ಬೆಂಗಳೂರು: ಗಾಂಧೀಜಿ ತತ್ವಗಳನ್ನು ಗಾಳಿಗೆ ತೂರಿದ ನಕಲಿ ಕಾಂಗ್ರೆಸ್, ಬೆಳಗಾವಿಯಲ್ಲಿ ಆಯೋಜಿಸಿರುವ ಮಹಾಧಿವೇಶನ ವಿರೋಧಿಸಿ ವಿಧಾನಸೌಧ ಆವರಣದ ಮಹಾತ್ಮಗಾಂಧಿ ಪ್ರತಿಮೆ ಮುಂದೆ ಶುಕ್ರವಾರ ಬೆಳಗ್ಗೆ ರಾಜ್ಯ ಬಿಜೆಪಿ ಧರಣಿ ಹೂಡಲು ನಿರ್ಧರಿಸಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ B.Y.Vijyendra said ತಿಳಿಸಿದರು.
ಪಕ್ಷದ ರಾಜ್ಯ ಕಚೇರಿಯಲ್ಲಿ ಗುರುವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನರ ತೆರಿಗೆ ಹಣ 50 ಕೋಟಿ ರೂ. ದುರುಪಯೋಗ ಮಾಡಿಕೊಂಡು ಈ ಸಮಾವೇಶ ಸಂಘಟಿಸಿದೆ. ಸಂಕಷ್ಟಕ್ಕೆ ಸಿಲುಕಿದ ರೈತರಿಗೆ ಪರಿಹಾರ, ಅಭಿವೃದ್ಧಿ ಕೆಲಸಗಳಿಗೆ ಸರ್ಕಾರದ ಬಳಿ ಹಣವಿಲ್ಲ ಎಂದು ಟೀಕಿಸಿದರು.
ಆದರೆ,ಜನರ ತೆರಿಗೆ ಹಣವನ್ನು ಪಕ್ಷದ ಅಧಿವೇಶನಕ್ಕೆ ದುರ್ಬಳಕೆ ಮಾಡಿಕೊಂಡಿರುವುದನ್ನು ಖಂಡಿಸಿ ಈ ಹೋರಾಟ ನಡೆಯಲಿದೆ. ಪಕ್ಷದ ಎಲ್ಲ ಶಾಸಕರು, ವಿಧಾನ ಪರಿಷತ್ ಸದಸ್ಯರು ಪಾಲ್ಗೊಂಡು, ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಕಾಂಗ್ರೆಸ್ ಮಹಾಧಿವೇಶನ ಆಯೋಜಿಸಿದೆ ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡಲಿದ್ದೇವೆ ಎಂದರು.
ಸ್ವಾತಂತ್ರ್ಯ ಪೂರ್ವ ಕಾಂಗ್ರೆಸ್ ಜನಾಂದೋಲನವಾಗಿತ್ತೇ ಹೊರತು ರಾಜಕೀಯ ಪಕ್ಷವಲ್ಲ. ಸ್ವಾತಂತ್ರ್ಯದ ನಂತರ ಕಾಂಗ್ರೆಸ್ ನ್ನು ಗಾಂಧೀಜಿ ಹೇಳಿದ್ದರು. ಅದಕ್ಕೆ ವಿರುದ್ಧವಾಗಿ ನೆಹರೂ ಅವರು ಕಾಂಗ್ರೆಸ್ ನ್ನು ರಾಜಕೀಯ ಪಕ್ಷವಾಗಿ ಉಳಿಸಿಕೊಂಡರು. ಗಾಂಧೀಜಿ ತತ್ವಕ್ಕೆ ವಿರುದ್ಧವಾಗಿ ನಡೆದುಕೊಂಡ ನಕಲಿ ಕಾಂಗ್ರೆಸ್ ನವರು ಮಹಾಧಿವೇಶನ ನಡೆಸುತ್ತಿದ್ದಾರೆ ಎಂದು ಬಿ.ವೈ.ವಿಜಯೇಂದ್ರ ವ್ಯಂಗ್ಯವಾಡಿದರು.
ದೇಶದ ಅಖಂಡತೆ, ಸಮಗ್ರತೆ, ಏಕತೆ ವಿಚಾರದಲ್ಲಿ ಕಾಂಗ್ರೆಸ್ ಎಂದೂ ಬದ್ಧವಾಗಿಲ್ಲ. ಇದಕ್ಕಾಗಿ ಡಾ.ಅಂಬೇಡ್ಕರ್ ಸೇರಿ ಎಲ್ಲ ಮಹನೀಯರಿಗೆ ಅಪಮಾನಿಸುವ ನಿಲುವು ತಳೆದು, ದುಷ್ಟತನ ಮೆರೆಯುತ್ತಲೇ ಬಂದಿದ್ದಾರೆ. ಬೆಳಗಾವಿಯಲ್ಲಿ ಕಾಂಗ್ರೆಸ್ ಹಾಕಿರುವ ಪ್ಲೆಕ್ಸ್ ನಲ್ಲಿ ಭಾರತದ ನಕ್ಷೆಯನ್ನು ವಿರೂಪಗೊಳಿಸಿದ್ದು, ದುರುದ್ದೇಶಪೂರ್ವಕವಾಗಿ ಈ ಕೃತ್ಯ ಎಸಗಿ ತನ್ನ ದುಷ್ಟತನ ಬಯಲು ಮಾಡಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ಪಕ್ಷದವರ ಭಾರತ ನಕಾಶೆಯಲ್ಲಿ ಸಿಯಾಚಿನ್, ವಾಸ್ತವಿಕ ಗಡಿ ನಿಯಂತ್ರಣ ರೇಖೆ ಹಾಗೂ ಪಾಕ್ ಆಕ್ರಮಿತ ಕಾಶ್ಮೀರವನ್ನು ಬಿಟ್ಟುಕೊಟ್ಟಿದೆ. ಮಾನವ ನಿರ್ಮಿತ ಆಕಸ್ಮಿಕ ದೋಷವಲ್ಲ. ದುರುದ್ದೇಶಪೂರ್ವಕವಾಗಿ ಹೀಗೆ ಮಾಡಿದ್ದು ಕಾಂಗ್ರೆಸ್ ಪಕ್ಷದ ಇತಿಹಾಸವೇ ಕೈಗನ್ನಡಿಯಾಗಿದೆ ಎಂದು ಕಿಡಿಕಾರಿದರು.
ಸಂಸತ್ತಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಭಾಷಣದ ವಿಡಿಯೋ ಕಟ್ ಅಂಡ್ ಪೇಸ್ಟ್ ಮಾಡಿ ತಿರುಚಿ, ಡಾ.ಅಂಬೇಡ್ಕರ್ ಗೆ ಅಪಮಾನಿಸಿದ್ದಾರೆ ಎಂದು ಕಾಂಗ್ರೆಸ್ ಪಕ್ಷ ದೇಶದ ಜನರ ದಾರಿ ತಪ್ಪಿಸಲು ಪ್ರಯತ್ನಿಸುತ್ತಿದ್ದು, ಬಾಬಾ ಸಾಹೇಬ್ ಬದುಕಿದ್ದಷ್ಟೂ ಕಾಲ ಅವರಿಗೆ ಅವಮಾನ ಮಾಡುತ್ತಲೇ ಬಂದಿದೆ. ನೈಜ ಗೌರವ ಸಲ್ಲಿಸುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಮಾಡುತ್ತಿದ್ದಾರೆ ಎನ್ನುವುದನ್ನು ದೇಶದ ಜನರು ಬಲ್ಲವರಾಗಿದ್ದು, ಕಾಂಗ್ರೆಸ್ ನ ಕುಟಿಲತನ ಫಲಿಸುವುದಿಲ್ಲ ಎಂದು ಬಿ.ವೈ.ವಿಜಯೇಂದ್ರ ವಾಗ್ದಾಳಿ ಮಾಡಿದರು.