ಚಾಮರಾಜನಗರ: 'ಓಂ ನಮಃ ಶಿವಾಯ, ಶಿವನೇ ನನಗೆ ಹುಡುಗಿ ಕರುಣಿಸು. ನನ್ನ ಪ್ರೀತಿಯ ದೇವರೇ... ಚಾಮರಾಜಸ್ವಾಮಿ..' ಎಂದು ಹುಡುಗನೊಬ್ಬ ದೇವರಿಗೆ ಪತ್ರ ಬರೆದಿದ್ದಾನೆ. ಮತ್ತೊಬ್ಬ ಪುಟಗಟ್ಟಲೆ ಕಥೆ ಬರೆದು 'ದೇವರ ರಾಜ್ಯ ಸಮೀಪಿಸುತ್ತಿದೆ' ಎಂದು ಬರೆದಿದ್ದಾರೆ.
ಅಂದಹಾಗೆ ಈ ಪ್ರತಗಳು ಸಿಕ್ಕದ್ದು ಚಾಮರಾಜನಗರದ ಚಾಮರಾಜೇಶ್ವರ ದೇವಾಲಯದ ಹುಂಡಿ ಎಣಿಕೆ ಸಂದರ್ಭದಲ್ಲಿ. ಹೌದು, ಚಾಮರಾಜೇಶ್ವರ ದೇವಾಲಯದ ಹುಂಡಿಯನ್ನು ಒಂದೂವರೆ ವರ್ಷಗಳ ಬಳಿಕ ಅಂದರೆ ನಿನ್ನೆ(ಡಿ.22) ಎಣಿಕೆ ಮಾಡಲಾಯಿತು. ಈ ವೇಳೆ ಹುಂಡಿಯಲ್ಲಿ ಐದಾರು ಪತ್ರಗಳು ದೊರೆತಿವೆ. ಅದರಲ್ಲಿ 'ಶಿವನೇ ನನಗೆ ಹುಡುಗಿ ಕರುಣಿಸು.. ಓ ನನ್ನ ಪ್ರೀತಿಯ ದೇವರೇ...' ಎಂದು ಓರ್ವ ಯುವಕ ಪತ್ರ ಬರೆದಿದ್ದಾನೆ. ಮತ್ತೊಬ್ಬ 'ದೇವರ ರಾಜ್ಯ ಸಮೀಪಿಸುತ್ತಿದೆ' ಎಂಬ ಒಕ್ಕಣೆಯುಳ್ಳ ಪತ್ರ ಬರೆದು ಹುಂಡಿಗೆ ಹಾಕಿದ್ದಾನೆ. ಅದರಲ್ಲಿ ಯೇಸು ಕ್ರಿಸ್ತನ ಬಗ್ಗೆಯೂ ಪ್ರಸ್ತಾಪಿಸಲಾಗಿದೆ.
ಲಕ್ಷಾಧೀಶ್ವರ ಶ್ರೀ ಚಾಮರಾಜೇಶ್ವರ: ಶ್ರೀಚಾಮರಾಜೇಶ್ವರ ದೇವಸ್ಥಾನದ ಹುಂಡಿಯಲ್ಲಿ 7,61,641 ಲಕ್ಷ ರೂ. ಸಂಗ್ರಹವಾಗಿದೆ. ದೇವಸ್ಥಾನದಲ್ಲಿ ನಿನ್ನೆ ಬೆಳಗ್ಗೆ 10 ಗಂಟೆಗೆ ತಹಸೀಲ್ದಾರ್ ಬಸವರಾಜು ಸಮ್ಮುಖದಲ್ಲಿ ಹುಂಡಿಗಳನ್ನು ತೆರೆಯಲಾಯಿತು. ರಥೋತ್ಸವವಾದ ಬಳಿಕ ಭಕ್ತರ ದಂಡು ಹರಿದು ಬಂದ ಹಿನ್ನೆಲೆಯಲ್ಲಿ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಹರಕೆಯ ರೂಪದಲ್ಲಿ ಹಣ ಹಾಕಿದ್ದರು.
ದೇವಸ್ಥಾನದ ಅರ್ಚಕ ರಾಮಕೃಷ್ಣ ಭಾರಧ್ವಜ್, ದೇವಾಸ್ಥಾನದ ಇಒ ರಾಜಶೇಖರ, ಬಂಡಿ ದೇದಾರ್ ಮಹೇಶ್, ಜಿಲ್ಲಾ ಉಪ್ಪಾರ ಯುವಕರ ಸಂಘ ಅಧ್ಯಕ್ಷ ಜಯಕುಮಾರ್, ದೇವಸ್ಥಾನ ಧರ್ಮದರ್ಶಿ ಮಂಡಳಿಯ ಸದಸ್ಯ, ಸಿ.ಎಂ. ಬಂಗಾರಸ್ವಾಮಿ ಇದ್ದರು.