ನ್ಯೂಸ್

ಧನ್ವಂತರಿ; ಪೂರ್ವಸಿದ್ಧತೆಯ ಧೈರ್ಯದಿಂದ ಕರೊನಾ ಜಯಿಸಿ

ವಿಶ್ವದೆಲ್ಲೆಡೆ ಪಸರಿಸಿ ಜನಜೀವನವನ್ನು ಅಸ್ತವ್ಯಸ್ತಗೊಳಿಸಿರುವ ಕೋವಿಡ್ -19 ಸಾಂಕ್ರಾಮಿಕ ರೋಗದ ಕುರಿತಾದ ಭಯಭೀತಿಯ ವಿವಿಧ ಮಾಹಿತಿ ಕೇಳಿಯೇ ಜನರು ಅಧೀರರಾಗುತ್ತಿರುವುದನ್ನು ನೋಡುತ್ತಿದ್ದೇವೆ. ನಾಣ್ಯಕ್ಕೆ ಎರಡು ಮುಖಗಳಿವೆ ಎಂಬುದು ವಾಸ್ತವ. ಈ ಸಾಂಕ್ರಾಮಿಕವೂ ಇದಕ್ಕೆ ಹೊರತಲ್ಲ.

ಲಕ್ಷಾಂತರ ಜನರು ಪ್ರಾಣ ತೆತ್ತಿದ್ದಾರೆ ಎಂಬುದೇನೋ ದಿಟ. ಲೆಕ್ಕಕ್ಕೇ ಸಿಗದಷ್ಟು ಕೋಟ್ಯಂತರ ಸಂಖ್ಯೆಯಲ್ಲಿ ಕರೊನಾ ವೈರಾಣುಗಳೂ ಬಲಿಯಾಗಿವೆ. ಕೋಟಿಗಟ್ಟಲೆ ಜನರು ರೋಗಾಣುವಿನೊಂದಿಗೆ ಹೋರಾಡಿ ಗೆದ್ದು ಬಂದಿರುವುದೂ ನಮ್ಮ ಕಣ್ಣೆದುರಿಗೇ ಇದೆ. ಹಾಗೆಂದು ಜಗತ್ತಿನ ಅತ್ಯಂತ ಬಲಶಾಲಿ ವ್ಯಕ್ತಿಗೂ ಈ ವೈರಾಣು ತಾಕಬಹುದು. ಆದರೆ ಅಂತಿಮ ಗೆಲುವು ಯಾರದ್ದು ಎಂಬುದೇ ಇಲ್ಲಿ ಮುಖ್ಯವಾಗುತ್ತದೆ. ಹೀಗೆ ವಿಜಯದ ಹೊಸ್ತಿಲು ದಾಟಬೇಕಾದರೆ ಪೂರ್ವಸಿದ್ಧತೆ ಬೇಕಾಗುತ್ತದೆ.

ಹತ್ತನೇ ತರಗತಿ ಅಥವಾ ದ್ವಿತೀಯ ಪಿಯುಸಿಯ ಪರೀಕ್ಷೆಗಳು ಶಾಲಾ ಜೀವನದ ಮಹತ್ವಪೂರ್ಣ ಘಟ್ಟಗಳು. ಅದರ ಪರೀಕ್ಷೆಗಿಂತ ಮೊದಲು ಮೂರ್ನಾಲ್ಕು ಪೂರ್ವಸಿದ್ಧತಾ ಪರೀಕ್ಷೆಗಳನ್ನು ಶಾಲಾಕಾಲೇಜುಗಳಲ್ಲಿ ನಡೆಸುವುದು ರೂಢಿಯಲ್ಲಿದೆ. ಓದುವ ಭರದಲ್ಲಿರುವ ಮಕ್ಕಳಿಗೆ ಯಾಕೆ ಈ ಪೂರ್ವಸಿದ್ಧತಾ ಪರೀಕ್ಷೆ? ಓರ್ವ ವಿದ್ಯಾರ್ಥಿಯನ್ನು ನೇರವಾಗಿ ಅಂತಿಮ ಪರೀಕ್ಷೆಗೆ ಕರೆದೊಯ್ದರೆ ಒಂದೆರಡು ಕಷ್ಟಕರ ಪ್ರಶ್ನೆಗಳನ್ನು ನೋಡಿದಾಕ್ಷಣ ಗಲಿಬಿಲಿಯಾಗುವುದಿದೆ. ಉತ್ತರಗಳು ನೆನಪಿಗೆ ಬಾರದಂತೆ ಆಗುತ್ತದೆ.

ವಿಚಲಿತರಾಗಿ ಅರ್ಧಂಬರ್ಧ ಉತ್ತರ ಬರೆದು ಪರೀಕ್ಷಾ ಕೊಠಡಿಯಿಂದ ಬೇಗನೇ ಹೊರಬರುವುದೂ ಇದೆ. ಅದೇ ಪೂರ್ವಸಿದ್ಧತಾ ಪರೀಕ್ಷೆ ಎದುರಿಸಿದ ವಿದ್ಯಾರ್ಥಿಯ ಮನೋಸ್ಥೈರ್ಯವೂ ಹೆಚ್ಚಿರುತ್ತದೆ. ಹೆಚ್ಚಿನ ಅಂಕ ಪಡೆದ ಹಿನ್ನೆಲೆಯ ಧೈರ್ಯವೂ ಜೊತೆಯಲ್ಲಿರುತ್ತದೆ. ಅಂಕಗಳಿಸುವುದು ಸಲೀಸಾದ ಅಭ್ಯಾಸವಾಗಿರುತ್ತದೆ. ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣಗೊಳ್ಳುವುದು ಹೇಗಿದ್ದರೂ ಸಿದ್ಧ, ಫಲಿತಾಂಶವನ್ನು ಅತ್ಯುನ್ನತ ಮಟ್ಟಕ್ಕೇರಿಸುವುದೇ ಗುರಿಯಾಗಿರುತ್ತದೆ. ಇಂತಹ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬಿರುತ್ತದೆ. ಫಲಿತಾಂಶದಲ್ಲಿ ಗಣನೀಯ ವ್ಯತ್ಯಾಸವಾಗುತ್ತದೆ.

ಎರಡು ದೇಶಗಳ ನಡುವೆ ನಡೆಯುವ ಯುದ್ಧದಲ್ಲೂ ಅಷ್ಟೇ. ಪೂರ್ವತಯಾರಿ ಇದ್ದಾಗ ಅಥವಾ ನಿರೀಕ್ಷಿತ ದಾಳಿಗಳಲ್ಲಿ ಸೈನ್ಯಕ್ಕಿರುವ ಕೆಚ್ಚು ಬೇರೆಯದೇ ಸ್ಥರದಲ್ಲಿರುತ್ತದೆ. ಯುದ್ಧ ಗೆಲ್ಲುವ ವಿಶ್ವಾಸವು ಸೈನ್ಯಕ್ಕೆ ಮತ್ತಷ್ಟು ಬಲವನ್ನು ತರುತ್ತದೆ. ರೋಗಕಾರಕ ವೈರಾಣು ಮತ್ತು ನಮ್ಮ ದೇಹದ ಜೀವಾಣುವಿನ ಮಧ್ಯೆ ನಡೆಯುವ ಸಂಘರ್ಷ, ಸಂಗ್ರಾಮದಲ್ಲೂ ಈ ರೀತಿಯ ಪೂರ್ವಸಿದ್ಧತೆಗಳಿಗೆ ಇನ್ನಿಲ್ಲದ ಮಹತ್ವವಿದೆ.

ಜನರೀಗ ಎರಡು ಮುಖ್ಯ ಕಾರಣಗಳಿಂದಾಗಿ ಕರೊನಾಕ್ಕೆ ಹೆದರುತ್ತಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯಿಂದ ಮೊದಲ್ಗೊಂಡು ಎಲ್ಲ್ಲ ದೇಶಗಳ ಸರ್ಕಾರಗಳು ಹೇಳಿರುವ ಮೂರು ಮುನ್ನೆಚ್ಚರಿಕೆ ಕ್ರಮಗಳಾದ ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಸುವುದು ಹಾಗೂ ಸಾಮಾಜಿಕ ಅಂತರ ಕಾಪಾಡುವುದನ್ನು ಪಾಲಿಸಿಯೂ ಅವುಗಳನ್ನೆಲ್ಲ್ಲ ದಾಟಿ ಕರೊನಾ ವೈರಾಣು ದೇಹ ಪ್ರವೇಶಿಸಿ ರೋಗ ಬಂದಾಗ ಭಯಪಡುತ್ತಾರೆ. ಕೋವಿಡ್ ಬಂತೆಂದರೆ ಮತ್ತೆ ಮನದಲ್ಲಿ ಸುಳಿಯುವುದು ದೇಹವನ್ನು ಯಾವರೀತಿ ಅಣಿಗೊಳಿಸಿದ್ದೇವೆ ಎಂಬ ವಿಚಾರ ಮಾತ್ರ. ಅಂತಹ ಪೂರ್ವಸಿದ್ಧತೆ ಇಲ್ಲದಿದ್ದಲ್ಲಿ ಹೆದರುವುದು ಸಹಜವೇ. ಎರಡನೆಯದು, ಉಸಿರಾಟದ ತೊಂದರೆ ತೀವ್ರವಾಗಿ ಆಸ್ಪತ್ರೆಗೆ ಹೋಗಬೇಕಾದ ಪರಿಸ್ಥಿತಿ ಉದ್ಭವಿಸಿದರೂ ಭೀತಿಗೆ ಒಳಗಾಗುತ್ತಾರೆ. ಏಕೆಂದರೆ ಉಸಿರಾಟದ ತೊಂದರೆ ಮಾರಣಾಂತಿಕವಾದರೆ ಎಂಬ ಆತಂಕ. ಹಾಗಿರುವಾಗ ಧೈರ್ಯದಿಂದ ಇರಬೇಕೆಂದರೆ ನಮ್ಮ ಶರೀರದ ರೋಗ ನಿರೋಧಕ ಶಕ್ತಿ ಹೆಚ್ಚಿಸಿ ಯುದ್ಧ ಸನ್ನದ್ಧಗೊಳಿಸಲು ಕೈಗೊಂಡ ಕ್ರಮಗಳು ಮಹತ್ವಪೂರ್ಣವೆನಿಸುತ್ತದೆ. ಇದಕ್ಕೆ ಆಯುರ್ವೆದದ ತತ್ತ್ವ, ಸಿದ್ಧಾಂತಗಳ ಆಧಾರದಲ್ಲಿ ಶರೀರದ ಆರೈಕೆ ಮಾಡುವುದು ಸೂಕ್ತವೆನಿಸುತ್ತದೆ. ಉಸಿರಾಟದ ತೊಂದರೆ ಉಲ್ಬಣವಾಗುವುದನ್ನು ತಪ್ಪಿಸಲು ಪ್ರಾರಂಭದಿಂದಲೇ ಶ್ವಾಸಕೋಶದ ಬಲವರ್ಧನೆ ಮಾಡುವ ಆಯುರ್ವೆದದ ಉಪಚಾರಗಳ ಅನುಷ್ಠಾನ ಸಹಾಯವಾಗುತ್ತದೆ. ಪೂರ್ವಸಿದ್ಧತೆ ಚೆನ್ನಾಗಿ ಮಾಡಿದ್ದೇನೆಂಬುದರ ಅರಿವಿರುವ ವ್ಯಕ್ತಿಯ ಆತ್ಮಸ್ಥೈರ್ಯ, ಮನೋಧೈರ್ಯ, ಶರೀರಬಲ ಉತ್ಕೃಷ್ಟ ಮಟ್ಟದಲ್ಲಿದ್ದು ಆತ್ಮವಿಶ್ವಾಸವೇ ಜಯಕ್ಕೆ ನಾಂದಿಹಾಡುತ್ತದೆ. ಹೀಗೆ ಶರೀರದ ಪೂರ್ವಸಿದ್ಧತೆಯ ಭದ್ರಬುನಾದಿಯೊಂದಿಗೆ ಕರೊನಾವನ್ನು ಮಣಿಸಿ ಎಲ್ಲರೂ ಗೆದ್ದು ಬರಲಿ.

ಪಂಚಸೂತ್ರಗಳು

ಪಾಷಾಣಭೇದ: ಬೇಧಿ ನಿಯಂತ್ರಿಸುತ್ತದೆ.

ಕಬ್ಬು: ಮೂತ್ರನಾಳದ ಸೋಂಕು ಶಮನಕರ.

ಪಡುವಲಕಾಯಿ: ಹೊಟ್ಟೆಯ ಜಂತುಹುಳ ನಿಯಂತ್ರಕ.

ಸಕ್ಕರೆ: ಕ್ಷಯರೋಗಿಗಳಿಗೆ ಉಪಯುಕ್ತ.

ಬೆಲ್ಲ: ರೋಗ ನಿರೋಧಕ ಶಕ್ತಿವರ್ಧಕ.