ಬೆಂಗಳೂರು:
ಧರ್ಮಸ್ಥಳ ಯಾತ್ರೆಯನ್ನು ನಡೆಸುವ ಮೂಲಕ ಬಿಜೆಪಿ, ಶ್ರೀಕ್ಷೇತ್ರ ಧರ್ಮಸ್ಥಳದ ಕೋಟ್ಯಾಂತರ ಭಕ್ತರ ಪರವಾಗಿದೆ ಎಂಬುದನ್ನು ಸಾಭೀತುಪಡಿಸಿದೆ ಎಂದು ಬಿಜೆಪಿ ಅಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯ ಸರ್ಕಾರ ಹುಟ್ಟು ಹಾಕಿದ್ದ ಹಲವು ಅನುಮಾನದ ನಡೆಗೆ ಉತ್ತರ ಬಯಸಿ, ನಾವು ಧರ್ಮಸ್ಥಳ ಚಲೋ ಹಮ್ಮಿಕೊಂಡಿದ್ದೆವು ಎಂದು ತಿಳಿಸಿದರು.
ಸಿದ್ದರಾಮಯ್ಯ ಸರ್ಕಾರ ಯಾರ ಪರವಾಗಿದೆ ಎನ್ನುವುದನ್ನು ಸ್ಪಷ್ಟ ಮಾಡಬೇಕು. ಸಮೀರ್‌ನಂಥ ದೇಶದ್ರೋಹಿಯನ್ನು ಒದ್ದು ಒಳಗೆ ಹಾಕಲು ಆಗುತ್ತಿಲ್ಲ ಎಂದು ಆಕ್ಷೇಪಿಸಿದರು.
ಸೌಜನ್ಯ ವಿಚಾರ ಬಂದಾಗ ರಾಜ್ಯಾಧ್ಯಕ್ಷನಾಗಿ ನನಗೂ ಅನಿಸಿತ್ತು. ಸೌಜನ್ಯ ತಾಯಿ, ಕುಟುಂಬದ ಸದಸ್ಯರನ್ನು ಭೇಟಿ ಮಾಡಬೇಕೆಂದು ನಾನೇ ತೀರ್ಮಾನಿಸಿದೆ. ಹತ್ಯೆಯಾಗಿ 12 ವರ್ಷ ಕಳೆದರೂ, ಮಾನವೀಯತೆ ದೃಷ್ಟಿಯಿಂದ ಅಧ್ಯಕ್ಷನಾಗಿ ಭೇಟಿ ಮಾಡಿ ಸಾಂತ್ವನ ಹೇಳಿದ್ದೇನೆ. ಮುಂದೆ ಸುಪ್ರೀಂ ಕೋರ್ಟಿಗೆ ಹೋದರೆ ಅದರ ವೆಚ್ಚ ಭರಿಸುವ ಭರವಸೆ ಕೊಟ್ಟಿದ್ದೇನೆ ಎಂದರು.
ಸಿಎಂ ಆಗಿ ನೀವು ಕೋಟ್ಯಂತರ ಭಕ್ತರ ತಾಳ್ಮೆ, ಸಹನೆಯನ್ನು ಪರೀಕ್ಷೆ ಮಾಡಲು ಹೋಗಬಾರದು ಎಂದು ಸಿದ್ದರಾಮಯ್ಯಗೆ ಸಲಹೆ ನೀಡಿದ ಅವರು, ನೀವು ನಿಜವಾಗಿಯೂ ಪ್ರಾಮಾಣಿಕರೇ ಆಗಿದ್ದರೆ ಸಮೀರ್‌ನ ಜಾಮೀನು ರದ್ದು ಅರ್ಜಿ ಯಾಕೆ ಸಲ್ಲಿಸಿಲ್ಲ? ಇನ್ನೂ ಯಾಕೆ ಮೀನಾಮೇಷ ಮಾಡುತ್ತಿದೆ ಎಂದು ಪ್ರಶ್ನಿಸಿದರು.
ಅಪಪ್ರಚಾರದ ಕಾರಣದಿಂದ ಮಂಜುನಾಥ ಸ್ವಾಮಿಯ ಕೋಟ್ಯಂತರ ಭಕ್ತರಿಗೆ ನೋವಾಗುತ್ತಿದೆ. ಮತ್ತೊಂದು ಕಡೆ ರಾಜ್ಯ ಸರ್ಕಾರದ ಎಸ್‌ಐಟಿ ತನಿಖೆ ದಿನೇದಿನೇ ತಡವಾಗುತ್ತಿದೆ. ಇದರ ಪರಿಣಾಮವಾಗಿ ಅಸಂಖ್ಯಾತ ಭಕ್ತರು ನೊಂದಿದ್ದರು. ಇವೆಲ್ಲ ವಿಚಾರಗಳನ್ನು ಇಟ್ಟುಕೊಂಡು ನಾವು ಧರ್ಮಸ್ಥಳ ಚಲೋಗೆ ನೀಡಿದ ಕರೆಗೆ ಎಲ್ಲಾ ಜಿಲ್ಲೆಗಳಿಂದ, ಪ್ರತಿ ವಿಧಾನಸಭಾ ಕ್ಷೇತ್ರದಿಂದ ಹಿಂದೂ ಕಾರ್ಯಕರ್ತರು ಸೇರಿದಂತೆ, ಒಂದು ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರು ಬಂದಿದ್ದರು ಎಂದು ವಿವರಿಸಿದರು.