ಧನುಷ್ ,ಮನಸ್ವಿ 
ನ್ಯೂಸ್

ಚಂದನವನಕ್ಕೆ ಎಂಟ್ರಿ ಕೊಟ್ಟ ಕಿರುತೆರೆ ಖ್ಯಾತಿಯ ಧನುಷ್, ಮನಸ್ವಿ

ಪ್ರಮುಖ ಮುಖ್ಯಾಂಶಗಳು

  • ಚಂದನವನ ಪ್ರವೇಶದ ಖುಷಿಯಲ್ಲಿ ಕಂಠಿ, ಜೈ ಲಲಿತಾ
  • ಉಮೇಶ್​ ಕೃಪ ನಿರ್ದೇಶನದ ಚಿತ್ರಕ್ಕೆ ಆಯ್ಕೆಯಾದ ನಟ-ನಟಿ
  • ಬಂಡೆ ಮಹಾಂಕಾಳಿ ದೇವಸ್ಥಾನದಲ್ಲಿ ಇತ್ತೀಚೆಗೆ ಚಿತ್ರಕ್ಕೆ ಮುಹೂರ್ತ
ಬೆಂಗಳೂರು: ಕಿರುತೆರೆಯಲ್ಲಿ ಮಿಂಚಿ ಬಳಿಕ ಬೆಳ್ಳಿತೆರೆಗೆ ಪದಾರ್ಪಣೆ ಮಾಡುತ್ತಿರುವ ಕಲಾವಿದರ ಸಂಖ್ಯೆ ಹೆಚ್ಚುತ್ತಿದೆ. ಇದೀಗ ಈ ಸಾಲಿಗೆ ಧನುಷ್ ಮತ್ತು ಮನಸ್ವಿ ಹೊಸ ಸೇರ್ಪಡೆ. ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲಿ ‘ಕಂಠಿ’ ಪಾತ್ರದಲ್ಲಿ ಧನುಷ್ ಮಿಂಚಿದ್ದರು. ಮನಸ್ವಿ ಕೂಡ ‘ಜೈ ಲಲಿತಾ’ ಸೇರಿ ಕೆಲ ಸಿರೀಯಲ್‌ಗಳಲ್ಲಿ ನಟಿಸಿ, ಗಮನ ಸೆಳೆದಿದ್ದಾರೆ. ಈ ಕಲಾವಿದರು ಇದೀಗ ಚಂದನವನಕ್ಕೆ ನಾಯಕ, ನಾಯಕಿಯಾಗಿ ಪ್ರವೇಶ ಪಡೆಯುತ್ತಿದ್ದಾರೆ. ಇವರ ಡೆಬ್ಯೂ ಚಿತ್ರಕ್ಕೆ ‘ಟಗರು ಪಲ್ಯ’ ಖ್ಯಾತಿಯ ಉಮೇಶ್ ಕೆ. ಕೃಪ ಆ್ಯಕ್ಷನ್-ಕಟ್ ಹೇಳುತ್ತಿದ್ದು, ಇತ್ತೀಚೆಗಷ್ಟೇ ಬಂಡೆ ಮಹಾಂಕಾಳಿ ದೇವಸ್ಥಾನದಲ್ಲಿ ಮುಹೂರ್ತ ನೆರವೇರಿಸಲಾಗಿದೆ. ಸದ್ಯಕ್ಕೆ ‘ಪ್ರೊಡಕ್ಷನ್ ನಂ 2’ ಶೀರ್ಷಿಕೆಯಲ್ಲಿ ಶೂಟಿಂಗ್ ಆರಂಭಿಸಲಾಗಿದ್ದು, ಶೀಘ್ರವೇ ಚಿತ್ರತಂಡ ಟೈಟಲ್ ಘೋಷಿಸಲಿದೆ. ‘‘ಟಗರು ಪಲ್ಯ’ ಬಳಿಕ ನಾನು ನಿರ್ದೇಶಿಸುತ್ತಿರುವ ಎರಡನೇ ಚಿತ್ರವಿದು. ನಾನೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದೇನೆ. ಕಥೆ. ಪ್ರೀತಿ, ನವಿರಾದ ಹಾಸ್ಯ, ಸೆಂಟಿಮೆಂಟ್ ಜತೆಗೆ ಒಂದು ಚಿತ್ರದಲ್ಲಿರಬೇಕಾದ ಎಲ್ಲ ಅಂಶಗಳಿರುವ, ಮನರಂಜನಾ ಪ್ರಧಾನ ಸಿನಿಮಾ ಇದಾಗಲಿದೆ. ಇಲ್ಲಿ ಮಳೆಯೇ ಮುಖ್ಯ ಪಾತ್ರ. ಹಾಗಾಗಿ ಮಳೆಗಾಲಕ್ಕಾಗಿ ಕಾಯುತ್ತಿದ್ದೆವು. ಮುಂದಿನ ವಾರದಿಂದ ಚಿತ್ರೀಕರಣ ಆರಂಭವಾಗಲಿದೆ. ತೀರ್ಥಹಳ್ಳಿ, ಆಗುಂಬೆ, ಕಾರ್ಕಳ, ಚಿಕ್ಕಮಗಳೂರಿನಲ್ಲಿ ಶೂಟಿಂಗ್ ನಡೆಸಲಿದ್ದೇವೆ’ ಎಂದು ನಿರ್ದೇಶಕ ಉಮೇಶ್ ಮಾಹಿತಿ ನೀಡಿದರು. ಎಸ್.ಕೆ.ರಾವ್ ಛಾಯಾಗ್ರಹಣ, ಮಧು ತುಂಬಕೆರೆ ಸಂಕಲನ ಚಿತ್ರಕ್ಕಿರಲಿದೆ.