ನ್ಯೂಸ್

ಈ ಗ್ರಾಮದಲ್ಲಿ ತಯಾರಿಸಿದ ದೇವರ ಮೂರ್ತಿಗಳಿಗೆ ವರ್ಷವಿಡೀ ಇದೆ ಬೇಡಿಕೆ; 10 ರಿಂದ 12 ದಿನಗಳಲ್ಲಿ ಸಿದ್ಧವಾಗುತ್ತದೆ ವಿಗ್ರಹ!

ಧನ್ಬಾದ್: ಇಲ್ಲಿನ ರಖಿತ್‌ಪುರ ಗ್ರಾಮದ ಮಣ್ಣು ಫಲವತ್ತಾಗಿದ್ದು, ಭತ್ತದ ಜೊತೆಗೆ ವಿವಿಧ ತರಕಾರಿಗಳನ್ನೂ ಬೆಳೆಯುತ್ತಾರೆ. ಅಷ್ಟೇ ಅಲ್ಲ, ಈ ಮಣ್ಣು ಗ್ರಾಮಸ್ಥರಿಗೆ ಇನ್ನೊಂದು ಅದ್ಭುತವಾದ ಉದ್ಯೋಗ ನೀಡಿದೆ. ಅದ್ಯಾವುದು ಅಂತೀರಾ?, ಮುಂದೆ ಓದಿ...

'ಶಿಲ್ಪಿಗಳ ಗ್ರಾಮ'
ಅಂದಹಾಗೆ ರಖಿತ್‌ಪುರ ಗ್ರಾಮವನ್ನು 'ಶಿಲ್ಪಿಗಳ ಗ್ರಾಮ' ಎಂದೂ ಕರೆಯಲಾಗುತ್ತದೆ. ಏಕೆಂದರೆ ಇಲ್ಲಿನ ಪ್ರತಿ ಮನೆಯಲ್ಲಿಯೂ ವಿಗ್ರಹ ತಯಾರಿಕೆ ನಡೆಯುತ್ತದೆ. ಧನ್ಬಾದ್ ಮಾತ್ರವಲ್ಲದೆ, ಇತರ ರಾಜ್ಯಗಳಲ್ಲೂ ದೇವರ ವಿಗ್ರಹಗಳಿಗೆ ಸಾಕಷ್ಟು ಬೇಡಿಕೆ ಇದೆ.

100 ವರ್ಷಗಳಿಂದ ಮೂರ್ತಿ ತಯಾರಿಕೆ
ಬಲ್ಲಿಯಾಪುರ ಬ್ಲಾಕ್‌ನಲ್ಲಿರುವ ಈ ಗ್ರಾಮದಲ್ಲಿ ಕಳೆದ 100 ವರ್ಷಗಳಿಂದ ಮಣ್ಣಿನ ಮೂರ್ತಿಗಳನ್ನು ತಯಾರಿಸಲಾಗುತ್ತಿದೆ. ಈ ದೇವತೆಗಳ ವಿಗ್ರಹಗಳನ್ನು ಮಾ ಮಾನಸ ಪೂಜೆ, ಕಾಳಿ ಪೂಜೆ, ದುರ್ಗಾ ಪೂಜೆಗಾಗಿ ತಯಾರಿಸಲಾಗುತ್ತದೆ. ಹಬ್ಬಹರಿದಿನಗಳಲ್ಲಿ ಈ ಗ್ರಾಮದಿಂದ ಜಾರ್ಖಂಡ್, ಬಿಹಾರ, ಉತ್ತರ ಪ್ರದೇಶದ ವಿವಿಧ ಜಿಲ್ಲೆಗಳಿಗೆ ಸಾವಿರಕ್ಕೂ ಹೆಚ್ಚು ವಿಗ್ರಹಗಳನ್ನು ಕಳುಹಿಸಲಾಗುತ್ತದೆ.

ಮಳೆಗಾಲದಲ್ಲೂ ವಿಗ್ರಹಗಳ ತಯಾರಿಕೆ
ರಖಿತ್‌ಪುರ ಗ್ರಾಮದಲ್ಲಿ ತಯಾರಿಸಿದ ಮಾತೆ ದುರ್ಗಾ, ಗಣೇಶ, ಕಾರ್ತಿಕ, ಹನುಮಾನ್, ಲಕ್ಷ್ಮಿ, ಭೈಂಸಾಸುರ ಮತ್ತು ಸಿಂಹದ ವಿಗ್ರಹಗಳಿಗೆ ಹೆಚ್ಚು ಬೇಡಿಕೆಯಿದೆ. ಇಲ್ಲಿ ವರ್ಷವಿಡೀ ಮೂರ್ತಿ ತಯಾರಿಸುವ ಕೆಲಸ ನಡೆಯುತ್ತದೆ. ಮಳೆಗಾಲದಲ್ಲೂ ನೆರಳಿನಲ್ಲಿ ವಿಗ್ರಹಗಳನ್ನು ಮಾಡುತ್ತಾರೆ. ವಿಗ್ರಹಗಳ ಜೊತೆಗೆ ಈ ಗ್ರಾಮದ ಶಿಲ್ಪಿಗಳಿಗೂ ಬಹಳ ಬೇಡಿಕೆಯಿದೆ. ಉತ್ತರ ಪ್ರದೇಶ ಮತ್ತು ಬಿಹಾರದವರ ಆಹ್ವಾನದ ಮೇರೆಗೆ ಅವರು ವಿಗ್ರಹಗಳನ್ನು ಮಾಡಲು ತೆರಳುತ್ತಾರೆ. 

ತಿಂಗಳಿಗೆ ಐದರಿಂದ ಏಳು ಮೂರ್ತಿ
ಗ್ರಾಮದ ಪ್ರತಿಯೊಬ್ಬ ಶಿಲ್ಪಿ ತಿಂಗಳಿಗೆ ಐದರಿಂದ ಏಳು ಮೂರ್ತಿಗಳನ್ನು ತಯಾರಿಸುತ್ತಾರೆ. ಇದು ತಲೆಮಾರಿನಿಂದಲೂ ನಡೆದುಕೊಂಡು ಬಂದಿದೆ. 15ರಿಂದ 17 ಸಾವಿರ ರೂಪಾಯಿಯಲ್ಲಿ ದೇವರ ವಿಗ್ರಹವನ್ನು ತಯಾರಿಸುತ್ತಾರೆ. ಮಾರುಕಟ್ಟೆಯಲ್ಲಿ 40ರಿಂದ 45 ಸಾವಿರ ರೂ.ಗೆ ಮಾರಾಟವಾಗುತ್ತಿದೆ. ಒಂದು ವಿಗ್ರಹವು 10 ರಿಂದ 12 ದಿನಗಳಲ್ಲಿ ಸಂಪೂರ್ಣವಾಗಿ ಸಿದ್ಧವಾಗುತ್ತದೆ. ಇದೇ ವೇಳೆ ಶಿಲ್ಪಿಗಳು ಹಲವು ವಿಗ್ರಹಗಳ ಅಚ್ಚನ್ನು ಏಕಕಾಲಕ್ಕೆ ಸಿದ್ಧಪಡಿಸಿ, ಅಂತಿಮ ಸ್ಪರ್ಶ ನೀಡುವ ಕೆಲಸ ಮಾತ್ರ ನಡೆಯುತ್ತದೆ. ಕೆಲವು ವಿಶೇಷ ವಿಗ್ರಹಗಳಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ ಅನ್ನು ಬಳಸಲಾಗುತ್ತದೆ.

ಮಣ್ಣು ಮತ್ತು ಶಿಲ್ಪಿ ಎರಡೂ ಶ್ರೇಷ್ಠ
"ವಿಶೇಷವಾಗಿ ದುರ್ಗಾಪೂಜೆಯ ಸಂದರ್ಭದಲ್ಲಿ ನಮ್ಮ ಗ್ರಾಮದ ಶಿಲ್ಪಿಗಳಿಗೆ ಬೇಡಿಕೆ ಹೆಚ್ಚುತ್ತದೆ. ಇತರ ಸ್ಥಳಗಳಿಗೆ ಹೋಲಿಸಿದರೆ ಇಲ್ಲಿನ ಮಣ್ಣು ಮತ್ತು ಶಿಲ್ಪಿ ಎರಡೂ ಶ್ರೇಷ್ಠವಾಗಿದೆ. ಅದಕ್ಕಾಗಿಯೇ ಇದನ್ನು ವಿಗ್ರಹಗಳ ಗ್ರಾಮ ಎಂದು ಕರೆಯಲಾಗುತ್ತದೆ. ಕೆಲವು ಜಿಲ್ಲೆಗಳಿಗೆ ಆಹ್ವಾನದ ಮೇರೆಗೆ ದೇವರು ಮತ್ತು ದೇವತೆಗಳ ವಿಗ್ರಹಗಳನ್ನು ಸ್ಥಾಪಿಸಲು ಹೋಗುತ್ತಾರೆ ಎನ್ನುತ್ತಾರೆ'' ಶಿಲ್ಪಿಗಳು.