ಬೆಂಗಳೂರು:
ಧರ್ಮಸ್ಥಳ ವಿರುದ್ಧ ನಡೆಯುತ್ತಿರುವ ಅಪಪ್ರಚಾರ, ಷಡ್ಯಂತ್ರ ವಿರುದ್ಧ ಆ.31ರಂದು ಧರ್ಮಸ್ಥಳ ಸತ್ಯ ಯಾತ್ರೆ ಕೈಗೊಳ್ಳಲಾಗಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
ಜೆಪಿ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಧರ್ಮಸ್ಥಳಕ್ಕೆ ಅಪಮಾನ ಆಗುವ ತರ ಕೆಲವೊಂದು ಹೆಜ್ಜೆ ಈ ಸರ್ಕಾರ ಇಟ್ಟಿದೆ. ಪಕ್ಷದ ಶಾಸಕರು, ಮಾಜಿ ಶಾಸಕರು, ಮುಖಂಡರು, ಕಾರ್ಯಕರ್ತರು ಧರ್ಮಸ್ಥಳ ಸತ್ಯ ಯಾತ್ರೆ ಮಾಡಿ, ವೀರೇಂದ್ರ ಹೆಗ್ಗಡೆ ಭೇಟಿ ಮಾಡಿ ಅವರಿಗೆ ಬೆಂಬಲ ನೀಡುತ್ತೇವೆ ಎಂದರು.
800 ವರ್ಷಗಳ ಇತಿಹಾಸವಿರುವ ಪುಣ್ಯಕ್ಷೇತ್ರ ಧರ್ಮಸ್ಥಳ ಬಗ್ಗೆ ಪಿತೂರಿ ನಡೆದಿದೆ. ಇದರ ಹಿಂದೆ ಒಂದು ಸಂಘಟನೆ ಇದೆ ಎಂದು ನಿಖಿಲ್ ಆರೋಪಿಸಿದರು.
ಧರ್ಮಸ್ಥಳ ಎಪಿಸೋಡ್ ಹಿಂದೆ ಇರುವ ಕಥೆ, ಚಿತ್ರಕಥೆ, ನಿರ್ಮಾಪಕ ಯಾರು ಅಂತ ಪತ್ತೆ ಮಾಡಬೇಕು. ಇದಕ್ಕಾಗಿ ಎನ್‌ಐಎ ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು.
ಧರ್ಮಸ್ಥಳ ಯಾತ್ರೆಯಲ್ಲಿ ಯಾವುದೇ ರಾಜಕೀಯ ಇಲ್ಲ. ಪಕ್ಷಾತೀತವಾಗಿ ಈ ಯಾತ್ರೆ ಕೈಗೊಂಡಿದ್ದೇವೆ. ವೀರೇಂದ್ರ ಹೆಗ್ಗಡೆ ಮತ್ತು ಅವರ ಕುಟುಂಬಕ್ಕೆ ಒಂದುವರೆ ತಿಂಗಳಿಂದ ಮಾನಸಿಕ ಹಿಂಸೆ ನೀಡಿದ್ದರು. ಆದರೆ ಅವರ ಕುಟುಂಬದವರು ತಾಳ್ಮೆಮತ್ತೆ ಸಹನೆಯಿಂದ ನಡೆದುಕೊಂಡಿದ್ದಾರೆ. ನಾವು ಅವರ ಜೊತೆ ನಿಲ್ಲುತ್ತೇವೆ ಎಂದರು.
ಮಾಸ್ಕ್ ಮ್ಯಾನ್ ಬಂದು ಒಂದು ಬುರುಡೆ ಇದೆ. ಅನೇಕ ಕೊಲೆಗಳಾಗಿವೆ ಅಂತ ಹೇಳಿದ ತಕ್ಷಣ ಅವನ ಮಾತು ಕೇಳಿ ಸರ್ಕಾರ ಎಸ್‌ಐಟಿ ರಚನೆ ಮಾಡಿದೆ. ಅಂತಾರಾಷ್ಟ್ರೀಯ ಮಾಧ್ಯಮ , ಯೂಟ್ಯೂಬರ್ಸ್‌ಗಳು ನಿರಂತರವಾಗಿ ಸುದ್ದಿ ಮಾಡಿ ಅಪಪ್ರಚಾರ ಮಾಡಿದ್ದಾರೆ. ಇದರ ಹಿಂದೆ ಹಣ ಖರ್ಚು ಮಾಡಿದರ ಬಗ್ಗೆ ಎನ್‌ಐಎ ತನಿಖೆ ಆಗಬೇಕು ಎಂದು ಆಗ್ರಹಿಸಿದರು.
ಹಾಸನ ಕೇಂದ್ರವನ್ನಾಗಿ ಮಾಡಿದ್ದು, ಯಾತ್ರೆಯಂದು ಅಲ್ಲಿಯೇ ತಿಂಡಿ ವ್ಯವಸ್ಥೆ ಮಾಡಲಾಗಿದೆ. ಅಲ್ಲಿಂದ ನೇತ್ರಾವತಿಗೆ ಹೋಗಿ ಅಲ್ಲಿಂದ ಪಾದಯಾತ್ರೆ ಮಾಡ್ತೇವೆ. ಕುಮಾರಣ್ಣ ದೆಹಲಿಯಲ್ಲಿ ವೀರೇಂದ್ರ ಹೆಗ್ಗಡೆ ಜೊತೆ ಮಾತನಾಡಿ ನೈತಿಕ ಬೆಂಬಲ ನೀಡಿದ್ದಾರೆ ಎಂದರು.
ಪ್ರಾರಂಭದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಎಸ್‌ಐಟಿ ರಚನೆಗೆ ಮನಸ್ಸು ಇರಲಿಲ್ಲ. ಅಮೇಲೆ ಸಿಎಂಗೆ ಒತ್ತಡ ಹಾಕಿ ಎಸ್‌ಐಟಿ ರಚನೆ ಮಾಡಿದರು. ಮಾಸ್ಕ್ ಮ್ಯಾನ್ ಆರೋಪ ಮಾಡಿದಾಗ ಅವನ ಹಿನ್ನೆಲೆಯಲ್ಲಿ ಪರಿಶೀಲನೆ ಮಾಡಬೇಕಿತ್ತು ಎಂದರು.
ಗೌರವ ಕೊಡುತ್ತೇವೆ:
ಭಾನುಮುಷ್ತಾಕ್ ಬೂಕರ್ ಪ್ರಶಸ್ತಿಯನ್ನು ಪಡೆದುಕೊಂಡವರು. ಅವರು ಉದ್ಘಾಟನೆಗೆ ನಾವೆಲ್ಲಾ ಗೌರವ ಕೊಡ್ತೇವೆ. ಅವರು ಮುಸ್ಲಿಂ ಮಹಿಳೆ ಆಗಿರಬಹುದು ಅಥವಾ ಅವರ ಸಾಧನ ಬಗ್ಗೆ ಗೌರವಿದೆ ಎಂದು ತಿಳಿಸಿದರು.
ಅದೇ ಗೌರವ ಕನ್ನಡಾಂಬೆ ಮೇಲೆ, ಅರಿಶಿನ ಕುಂಕುಮದ ಮೇಲೆ ನಮ್ಮ ಭುವನೇಶ್ವರಿ ಕುಮಾರಿ ಅವರು ಒಂದು ರಿಸರ್ವೇಶನ್ ಇಟ್ಕೊಂಡಿದ್ದಾರಲ್ಲ ಅದಕ್ಕೆ ನಮಗೆ ಆಕ್ಷೇಪ ಇದೆ ಎಂದರು.
ಪ್ರತಿ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರ ವಿವಾದಗಳನ್ನು ಸೃಷ್ಟಿ ಮಾಡುತ್ತಿದೆ. ಧರ್ಮಸ್ಥಳ ಪ್ರಕರಣ ಆಯ್ತು, ಈಗ ಚಾಮುಂಡೇಶ್ವರಿ ತಾಯಿಗೆ ಕೈ ಹಾಕಿದ್ದಾರೆ. ಮುಂದೆ ಯಾವ ಯಾವ ಧಾರ್ಮಿಕ ಕೇಂದ್ರಗಳಿಗೆ ಕೈ ಇಡ್ತಾರೆ ಗೊತ್ತಿಲ್ಲ ಎಂದು ಗುಡುಗಿದರು.
ಇದೇ ಸಂದರ್ಭದಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾದ ಸುರೇಶ್ ಬಾಬು ಅವರು, ವಿಧಾನ ಪರಿಷತ್ ಸದಸ್ಯರಾದ ಮಂಜೇಗೌಡ, ಟಿ.ಎ ಶರವಣ, ಮಾಜಿ ವಿಧಾನ ಪರಿಷತ್ ಸದಸ್ಯರಾದ ತಿಪ್ಪೇಸ್ವಾಮಿ, ನಗರ ಘಟಕದ ಅಧ್ಯಕ್ಷರಾದ ರಮೇಶ್ ಗೌಡ ಅವರು, ಶಿರಾ ಉಗ್ರೇಶ್ ಮತ್ತಿತರರು ಉಪಸ್ಥಿತರಿದ್ದರು.