ನ್ಯೂಸ್

ದೃಶ್ಯ ಕಟ್ಟಲು ಶುರು ಮಾಡಿದ ‘ಧೂಪದ ಮಕ್ಕಳು’

ಚಾಮರಾಜನಗರ: ಕಥಾ ಸಂಕಲನದೊಳಗೊಂದು ಕಥೆಯಾಗಿ ಅಕ್ಷರ ರೂಪದಲ್ಲಿ ಶಿಕ್ಷಣ ಮತ್ತು ಬದುಕಿನ ತಾಕಲಾಟವನ್ನು ಓದುಗರ ಎದೆಗಿಳಿಸಿದ್ದ ‘ಧೂಪದ ಮಕ್ಕಳು’ ಈಗ ದೃಶ್ಯ ಕಟ್ಟಲು ಶುರು ಮಾಡಿದ್ದಾರೆ.


ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕೃತ ಸಾಹಿತಿ ಸ್ವಾಮಿ ಪೊನ್ನಾಚಿ ರಚಿಸಿರುವ ಧೂಪದ ಮಕ್ಕಳು ಕೃತಿ ಆಧಾರಿತ ಸಿನಿಮಾ ಚಿತ್ರೀಕರಣ ಬುಧವಾರ ಆರಂಭಗೊಂಡಿದೆ. ಅಂತಾರಾಷ್ಟ್ರೀಯ, ರಾಷ್ಟ್ರೀಯ ಮತ್ತು ಅತ್ಯುತ್ತಮ ಪ್ರಶಸ್ತಿಗಳನ್ನು ಪಡೆದುಕೊಂಡಿರುವ ಸಿನಿಮಾ ನಿರ್ದೇಶಕ ಉಮಾಶಂಕರ್ ನಿರ್ದೇಶಕನದಲ್ಲಿ ಶೂಟಿಂಗ್ ಪ್ರಾರಂಭಗೊಂಡಿದೆ. ಭವಮಾಧ್ಯಮ ನಿರ್ಮಾಣದ ಹೊಣೆ ಹೊತ್ತಿದೆ.


ಮಲೆ ಮಹದೇಶ್ವರ ಬೆಟ್ಟದ ಪೊನ್ನಾಚಿಯ ಮರೂರಿನಲ್ಲಿ ಧೂಪದ ಮಕ್ಕಳು ದೃಶ್ಯಕಾವ್ಯವಾಗಿ ಮಾರ್ಪಾಡಾಗುತ್ತಿದೆ. ಚಿತ್ರಕ್ಕೆ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಮಂಜುಳಾ ಕ್ಲ್ಯಾಪ್ ಮಾಡಿ ಶುಭ ಕೋರಿದರು. ಗ್ರಾಮದ ಸರ್ಕಾರಿ ಶಾಲೆಯಲ್ಲಿ ತರಗತಿ ದೃಶ್ಯಗಳ ಚಿತ್ರೀಕರಣ ನಡೆಯುತ್ತಿದ್ದು, ಮುಂದಿನ 15 ದಿನಗಳವರೆಗೆ ಪೊನ್ನಾಚಿ, ಮಲೆ ಮಹದೇಶ್ವರ ಬೆಟ್ಟ, ತಾಳಬೆಟ್ಟದಲ್ಲಿ ಶೂಟಿಂಗ್ ನಡೆಯಲಿದೆ. ಚಿತ್ರಕ್ಕೆ ಸಾಹಿತಿ ಸ್ವಾಮಿ ಪೊನ್ನಾಚಿ ಮತ್ತು ನಿರ್ದೇಶಕ ಉಮಾಶಂಕರ್ ಕಥೆ, ಸ್ವಾಮಿ ಪೊನ್ನಾಚಿ ಮತ್ತು ಮಂಜು ದೇವರಹಳ್ಳಿ ಸಂಭಾಷಣೆ, ಚಿತ್ರನಟಿ ಜಯಮಾಲಾ ಪತಿ ರಾಮಚಂದ್ರ ಕ್ಯಾಮರಾ ಕೆಲಸ ಮಾಡುತ್ತಿದ್ದಾರೆ.

ಸೋಲಿಗರ ಮಕ್ಕಳ ಅಭಿಯನ: ಧೂಪದ ಮಕ್ಕಳು ಚಿತ್ರದಲ್ಲಿ ಸೋಲಿಗರ ಮಕ್ಕಳು ಅಭಿನಯಿಸುತ್ತಿದ್ದಾರೆ. ಕಥೆಯಲ್ಲಿ ಮುಖ್ಯಪಾತ್ರವಾಗಿರುವ ರಂಗಪ್ಪ ಪಾತ್ರಕ್ಕೆ ಹಸ್ತೂರಿನ ಸರ್ಕಾರಿ ಶಾಲೆಯ 5ನೇ ತರಗತಿ ವಿದ್ಯಾರ್ಥಿ ಸಂಜಯ್ ಜೀವ ತುಂಬುತ್ತಿದ್ದಾರೆ. ರಾಮೇಗೌಡನಹಳ್ಳಿಯ ಸರ್ಕಾರಿ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ ಸೇವಂತಿ ಈರಿ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಇವರೊಂದಿಗೆ ಸೋಲಿಗರ 15ಕ್ಕೂ ಹೆಚ್ಚು ಮಕ್ಕಳೂ ವಿವಿಧ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿ ಅಭಿನಯ ಕಲಿಸುವುದಕ್ಕಾಗಿಯೇ ಆಡಿಷನ್ ನಡೆಸಿ, ತರಬೇತಿ ನೀಡಿ ಸೋಲಿಗರ ಮಕ್ಕಳನ್ನು ಸಿದ್ಧಗೊಳಿಸಲಾಗಿದೆ. ಇನ್ನು ಚಿತ್ರದಲ್ಲಿ ಇಂತಿ ನಿನ್ನ ಪ್ರೀತಿಯ ಚಿತ್ರ ಖ್ಯಾತಿಯ ಸೋನುಗೌಡ ಶಿಕ್ಷಕಿಯಾಗಿ, ಹಾಸ್ಯನಟನಾಗಿ ಖ್ಯಾತಿ ಪಡೆದಿರುವ ಜಹಾಂಗೀರ್ ಶಿಕ್ಷಕನ ಪಾತ್ರ ನಿರ್ವಹಿಸುತ್ತಿದ್ದಾರೆ.

ಪ್ರಶಸ್ತಿ ಪಡೆದ ಕೃತಿ:
2018ರಲ್ಲಿ ರಚನೆಯಾದ ಧೂಪದ ಮಕ್ಕಳು ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ, ಪಾಪು ಪುರಸ್ಕಾರ, ಛಂದ ಪುಸ್ತಕ ಬಹುಮಾನ, ಯುವ ಸಾಹಿತ್ಯ ಪ್ರಶಸ್ತಿ ದೊರೆತಿವೆ. ಚಾ.ನಗರದ ಅಂಕನಶೆಟ್ಟಿಮೋಳೆ ಶಾಲೆ ಶಿಕ್ಷಕ, ಮಹದೇಶ್ವರ ಬೆಟ್ಟದ ಪೊನ್ನಾಚಿ ನಿವಾಸಿ ಪ್ರಖ್ಯಾತ ಕಥೆಗಾರ ಸ್ವಾಮಿ ಪೊನ್ನಾಚಿ ಈ ಕೃತಿಯ ಬರಹಗಾರ. ಇವರ ಮೊದಲ ಕೃತಿ(ಕವನ ಸಂಕಲನ) ‘ಸಾವೊಂದನ್ನು ಬಿಟ್ಟು’ 2015ರಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪುರಸ್ಕರ ಮುಡಿಗೇರಿಸಿಕೊಂಡಿತ್ತು. ಬೇಂದ್ರೆ ಗ್ರಂಥ ಬಹುಮಾನವೂ ಸಿಕ್ಕಿತ್ತು.


ಇನ್ನು ಚಿತ್ರದ ನಿರ್ದೇಶಕ ಉಮಾಶಂಕರ್ ರಾಷ್ಟ್ರಕವಿ ಕುವೆಂಪು ಅವರ ‘ಸಾಲದ ಮಗು’, ಕೋಟಗಾನಹಳ್ಳಿ ರಾಮಯ್ಯ ರಚಿತ ‘ಬನದ ನೆರಳು’, ಬಾಗಲೋಡಿ ದೇವರಾಯ ಅವರ ‘ಮುನ್ಸಿಾ’ ಸಣ್ಣಕಥೆಯನ್ನು ಸಿನಿಮಾ ಮಾಡಿ ಅಂತಾರಾಷ್ಟ್ರೀಯ, ರಾಷ್ಟ್ರೀಯ ಮತ್ತು ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಇವರಿಬ್ಬರ ಜುಗುಲ್ಬಂದಿಯಲ್ಲಿ ಸಿದ್ಧಗೊಳ್ಳುತ್ತಿರುವ ಸಿನಿಮಾ ಮೇಲೆ ನಿರೀಕ್ಷೆ ಮೂಡಿದೆ.