ಶಿವಮೊಗ್ಗ: ರೈತರು, ಮುಳುಗಡೆ ಸಂತ್ರಸ್ತರು ಹಾಗೂ ಭೂಹಕ್ಕು ವಂಚಿತರ ಸಮಸ್ಯೆಗಳನ್ನು ಬಗೆಹರಿಸದಿದ್ದರೆ ಅ.21ರಿಂದ ಸಾಗರದ ಎಸಿ ಕಚೇರಿ ಆವರಣದಲ್ಲಿ ಬೇಡಿಕೆ ಈಡೇರುವವರೆಗೆ ಧರಣಿ ಮತ್ತು ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಮಲೆನಾಡು ರೈತರ ಹೋರಾಟ ಸಮಿತಿ ಸಂಚಾಲಕ ತೀ.ನ.ಶ್ರೀನಿವಾಸ್ ಎಚ್ಚರಿಸಿದರು.
ಮಲೆನಾಡಿನ ಜನರ ಸಮಸ್ಯೆ ಬಗೆಹರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ. ಚಕ್ರಾ, ಸಾವೇಹಕ್ಲು, ಶರಾವತಿ, ಲಿಂಗನಮಕ್ಕಿ, ತುಂಗಾ ಹಾಗೂ ಭದ್ರಾ ಅಣೆಕಟ್ಟಿನ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡುವಲ್ಲಿ ರಾಜ್ಯ ಸರ್ಕಾರ ವಿಲವಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಡಾ. ಎಚ್.ಗಣಪತಿಯಪ್ಪ ಸ್ಥಾಪಿತ ಶಿವಮೊಗ್ಗ ಜಿಲ್ಲಾ ರೈತ ಸಂಘ, ಮಲೆನಾಡು ರೈತರ ಹೋರಾಟ ಸಮಿತಿ, ಮುಳುಗಡೆ ಸಂತ್ರಸ್ತ ಹಾಗೂ ಭೂಹಕ್ಕು ವಂಚಿತರ ಸಂಯುಕ್ತ ವೇದಿಕೆ, ಜಿಲ್ಲಾ ವಂಚಿತರ ಭೂಹಕ್ಕು ವಂಚಿತರು, ಮುಳುಗಡೆ ಸಂತ್ರಸ್ತರ ಪರ ಹೋರಾಡುತ್ತಿರುವ ಸಂಘಟನೆಗಳೆಲ್ಲ ಸೇರಿ ಶಿವಮೊಗ್ಗ ಜಿಲ್ಲಾ ರೈತರ, ಮುಳುಗಡೆ ಸಂತ್ರಸ್ತರ ಹಾಗೂ ಭೂ ಹಕ್ಕು ವಂಚಿತರ ಸಂಯುಕ್ತ ವೇದಿಕೆ ರಚಿಸಿಕೊಂಡು ಈ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದರು.
ಹಕ್ಕುಪತ್ರ ವಜಾಗೊಳಿಸುವ ಆದೇಶವನ್ನು ಸರ್ಕಾರ ಹಿಂಪಡೆಯಬೇಕು. ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಮಲ್ಲಂದೂರು ಗ್ರಾಮದಲ್ಲಿ ಹಕ್ಕುಪತ್ರ ನೀಡದಂತೆ ಸೂಚಿಸಲಾಗಿದೆ. ಇದನ್ನು ವಜಾಗೊಳಿಸಿ 80 ಸಾವಿರ ಅರ್ಜಿಯನ್ನು ಮರುಪರಿಶೀಲಿಸಬೇಕು ಎಂಬುದೂ ಸೇರಿ ಹಲವು ಬೇಡಿಕೆಗಳನ್ನು ಸರ್ಕಾರ ನ.1ರೊಳಗೆ ಈಡೇರಿಸಬೇಕು ಎಂದು ಆಗ್ರಹಿಸಿದರು.
ರೈತ ಮುಖಂಡ ದಿನೇಶ್ ಶಿರವಾಳ ಮಾತನಾಡಿ, ಸಾಗರದ ಗಣಪತಿ ದೇವಸ್ಥಾನದಿಂದ ಕಾಲ್ನಡಿಗೆ ಮೂಲಕ ಧರಣಿ ಸ್ಥಳಕ್ಕೆ ತೆರಳಲಾಗುವುದು. ಹೋರಾಟಗಾರರು, ವಿವಿಧ ಮಠಾಧೀಶರು ಹಾಗೂ ಜನಪ್ರತಿನಿಧಿಗಳು ಭಾಗವಹಿಸುವರು. ಸಚಿವರು, ಶಾಸಕರು ಭರವಸೆ ನೀಡಿದರೂ ಜಗ್ಗುವುದಿಲ್ಲ. ಮುಖ್ಯಮಂತ್ರಿಗಳು ಧರಣಿ ಸ್ಥಳಕ್ಕೆ ಆಗಮಿಸಿ ಆದೇಶ ಪತ್ರ ನೀಡಿದರೆ ಮಾತ್ರ ಹೋರಾಟ ನಿಲ್ಲಿಸಲಾಗುವುದು ಎಂದರು.
ಸಾಮಾಜಿಕ ಕಾರ್ಯಕರ್ತ ವಿ.ಜಿ.ಶ್ರೀಕರ್, ರೈತ ಮುಖಂಡರಾದ ಶಿವಾನಂದ ಕುಗ್ವೆ, ಮಂಜುನಾಥ್, ಎಚ್.ಎಂ.ರಾಘವೇಂದ್ರ, ಎಚ್.ಕೆ.ಸ್ವಾಮಿ, ರಾಜೇಶ್ ಶೆಟ್ಟಿ, ಆರ್ಮುಗಂ ದಂಡಪಾಣಿ ಸುದ್ದಿಗೋಷ್ಠಿಯಲ್ಲಿದ್ದರು.