವರೇ ಆದ ಇಲಾಹಿ ಸಿಕಂದರ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ. ಜಿಲ್ಲಾ ಪ್ರಧಾನ ಕಾರ್ಯದರ್ಶಿಗೆ ತುರುವೇಕೆರೆಯ ಯೋಗೀಶ್, ತಿಪಟೂರಿನ ಭರತ್, ತುಮಕೂರಿನ ಮಹಮ್ಮದ್ ಇಬ್ರಾಹಿಂ, ಮೋಹನ್ಗೌಡ, ಅಮಾನ ಉಲ್ಲಾ ಖಾನ್ ಸೇರಿ 8 ಮಂದಿ ಕಣದಲ್ಲಿದ್ದಾರೆ. 1 ತಿಂಗಳು ನಡೆಯಲಿರುವ ಚುನಾವಣಾ ಪ್ರಕ್ರಿಯೆ ಪಕ್ಷ ಬಲವರ್ಧನೆ ನಿಟ್ಟಿನಲ್ಲಿ ಸದಸ್ಯತ್ವ ನೋಂದಣಿಗೆ ಹೆಚ್ಚು ಪೂರಕವಾಗಿರಲಿದೆ.
ನಿಖಿಲ್ಗೆ ಸಾರಥ್ಯ ನಿಶ್ಚಿತ: ಈ ಬಾರಿ ಯುವ ಕಾಂಗ್ರೆಸ್ ಸಾರಥ್ಯ ಬಹುತೇಕ ನಿಖಿಲ್ ರಾಜ್ಗೆ ಒಲಿಯಲಿದೆ. ರಾಜಕೀಯ ಹಿನ್ನೆಲೆ ಕುಟುಂಬದಿಂದ ಬಂದಿರುವ ನಿಖಿಲ್ಗೆ ಯುವ ಮುಖಂಡ ವಿಧಾನಪರಿಷತ್ ಸದಸ್ಯ ಆರ್.ರಾಜೇಂದ್ರ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಶಿ ಹುಲಿಕುಂಟೆ ಮಠ್ ಸಹ ಬೆಂಬಲ ಸೂಚಿಸಿದ್ದು, ಅಧ್ಯಕ್ಷ ಗಾದಿಗೇರುವ ಹಾದಿ ಸುಗಮವಾಗಿದೆ. ನಿಖಿಲ್ ತಮ್ಮ ತಂದೆ ಹಾದಿಯಲ್ಲಿ ಜಿಪಂ ಪ್ರವೇಶಿಸಲು ಹವಣಿಸುತ್ತಿದ್ದು, ಹೊನ್ನವಳ್ಳಿ ಜಿಪಂ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ.
ತಿಂಗಳವರೆಗೆ ಎಲೆಕ್ಷನ್: ಆ.20ರಿಂದ ಸೆ.20ರವರೆಗೆ 1 ತಿಂಗಳ ಕಾಲ ಯುವ ಕಾಂಗ್ರೆಸ್ ಆಂತರಿಕ ಚುನಾವಣೆ ನಡೆಯಲಿರುವುದು ವಿಶೇಷ. ಆನ್ಲೈನ್ನಲ್ಲೇ ಸದಸ್ಯತ್ವ ನೋಂದಣಿ ಜತೆಗೆ ವೋಟಿಂಗ್ ಪ್ರಕ್ರಿಯೆ ನಡೆಯಲಿದೆ. ವೈಸಿಇಎ (ಯೂತ್ ಕಾಂಗ್ರೆಸ್ ಎಲೆಕ್ಷನ್ ಅಥಾರಿಟಿ) ಆ್ಯಪ್ನಲ್ಲಿ ಸದಸ್ಯತ್ವ ನೋಂದಣಿ ಪ್ರಕ್ರಿಯೆ ಮಾಡಿಕೊಂಡು ಅಲ್ಲಿಯೇ ಮತ ಚಲಾಯಿಸಬಹುದಾಗಿದೆ. ರಾಜ್ಯಾಧ್ಯಕ್ಷ ಸ್ಥಾನ, ರಾಜ್ಯ ಪ್ರಧಾನ ಕಾರ್ಯದರ್ಶಿ, ಜಿಲ್ಲಾಧ್ಯಕ್ಷ ಸ್ಥಾನ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಜಿಲ್ಲೆಯ ಯುವ ಕಾಂಗ್ರೆಸ್ ಕಾರ್ಯಕರ್ತರು ಹಕ್ಕು ಚಲಾಯಿಸಬಹುದಾಗಿದೆ. ಉಳಿದಂತೆ ಅಸೆಂಬ್ಲಿ, ಬ್ಲಾಕ್ ಕಾಂಗ್ರೆಸ್ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ.
ದೀಪಿಕಾರೆಡ್ಡಿ, ಮಂಜುನಾಥ್ ಗೌಡ ನೇರ ಫೈಟ್: ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ಕಂಡುಬಂದಿದೆ. ಕಳೆದ ಬಾರಿ ಮಹಮ್ಮದ್ ನಲ್ಪಾಡ್, ರಕ್ಷ ರಾಮಯ್ಯ ನಡುವಿನ ಕಾದಾಟಕ್ಕಿಂತ ಈ ಬಾರಿಯ ಪೈಪೋಟಿ ತೀವ್ರ ಕುತೂಹಲದಿಂದ ಕೂಡಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬೆಂಬಲ ಪಡೆದಿರುವ ಮಂಜುನಾಥ್ ಗೌಡ ಹಾಗೂ ಈ ಹಿಂದಿನ ಹಲವು ಯುವ ಕಾಂಗ್ರೆಸ್ ಅಧ್ಯಕ್ಷರ ಅತ್ಯಾಪ್ತರೆನಿಸಿರುವ ದೀಪಿಕಾರೆಡ್ಡಿ ಸ್ಪರ್ಧೆ ಚುನಾವಣಾ ಕಣವನ್ನು ರಂಗೇರಿಸಿದೆ. ಜಿಲ್ಲೆಯಲ್ಲಿರೂ ದೀಪಿಕಾಗೆ ಹೆಚ್ಚಿನ ಬೆಂಬಲ ಇದೆ.
ಜಿಲ್ಲೆಯಲ್ಲಿ ಯಾವುದೇ ಗೊಂದಲವಿಲ್ಲದೆ ಯುವ ಕಾಂಗ್ರೆಸ್ ಆಂತರಿಕ ಚುನಾವಣೆ ನಡೆಯುತ್ತಿದೆ. ಗುಂಪುಗಾರಿಕೆ, ಬಣ ಸೃಷ್ಟಿಗೆ ಅವಕಾಶ ಕೊಡದಂತೆ ಪಕ್ಷ ಸಂಟನೆಯಲ್ಲಿ ಹೆಚ್ಚು ತೊಡಗಿಸಿಕೊಂಡವರನ್ನು ಅಸೆಂಬ್ಲಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಗಳಿಗೆ ಆಯ್ಕೆ ಮಾಡಲಾಗಿದೆ. ಪಕ್ಷ ಬಲವರ್ಧನೆ, ಆರೋಗ್ಯಕರ, ಸ್ಪರ್ಧಾತ್ಮಕ ಚುನಾವಣೆಗೆ ಒತ್ತು ನೀಡಲಾಗಿದೆ.| ಶಶಿಹುಲಿಕುಂಟೆಮಠ್ ಜಿಲ್ಲಾಧ್ಯಕ್ಷ, ಯುವ ಕಾಂಗ್ರೆಸ್