ನವದೆಹಲಿ: ಪತಂಜಲಿ ಸಂಸ್ಥೆ ಬಿಡುಗಡೆ ಮಾಡಿದ ಕೊವಿಡ್-19 ನಿವಾರಕ ಔಷಧಿ ಕರೊನಿಲ್ ಮಾರಾಟಕ್ಕೆ ಆಯುಷ್ ಸಚಿವಾಲಯ ತಡೆ ಹಿಡಿದಿದೆ. ಔಷಧಿಯ ಕ್ಲಿನಿಕಲ್ ಪ್ರಯೋಗದ ಸಂಪೂರ್ಣ ದಾಖಲೆ ನೀಡಲು ಸೂಚಿಸಿದೆ.
ಕರೊನಲ್ ಬಿಡುಗಡೆಯಾದಾಗಿನಿಂದಲೂ ವಿವಾದ ನಡೆಯುತ್ತಲೇ ಇದೆ. ಸಾಮಾಜಿಕ ಜಾಲತಾಣಗಳಲ್ಲಂತೂ ಕರೊನಿಲ್ನ್ನು ಮನುಷ್ಯರ ಮೇಲೆ ಪ್ರಯೋಗ ಮಾಡಿದ ಬಗ್ಗೆ, ಅದನ್ನು ಸದ್ಯ ತಡೆಹಿಡಿದ ಬಗ್ಗೆ ಏನೇನೋ ಊಹಾಪೋಹಗಳು, ಇಲ್ಲಸಲ್ಲದ ವಿಚಾರಗಳು ವೈರಲ್ ಆಗುತ್ತಲೇ ಇವೆ.
ಅದೆಲ್ಲದರ ಮಧ್ಯೆ ಕರೊನಿಲ್ ಆಯುರ್ವೇದ ಔಷಧಿಗೆ ತಡೆ ಹಿಡಿಯಲು ಕಾರಣ ಆಯುಷ್ ಇಲಾಖೆಯಲ್ಲಿರುವ ಮುಸ್ಲಿಂ ಸದಸ್ಯರು ಎಂಬ ಒಂದು ಪೊಸ್ಟ್ ಫೇಸ್ಬುಕ್, ಟ್ವಿಟರ್ಗಳಲ್ಲಿ ಹರಿದಾಡುತ್ತಿದೆ. ಆಯುಷ್ ಇಲಾಖೆಯಲ್ಲಿ ಔಷಧಿಗಳ ಅನುಮೋದನೆಗೆ ಸಂಬಂಧಪಟ್ಟಂತೆ ಇರುವ ತಜ್ಞರ ಸಮಿತಿಯಲ್ಲಿ ಆರು ಮಂದಿ ಮುಸ್ಲಿಮರಿದ್ದಾರೆ. ಹಾಗಾಗಿ ಆಯುರ್ವೇದ ಔಷಧಿ ಕರೊನಿಲ್ಗೆ ಅನುಮತಿ ಸಿಕ್ಕಿಲ್ಲ. ಅದನ್ನು ತಡೆಹಿಡಿಯಲಾಗಿದೆ ಎಂಬ ಪೋಸ್ಟ್ಗಳು ಹರಿದಾಡುತ್ತಿವೆ. ಇದನ್ನೂ ಓದಿ: ಲವರ್ ಜತೆ ಸೇರಿ ಪತಿ ಕೊಂದ ಪತ್ನಿ: ದೃಶ್ಯಂ ಸಿನಿಮಾದಂತೆ ಮುಚ್ಚಿ ಹಾಕಲು ಯತ್ನಿಸಿ ಸಿಕ್ಕಿ ಬಿದ್ದಿದ್ಹೇಗೆ?
ಟ್ವಿಟರ್ನಲ್ಲೂ ಕೂಡ ಇದೇ ಪೋಸ್ಟ್ಗಳು ಹಿಂದಿಯಲ್ಲಿ ವೈರಲ್ ಆಗುತ್ತಿವೆ. ಹಾಗೇ, ತಜ್ಞರ ಸಮಿತಿಯಲ್ಲಿ ಇದ್ದಾರೆ ಎನ್ನಲಾದ ಮುಸ್ಲಿಂ ಮುಖಂಡರ ಹೆಸರನ್ನೂ ಉಲ್ಲೇಖಿಸಲಾಗಿದೆ. ಅಸೀಂ ಖಾನ್, ಮುನ್ವರ್ ಖಾಜ್ಮಿ, ಖದೀರನ್ ನಿಸಾ, ಮಕ್ಬೂಲ್ ಅಹ್ಮದ್ ಖಾನ್, ಅಸಿಯಾ ಖಾನಮ್, ಶಾಗುಪ್ತಾ ಫರ್ವೀನ್ ಅವರು ಆಯುಷ್ ಇಲಾಖೆಯ ಔಷಧಿ ಸಂಶೋಧನೆ ಮತ್ತು ಅನುಮೋದನಾ ತಜ್ಞಸಮಿತಿಯಲ್ಲಿರುವವರು. ಈಗ ನಿಮಗೆಲ್ಲ ಅರ್ಥ ಆಗಿರಬಹುದು, ಬಾಬಾ ರಾಮ್ದೇವ್ ಅವರ ಕರೊನಿಲ್ ಆಯುರ್ವೇದ ಔಷಧಿ ಯಾಕೆ ತಡೆಹಿಡಿಯಲ್ಪಟ್ಟಿದೆ ಎಂಬುದು. ಇದೊಂದು ವ್ಯೂವಾಹತ್ಮಕ ಜಿಹಾದ್ ಅಲ್ಲವೇ? ಎಂದು ವೈರಲ್ ಆದ ಪೋಸ್ಟ್ನಲ್ಲಿ ಬರೆಯಲಾಗಿದೆ. ಈ ಪೋಸ್ಟ್ ಹಲವು ಬಾರಿ ಶೇರ್ ಆಗಿದೆ. ಇದನ್ನೂ ಓದಿ:ಕೊವಿಡ್-19 ವಿರುದ್ಧ ಹೋರಾಟದಲ್ಲಿ ಸೋತು, ಶರಣಾಗಿದ್ದಾರೆ ಪ್ರಧಾನಿ ಮೋದಿ: ರಾಹುಲ್ ಗಾಂಧಿ
ಆದರೆ ಇದೊಂದು ಶುದ್ಧ ಸುಳ್ಳು ಎಂಬುದನ್ನು ಇಂಡಿಯಾ ಟುಡೆ ಆ್ಯಂಟಿ ಫೇಕ್ ನ್ಯೂಸ್ ವಾರ್ ರೂಂ ಪತ್ತೆಹಚ್ಚಿದೆ. ಹೀಗೆ ವೈರಲ್ ಆಗಿರುವ ಮುಸ್ಲಿಂ ಹೆಸರುಗಳು ಆಯುಷ್ ಇಲಾಖೆಯ ತಜ್ಞ ಸಮಿತಿಯಲ್ಲಿ ಇರುವವರದ್ದಲ್ಲ. ಆಯುರ್ವೇದಿಕ್ ಔಷಧಿಗೆ ಅನುಮೋದನೆ ನೀಡಲು ಪರವಾನಗಿ ಪಡೆದವರದ್ದೂ ಅಲ್ಲ ಎಂಬುದು ಸಾಬೀತಾಗಿದೆ.
ಹಾಗೇ..ಈ ಎಲ್ಲ ಹೆಸರುಗಳೂ ಇರುವುದು ಯುನಾನಿ ಮೆಡಿಸಿನ್ ಡಿಪಾರ್ಟ್ಮೆಂಟ್ನ ವೆಬ್ಸೈಟ್ನಲ್ಲಿ. ಆಯುಷ್ ಇಲಾಖೆಯ ಆಯುರ್ವೇದ ವಿಭಾಗಕ್ಕೂ, ಈ ಹೆಸರುಗಳಿಗೂ ಸಂಬಂಧವಿಲ್ಲ ಎಂದು ಫ್ಯಾಕ್ಟ್ಚೆಕ್ನಿಂದ ಗೊತ್ತಾಗಿದೆ.
ಈ ಬಗ್ಗೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಆಲ್ ಇಂಡಿಯಾ ಆಯುರ್ವೇದಿಕ್ ಕಾಂಗ್ರೆಸ್ನ ಅಧ್ಯಕ್ಷ ದೇವೇಂದ್ರ ತ್ರಿಗುಣಾ ಅವರು ಪ್ರತಿಕ್ರಿಯೆ ನೀಡಿದ್ದು, ಆಯುರ್ವೇದ ಔಷಧಿಗಳಿಗೆ ಆಯಾ ರಾಜ್ಯಗಳಲ್ಲಿರುವ ಆಯುಷ್ ಇಲಾಖೆಗಳೇ ಪರವಾನಗಿ ನೀಡುತ್ತಿವೆ. ತಜ್ಞರ ಸಮಿತಿ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ‘ಮನೆಯ ಕಿಟಕಿ ಮುಚ್ಚಿರಲಿ…ಪಾತ್ರೆ, ಡ್ರಮ್ಗಳನ್ನು ಬಡಿಯಿರಿ…’: ಈ ಸಲಹೆ ಯಾಕೆ ಗೊತ್ತಾ?
ಇನ್ನು ಯುನಾನಿ ಮೆಡಿಸಿನ್ ಡಿಪಾರ್ಟ್ಮೆಂಟ್ನ ವೆಬ್ಸೈಟ್ಗೆ(https://ccrum.res.in/UserView/index?mid=1424 ) ಭೇಟಿ ನೀಡಿದರೆ, ಮೇಲಿರುವ ಎಲ್ಲ ಹೆಸರುಗಳನ್ನೂ ಕಾಣಬಹುದು. ಇವರೆಲ್ಲರೂ ಕಾರ್ಯ ನಿರ್ವಹಿಸುತ್ತಿರುವುದು ಆಯುಷ್ ಇಲಾಖೆಗೆ ಯುನಾನಿ ಔಷಧಿ ಪದ್ಧತಿ ವಿಭಾಗದಲ್ಲಿ ಎಂಬುದು ಸಾಬೀತಾಗಿದೆ. (ಏಜೆನ್ಸೀಸ್)