ಚಿಕ್ಕಮಗಳೂರು: ಸರ್ಕಾರಗಳು ಜಾತಿವಾರು ಸೌಲಭ್ಯ ಒದಗಿಸಿದರೆ, ಧರ್ಮಸ್ಥಳ ಸಂಘವು ನೀತಿವಾರು ಸೌಕರ್ಯಗಳನ್ನು ನೀಡಿ ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ಸಹಕಾರಿಯಾಗಿದೆ ಎಂದು ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ತಿಳಿಸಿದರು.
ನಗರದ ಹೌಸಿಂಗ್ ಬೋರ್ಡ್ ಸಮೀಪದ ಪಂಚಮುಖಿ ಗಣಪತಿ ದೇವಸ್ಥಾನದ ಆವರಣದಲ್ಲಿ ತಾಲೂಕು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್, ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟಗಳ ಸಹಯೋಗದಲ್ಲಿ ಆಯೋಜಿಸಿದ್ದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಮಾನವನ ವೈಯಕ್ತಿಕ ಜೀವನದಲ್ಲಿ ಸಮಸ್ಯೆಗಳಿಂದ ಬಳಲುತ್ತಿರುವುದು ಸಾಮಾನ್ಯ. ಹೀಗಾಗಿ ದೇವರ ನಾಮಸ್ಮರಣೆಯಲ್ಲಿ ತೊಡಗಿದರೆ ಮನಸ್ಸಿಗೆ ಶಾಂತಿ, ನೆಮ್ಮದಿ ಜತೆಗೆ ಮಾನಸಿಕ ಒತ್ತಡಕ್ಕೆ ಪರಿಹಾರ ಕಂಡುಕೊಳ್ಳಬಹುದು ಎಂದು ಸಲಹೆ ನೀಡಿದರು.
ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಪಲ್ಲವಿ ಸಿ.ಟಿ.ರವಿ ಮಾತನಾಡಿ, ಆಧುನಿಕ ಕಾಲಘಟ್ಟದಲ್ಲಿ ಹಿರಿಯರ ಪುರಾತನ ಸಂಸ್ಕೃತಿ ಹಾಗೂ ಪರಂಪರೆಗಳು ನಾಶವಾಗುತ್ತಿದೆ. ದೇವಾಲಯಗಳಲ್ಲಿ ಭಾರತೀಯ ಸಂಸ್ಕೃತಿ ಉಡುಗೆ-ತೊಡುಗೆಗಳು ಮರೆಯಾಗುತ್ತಿವೆ. ಇವು ಭವಿಷ್ಯದಲ್ಲಿ ಮಕ್ಕಳಿಗೆ ಮಾರಕವಾಗುವ ಹಿನ್ನೆಲೆಯಲ್ಲಿ ನಮ್ಮ ನೆಲದ ಪರಂಪರೆ, ಪೂಜಾವಿಧಾನವನ್ನು ತಿಳಿಹೇಳುವ ಕೆಲಸ ಪಾಲಕರು ಮಾಡಬೇಕಿದೆ ಎಂದು ಹೇಳಿದರು.
ಧರ್ಮಸ್ಥಳ ಸಂಘದಿಂದ ರಾಜ್ಯಾದ್ಯಂತ ಸಾವಿರಾರು ಹೆಣ್ಣು ಮಕ್ಕಳು ಸ್ವಾವಲಂಬಿಯಾಗಿ ಜೀವನ ನಡೆಸುತ್ತಿದ್ದಾರೆ. ಮೊದಲೆಲ್ಲಾ ಮನೆಯಲ್ಲಿ ಕೂಡಿಟ್ಟ ಹಣದಿಂದ ಮಾತ್ರ ಉಳಿತಾಯವಾಗುತ್ತಿತ್ತು. ಇದೀಗ ಸ್ವಸಹಾಯದ ಮೂಲಕ ಹಣವನ್ನು ಉಳಿಸಿ ಸಂಕಷ್ಟದ ಸಮಯದಲ್ಲಿ ಸೂಕ್ತ ರೀತಿಯಲ್ಲಿ ಹೆಣ್ಣು ಮಕ್ಕಳು ಬಳಕೆ ಮಾಡುತ್ತಿರುವುದಕ್ಕೆ ವೀರೇಂದ್ರ ಹೆಗಡೆಯವರ ದಿಟ್ಟಹೆಜ್ಜೆಯೇ ಮೂಲ ಕಾರಣ ಎಂದರು.
ನಗರಸಭೆ ಸದಸ್ಯೆ ಕವಿತಾ ಶೇಖರ್ ಮಾತನಾಡಿ, ಜಿಲ್ಲೆಯ ಎಲ್ಲ ಮಾತೆಯರನ್ನು ಒಗ್ಗೂಡಿಸಿ ಸ್ವಸಹಾಯ ಸಂಘವನ್ನು ಸ್ಥಾಪಿಸಿ ರಾಜ್ಯಾದ್ಯಂತ ವಹಿವಾಟಿಗೆ ಸಂಘ ಮುಂದಾಗಿರುವುದು ಹೆಮ್ಮೆಯ ಸಂಗತಿ. ಮಹಿಳೆಯರು ಅಬಲೆಯರಲ್ಲ, ಸಬಲೆಯರು ಎಂದು ಸಾಬೀತುಪಡಿಸಲು ಶ್ರೀಧರ್ಮಸ್ಥಳ ಸಂಘ ಕಾರಣವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಟ್ರಸ್ಟ್‌ನ ಜಿಲ್ಲಾ ನಿರ್ದೇಶಕ ಪ್ರಕಾಶ್‌ರಾವ್, ತ್ರಿಮೂರ್ತಿ ದೇಗುಲದ ಅಧ್ಯಕ್ಷ ಕೆ.ಜಿ.ನಂಜುಂಡಪ್ಪ, ಎಸ್.ಡಿ.ಎಂ. ಎಜುಕೇಷನ್ ಟ್ರಸ್ಟ್ ಸಂಸ್ಥಾಪಕ ಮಂಜುನಾಥ್, ಧರ್ಮಸ್ಥಳ ಟ್ರಸ್ಟ್‌ನ ಯೋಜನಾಧಿಕಾರಿ ರಮೇಶ್ ನಾಯ್ಕ, ಮೇಲ್ವಿಚಾರಕ ಚಂದನ್, ಜ್ಞಾನ ವಿಕಾಸ ಸಮನ್ವಯಾಧಿಕಾರಿ ವೃಂದ, ಪ್ರಬಂಧಕ ದಯಾನಂದ್ ಮತ್ತಿತರರಿದ್ದರು.