ಅರಕಲಗೂಡು: ತಾಲೂಕಿನಲ್ಲಿ ಯುಗಾದಿ ಹಬ್ಬದ ಅಂಗವಾಗಿ ಭಾನುವಾರ ಭಕ್ತರು ದೇವಾನು ದೇವತೆಗಳ ಉತ್ಸವ ನಡೆಸಿ ಭಕ್ತಿ ಪರಾಕಾಷ್ಠೆ ಮೆರೆದರು.
ಪಟ್ಟಣದ ಗ್ರಾಮದೇವತೆ ಶ್ರೀ ದೊಡ್ಡಮ್ಮ ದೇವಸ್ಥಾನ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ದೇವರ ಮೂರ್ತಿಗೆ ಅಲಂಕರಿಸಿ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು. ರಾಮನಾಥಪುರದ ಕಾವೇರಿ ನದಿಯಲ್ಲಿ ಸುತ್ತಮುತ್ತಲಿನ ಹಳ್ಳಿಗಳ ಗ್ರಾಮಸ್ಥರ ದೇವರ ಮೂರ್ತಿ ತಂದು ಗಂಗಾಸ್ನಾನ ಮಾಡಿಸಿದ ಬಳಿಕ ಮಂಗಳವಾದ್ಯದೊಂದಿಗೆ ಕೊಂಡೊಯ್ದು ಗ್ರಾಮಗಳಲ್ಲಿ ಉತ್ಸವ ನಡೆಸಿ ಪೂಜೆ ಪುನಸ್ಕಾರಗಳನ್ನು ನೆರವೇರಿಸಿದರು.
ವಿಶೇಷವಾಗಿ ಹೊನ್ನೇನಹಳ್ಳಿ ಶ್ರೀ ಲಕ್ಷ್ಮೀದೇವಿ, ಕೇರಳಾಪುರದ ಶ್ರೀ ಹೊಳೇಸಾಲಮ್ಮ ದೇವತೆ ಅಡ್ಡಪಲ್ಲಕ್ಕಿ ಉತ್ಸವ ಮತ್ತು ಉಲಿವಾಲದ ಶ್ರೀ ವೀರಾಂಜನೇಯಸ್ವಾಮಿ, ಬೈಚನಹಳ್ಳಿಯ ಶ್ರೀ ದೂತರಾಯ, ಶ್ರೀ ಭೈರವೇಶ್ವರ ಹಾಗೂ ಮರವಳಲು ಗ್ರಾಮದ ಶ್ರೀ ವಿರೂಪಾಕ್ಷೇಶ್ವರ ದೇವರ ಉತ್ಸವ ನಡೆಯಿತು.
ಅದ್ದೂರಿ ಉತ್ಸವ: ತಾಲೂಕಿನ ಬಸವಾಪಟ್ಟಣದಲ್ಲಿ ಶ್ರೀ ಗ್ರಾಮದೇವತೆ ಕಾಲುವೆ ಅಮ್ಮನ ದೇವತೆಯ 36ನೇ ವರ್ಷದ ಉತ್ಸವ ವಿಜೃಂಭಣೆಯಿಂದ ಜರುಗಿತು. ಬಣ್ಣ ಬಣ್ಣದ ವಿದ್ಯುತ್ ಬೆಳಕಿನಿಂದ ಮಿನುಗುತ್ತಿದ್ದ ಅಲಂಕೃತ ವಾಹನದಲ್ಲಿ ದೇವತೆ ಮೂರ್ತಿ ಪ್ರತಿಷ್ಠಾಪಿಸಿ ವೈಭವದ ಉತ್ಸವ ನಡೆಸಲಾಯಿತು. ಉತ್ಸವದ ವೇಳೆ ಯುವಕರು ಕುಣಿದು ಸಂಭ್ರಮಿಸಿದರು. ಕಾಳೇನಹಳ್ಳಿಯ ಸುತ್ತಲಿನ ಏಳು ಹಳ್ಳಿಗಳ ಅಧಿದೇವತೆ ಶ್ರೀ ದಿಡ್ಡಮ್ಮ ದೇವತೆ ಮೂರ್ತಿಯನ್ನು ಕಾವೇರಿ ನದಿಗೆ ಕೊಂಡೊಯ್ದು ಪ್ರಜಾ ವಿಧಾನಗಳನ್ನು ಪೂರೈಸಿದ ಬಳಿಕ ಗ್ರಾಮಕ್ಕೆ ಕರೆತಂದು ಅದ್ದೂರಿ ಮೆರವಣಿಗೆ ಮಾಡಲಾಯಿತು. ಭಕ್ತರು ಹಣ್ಣು-ಕಾಯಿ ಅರ್ಪಿಸಿ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು.
ಸಿಡಿದ ಮರದ ಕೊಂಡ: ಹೆಗ್ಗಡಿಹಳ್ಳಿ ಗ್ರಾಮದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಶ್ರೀ ಬಸವೇಶ್ವರ ದೇವರ ಉತ್ಸವ ನಡೆಸಿ ಕೊಂಡೋತ್ಸವ ನಡೆಸಲಾಯಿತು. ಭಕ್ತರು ಕೊಂಡ ತುಳಿಯಲು ಹೊತ್ತಿಸಿದ್ದ ಮರದ ತುಂಡು ಉರಿಯುತ್ತಿದ್ದ ವೇಳೆ ಜೋರಾದ ಶಬ್ಧದದೊಂದಿಗೆ ಬೆಂಕಿಯುಗುಳಿ ಸಿಡಿದು ಗ್ರಾಮಸ್ಥರಲ್ಲಿ ಕೆಲಕಾಲ ಆತಂಕ ಮೂಡಿಸಿತು.
ಹೊನ್ನಾರು ಸಂಭ್ರಮ: ಯುಗಾದಿ ಹಬ್ಬದ ಸಂಭ್ರಮದಲ್ಲಿ ಮಿಂದೆದ್ದ ಗ್ರಾಮಸ್ಥರು ಹೊಲಕ್ಕೆ ಹೊನ್ನಾರು ಹೂಡಿ ಉತ್ತಮ ಮಳೆ ಬೆಳೆಯಾಗಲಿ ಎಂದು ಪ್ರಾರ್ಥಿಸಿದರು. ಹಂಪಾಪುರ ಗ್ರಾಮಸ್ಥರು ಜಾನುವಾರುಗಳನ್ನು ಹೂವಿನಿಂದ ಸಿಂಗರಿಸಿ ಸಾಮೂಹಿಕವಾಗಿ ಹೊನ್ನಾರ ಹೂಡಿ ಗಮನ ಸೆಳೆದರು. ಹೊಲ್ಲಕ್ಕೆ ತೆರಳಿ ಹೊನ್ನೂರು ಹೂಡಿ ಭೂಮಿ ಉಳುಮೆ ಮಾಡಿದರು.