ಧ್ರುವ ಸರ್ಜಾ ನಿಧನರಾಗಿ ಎರಡು ತಿಂಗಳಾಗುತ್ತ ಬಂತು. ಇತ್ತ ಅವರ ಸಾವಿನ ಬಳಿಕ ಚಿರು ಒಪ್ಪಿಕೊಂಡ ಸಿನಿಮಾಗಳ ಕಥೆಯೇನು ಎಂಬುದೇ ದೊಡ್ಡ ಸಮಸ್ಯೆಯಾಗಿತ್ತು. ಈಗಾಗಲೇ ಬಹುತೇಕ ಶೂಟಿಂಗ್ ಮುಗಿಸಿಕೊಂಡ ಸಿನಿಮಾಗಳ ಡಬ್ಬಿಂಗ್ ಮಾಡುವುದು ಹೇಗೆ ಎಂಬೆಲ್ಲ ಪ್ರಶ್ನೆಗಳು ಚಿತ್ರತಂಡದ ತಲೆಯಲ್ಲಿ ಹರಿದಾಡುತ್ತಿದ್ದವು. ಅದೆಲ್ಲದಕ್ಕೂ ಉತ್ತರ ಎಂಬಂತೆ ಧ್ರುವ ಸರ್ಜಾ ಅವರೇ ಡಬ್ ಮಾಡಿಕೊಡುವ ಬಗ್ಗೆ ಹೇಳಿಕೊಂಡಿದ್ದರು. ಇದೀಗ ಇನ್ನು ಕೆಲ ದಿನಗಳ ಬಳಿಕ ಆ ಕೆಲಸದಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಧ್ರುವ.
ಈ ನಡುವೆ ಕರೊನಾ ಸೋಂಕಿಗೂ ತುತ್ತಾಗಿದ್ದ ಧ್ರುವ ಡಬ್ಬಿಂಗ್ ಕೆಲಸವನ್ನು ಮುಂದೂಡಿದ್ದರು. ಜತೆಗೆ ಪೊಗರು ಸಿನಿಮಾದ ಕೆಲಸಗಳಲ್ಲಿಯೂ ಧ್ರುವ ಭಾಗವಹಿಸಬೇಕಿದೆ. ಆ ಕೆಲಸಕ್ಕೂ ಮುನ್ನ ರಾಜಮಾರ್ತಾಂಡ ಚಿತ್ರದ ಡಬ್ಬಿಂಗ್ ಮುಗಿಸಿಕೊಡಲಿದ್ದಾರೆ ಧ್ರುವ. ಇದೀಗ ಆ ಬಗ್ಗೆ ಹೇಳಿಕೊಂಡಿರುವ ಧ್ರುವ, ‘ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ನಿಂತು ತೆರೆಮೇಲೆ ಮತ್ತೆ ಅವನ ದೃಶ್ಯಾವಳಿಗಳನ್ನು ನೋಡುತ್ತಿದ್ದಂತೆ ನಾನು ಭಾವುಕನಾಗುತ್ತೇನೆ. ಆ ಒಂದು ಕಾರಣಕ್ಕೆ ಡಬ್ಬಿಂಗ್ ಕೆಲಸಗಳು ತಡವಾದವು. ಹಾಗಾಗಿ ಇನ್ನು ಕೆಲ ದಿನಗಳ ಬಳಿಕ ಆ ಸಿನಿಮಾಗಳ ಡಬ್ಚಿಂಗ್ನಲ್ಲಿ ಪಾಲ್ಗೊಳ್ಳಲಿದ್ದಾರಂತೆ ಧ್ರುವ.
ಕರೊನಾದಿಂದ ಈಗಷ್ಟೇ ಚೇತರಿಸಿಕೊಂಡಿರುವ ಧ್ರುವ, ಮನೆಯಲ್ಲಿಯೇ ವರ್ಕೌಟ್ ಶುರುಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವರ್ಕೌಟ್ ಮಾಡುತ್ತಿರುವ ಫೋಟೋ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಮನೆಯಲ್ಲಿಯೇ ಇರಿ, ಸದಾ ಬಿಸಿನೀರನ್ನು ಕುಡಿಯಿರಿ ಎಂದು ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ ಧ್ರುವ.