ಮದ್ದೂರು ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಿದ್ದ ಆರೋಗ್ಯ ಶಿಬಿರವನ್ನು ಮನೋಜ್ ಕುಮಾರ್ ಉದ್ಘಾಟಿಸಿದರು.ಎಂ.ಎ.ಹಾಲಪ್ಪ, ಚಿಕ್ಕಮೊಗ, ಭಾನುಪ್ರಿಯಾ, ಭಾಗ್ಯಾ, ತೇಜವತಿ ಇದ್ದರು. 
ನ್ಯೂಸ್

ಧರ್ಮಸ್ಥಳ ಯೋಜನೆ ಸೇವೆ ಶ್ಲಾಘನೀಯ

ಪ್ರಮುಖ ಮುಖ್ಯಾಂಶಗಳು

  • ಗ್ರಾಪಂ ಮಾಜಿ ಅಧ್ಯಕ್ಷ ಚಿಕ್ಕಮೊಗ ಅಭಿಮತ
  • ಜ್ಞಾನ ವಿಕಾಸ ಕಾರ್ಯಕ್ರಮದಡಿ ಆರೋಗ್ಯ ತಪಾಸಣೆ ಉಚಿತ ಶಿಬಿರ
ಮದ್ದೂರು : ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್, ಸಂಜೀವಿನಿ ಮಲ್ಟಿಸ್ಪೆಷಾಲಿಟಿ ಹಾಸ್ಪಿಟಲ್ ಮದ್ದೂರು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಕೆ.ಹೊನ್ನಲಗೆರೆ ವತಿಯಿಂದ ಜ್ಞಾನ ವಿಕಾಸ ಕಾರ್ಯಕ್ರಮದಡಿ ಆರೋಗ್ಯ ತಪಾಸಣೆ ಉಚಿತ ಶಿಬಿರ ಮಂಗಳವಾರ ಆಯೋಜಿಸಲಾಗಿತ್ತು.
ಗ್ರಾಪಂ ಮಾಜಿ ಅಧ್ಯಕ್ಷ ಚಿಕ್ಕಮೊಗ ಮಾತನಾಡಿ, ಯೋಜನೆಯು ಗ್ರಾಮೀಣ ಪ್ರದೇಶದ ಜನರ ಆರೋಗ್ಯದ ಹಿತದೃಷ್ಟಿಯಿಂದ ಇಂತಹ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ಸಂಜೀವಿನಿ ಆಸ್ಪತ್ರೆಯ ಆಡಳಿತ ಅಧಿಕಾರಿ ಮನೋಜ್ ಕುಮಾರ್ ಮಾತನಾಡಿ, ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ಎಂಬಂತೆ ಯಾವುದೇ ಕಾಯಿಲೆಗಳು ಬಂದ ನಂತರ ವೈದ್ಯರ ಬಳಿಗೆ ಹೋಗುವುದಕ್ಕಿಂತ ಕಾಯಿಲೆ ಬಾರದ ಹಾಗೆ ಮುಂಜಾಗ್ರತೆ ವಹಿಸಿಕೊಳ್ಳುವುದು ಒಳ್ಳೆಯದು ಎಂದರು.
ಯೋಜನಾಧಿಕಾರಿ ಎಂ.ಎ.ಹಾಲಪ್ಪ ಮಾತನಾಡಿ, ಯೋಜನೆಯ ವಿವಿಧ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು. ನಮ್ಮ ಸಮಾಜದಲ್ಲಿ ಜನರು ಉತ್ತಮ ಆರೋಗ್ಯ ಪಡೆದುಕೊಳ್ಳುವುದರ ಜತೆಗೆ, ಉತ್ತಮ ಆರೋಗ್ಯಕ್ಕಾಗಿ ಸಲಹೆ ಪಡೆದುಕೊಳ್ಳಲು ಪೂಜ್ಯರು ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಎಲ್ಲರೂ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಸಲಹೆ ನೀಡಿದರು.
ಶಿಬಿರದಲ್ಲಿ 113 ಸದಸ್ಯರು ಭಾಗವಹಿಸಿ ರಕ್ತದೊತ್ತಡ, ಮಧುಮೇಹ, ಕಣ್ಣಿನ ತಪಾಸಣೆ, ಇಸಿಜಿ ಹಾಗೂ ಇನ್ನಿತರ ಸಾಮಾನ್ಯ ಕಾಯಿಲೆಗಳ ಬಗ್ಗೆ ತಮ್ಮ ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಸಂಜೀವಿನಿ ಆಸ್ಪತ್ರೆಯ ಆಡಳಿತ ಅಧಿಕಾರಿ ಮನೋಜ್ ಕುಮಾರ್, ಸಮುದಾಯ ಆರೋಗ್ಯ ಅಧಿಕಾರಿ ಭಾನುಪ್ರಿಯಾ, ಡಾ.ಮಂಜುನಾಥ್, ಒಕ್ಕೂಟದ ಅಧ್ಯಕ್ಷೆ ಭಾಗ್ಯಾ, ಜ್ಞಾನವಿಕಾಸ ಸಮನ್ವಯಾಧಿಕಾರಿ ತೇಜವತಿ, ವಲಯ ಮೇಲ್ವಿಚಾರಕ ಮಂಜುನಾಥ ಇತರರಿದ್ದರು.