ಶ್ರೀಲಂಕಾದ ರುಮೇಶ್ಗೆ ಡೈಮಂಡ್ ಲೀಗ್ ಟ್ರೋಫಿ
ಬ್ರಸೆಲ್ಸ್: ಯಶಸ್ಸಿನ ಓಟ ಮುಂದುವರಿಸಿರುವ ಶ್ರೀಲಂಕಾದ ಜಾವೆಲಿನ್ ಎಸೆತಗಾರ ರುಮೇಶ್ ಪಥಿರಗೆ ಡೈಮಂಡ್ ಲೀಗ್ ಫೈನಲ್ಸ್ (Diamond League Final) ಕಿರೀಟ ಮುಡಿಗೇರಿಕೊಂಡರು. ಇದರೊಂದಿಗೆ ಡೈಮಂಡ್ ಟ್ರೋಫಿ ಗೆದ್ದ ದ್ವೀಪರಾಷ್ಟ್ರದ ಮೊದಲ ಅಥ್ಲೀಟ್ ಎಂಬ ಹೆಗ್ಗಳಿಕೆಗೂ ಪಾತ್ರರಾದರು.
ಬ್ರಸೆಲ್ಸ್ನ ಕಿಂಗ್ ಬೌಡೊಯಿನ್ ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ ನಡೆದ ಡೈಮಂಡ್ ಲೀಗ್ನ ಅಂತಿಮ ಚರಣದ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ರುಮೇಶ್, ತನ್ನ ಮೂರನೇ ಪ್ರಯತ್ನದಲ್ಲಿ 89.04 ಮೀಟರ್ ದೂರಕ್ಕೆ ಭರ್ಜಿ ಎಸೆಯುವ ಮೂಲಕ ಪ್ರಶಸ್ತಿ ಒಲಿಸಿಕೊಂಡರು. ಜತೆಗೆ ಈ ಸಾಧನೆ ಮಾಡಿದ ದಣ ಏಷ್ಯಾದ ಎರಡನೇ ಅಥ್ಲೀಟ್ ಎನಿಸಿದರು. ಅವಳಿ ಒಲಿಂಪಿಕ್ಸ್ ಪದಕ ವಿಜೇತ ಭಾರತದ ನೀರಜ್ ಚೋಪ್ರಾ ಮೊದಲಿಗ.
80.42 ಮೀಟರ್ ಎಸೆತದೊಂದಿಗೆ ಸ್ಪರ್ಧೆ ಆರಂಭಿಸಿದ 23 ವರ್ಷದ ರುಮೇಶ್ ನಂತರ ತನ್ನ ಆರು ಪ್ರಯತ್ನಗಳಲ್ಲಿ ಕ್ರಮವಾಗಿ 79.73 ಮೀ, 89.04 ಮೀ, 85.96 ಮೀ, 85.76 ಮೀ ಎಸೆದರೆ, ಕೊನೇ ಯತ್ನದಲ್ಲಿ ಫೌಲ್ ಎಸಗಿಸಿದರು. ಹವಾಮಾನ ಪರಿಸ್ಥಿತಿ ಬಹಳ ಕಷ್ಟಕರವಾಗಿದ್ದ ಕಾರಣ, ದೂರಕ್ಕೆ ಎಸೆಯಲು ಸಾಧ್ಯವಾಗಲಿಲ್ಲ. ಆದರೆ, ಶ್ರೀಲಂಕಾದಂಥ ಸಣ್ಣ ದೇಶದಿಂದ ಇಂಥ ಪ್ರಮುಖ ಕ್ರೀಡಾಕೂಟವನ್ನು ಗೆದ್ದಿರುವುದು ನಿಜಕ್ಕೂ ಖುಷಿ ನೀಡಿದೆ ಎಂದು ರುಮೇಶ್ ಸಂತಸ ವ್ಯಕ್ತಪಡಿಸಿದರು.
ಪೋಲೆಂಡ್ನ ಡೇವಿಡ್ ವೆಗ್ನರ್ ವೈಯಕ್ತಿಕ ಅತ್ಯುತ್ತಮ 87.47 ಮೀಟರ್ ಎಸೆತದೊಂದಿಗೆ ದ್ವೀತಿಯ ಸ್ಥಾನ ಪಡೆದರೆ, ಟ್ರಿನಿಡಾಡ್ ಮತ್ತು ಟೊಬಾಗೋದ ಕೆಶೋರ್ನ್ ವಾಲ್ಕಾಟ್ 83.99 ಮೀಟರ್ ಎಸೆತದೊಂದಿಗೆ ಮೂರನೇ ಸ್ಥಾನ ಪಡೆದರು.
ಡೈಮಂಡ್ ಲೀಗ್ ಫೈನಲ್ಸ್ಗೆ ಅರ್ಹತೆ ಪಡೆದಿದ್ದ ಭಾರತದ ನೀರಜ್ ಚೋಪ್ರಾ ಗಾಯದ ಸಮಸ್ಯೆಯಿಂದಾಗಿ ಕೂಟದಿಂದ ಹೊರಗುಳಿದಿದ್ದರು. ಹಾಲಿ ವರ್ಷ ಈ ವರ್ಷ ಅದ್ಭುತ ಫಾಮ್ರ್ನಲ್ಲಿರುವ ರುಮೇಶ್ ರೋಮ್ ಚರಣದಲ್ಲಿ 82.62 ಮೀಟರ್ ದೂರ ಎಸೆದರೆ, ಗ್ಲಾಸ್ಗೋ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಸ್ವರ್ಣ ಪದಕಕ್ಕೆ ಮುತ್ತಿಕ್ಕಿದ್ದರು. ಅವರು ಹಾಲಿ ಋತುವಿನಲ್ಲಿ 2 ಬಾರಿ 92 ಮೀ.ಗೂ ಅಧಿಕ ದೂರ ಭರ್ಜಿ ಎಸೆದ ಸಾಧನೆ ಮಾಡಿದ್ದಾರೆ.