ನಂಜನಗೂಡು: ವಿಶ್ವವಿಖ್ಯಾತ ಶ್ರೀಕಂಠೇಶ್ವರಸ್ವಾಮಿ ದೇವಾಲಯದಲ್ಲಿ ಮಹಾಶಿವರಾತ್ರಿ ಅಂಗವಾಗಿ ಶುಕ್ರವಾರ ಲಕ್ಷಾಂತರ ಭಕ್ತರು ಭೇಟಿ ನೀಡಿ ದರ್ಶನ ಪಡೆದರು. ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ ಭಕ್ತರು ರಾತ್ರಿಯಿಡಿ ಜಾಗರಣೆಯಲ್ಲಿ ತೊಡಗಿ ಶಿವ ಸ್ಮರಣೆ ಮಾಡಿದರು.
ನಂಜನಗೂಡಿಗೆ ಆಗಮಿಸುವ ತಿರುಪತಿ ಫಾಸ್ಟ್ ಪ್ಯಾಸೆಂಜರ್ ರೈಲು, ಶಿವಮೊಗ್ಗ ಪ್ಯಾಸೆಂಜರ್ ರೈಲುಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ದೇವಾಲಯದ ಕೈಸಾಲೆ, ಸಮುಚ್ಚಯ, ಪ್ರಾಂಗಣ ಸೇರಿ ಆಯಕಟ್ಟಿನ ಪ್ರದೇಶದಲ್ಲಿ ಭಕ್ತರು ಆಶ್ರಯ ಪಡೆದರು. ನಂತರ ದೇವಾಲಯದ ಸುತ್ತ ಉರುಳು ಸೇವೆ ಸಲ್ಲಿಸಿ ಕಪಿಲಾ ಸ್ನಾನಘಟ್ಟದಲ್ಲಿ ಪುಣ್ಯಸ್ನಾನ ಮಾಡಲು ಭಕ್ತರು ಮುಗಿಬಿದ್ದರು.
ದೇವಾಲಯದ ಒಳ ಆವರಣದಲ್ಲಿರುವ ಸಹಸ್ರ ಲಿಂಗಗಳಿಗೆ ಭಕ್ತರು ಬಿಲ್ವಾರ್ಚನೆ ಹಾಗೂ ಹೂವಿನ ಸೇವೆ ಸಲ್ಲಿಸಿದರು. ಶ್ರೀಕಂಠನ ದರ್ಶನ ಪಡೆಯಲು ಬೆಳಗಿನ ಜಾವ 4ರಿಂದಲೇ ಭಕ್ತರು ಸರದಿ ಸಾಲಿನಲ್ಲಿ ನಿಂತಿದ್ದರು. ಮಧ್ಯಾಹ್ನ ಆಗುತ್ತಿದ್ದಂತೆ ಭಕ್ತರ ಸಂಖ್ಯೆ ಗಣನೀಯ ಏರಿಕೆ ಕಂಡಿತು. ಸಂಜೆ ವೇಳೆಗೆ ದೇವಾಲಯದ ಆವರಣದಲ್ಲಿ ಜನದಟ್ಟಣೆ ಕೇಂದ್ರವಾಗಿ ಮಾರ್ಪಟ್ಟಿತು. ವಿಶೇಷ ಗಣ್ಯರ ಪ್ರವೇಶಕ್ಕಾಗಿ ಮುಖ್ಯದ್ವಾರದ ಮುಂದೆ ತಾತ್ಕಾಲಿಕ ಗೇಟ್ ತೆರೆದು ಅನುವು ಮಾಡಲಾಗಿತ್ತು. ಆಹ್ವಾನಿತರಿಗಾಗಿ 1600 ಪಾಸ್ ವ್ಯವಸ್ಥೆ ಮಾಡಲಾಗಿತ್ತು. ಭಕ್ತರಿಗೆ ದಾಸೋಹ ಭವನದಲ್ಲಿ ಮಧ್ಯಾಹ್ನ ಹಾಗೂ ರಾತ್ರಿ ಫಲಾಹಾರ ವ್ಯವಸ್ಥೆ ಮಾಡಲಾಗಿತ್ತು.
ದರ್ಶನಕ್ಕೆ ಹರಸಾಹಸ: ಬೆಳಗಿನಿಂದಲೇ ಭಕ್ತರು ದರ್ಶನಕ್ಕೆ ಸರದಿ ಸಾಲಿನಲ್ಲಿ ನಿಂತಿದ್ದರು. ಸುಮಾರು ಎರಡು ತಾಸುಗಟ್ಟಲೇ ಸರತಿಯಲ್ಲಿ ನಿಂತು ಪ್ರಯಾಸಪಟ್ಟರು. ವಿಶೇಷ ದರ್ಶನದಲ್ಲಿ ಹಣ ನೀಡಿ ಹೋದವರಿಗೂ ಸರತಿಯಲ್ಲಿ ಕಾಯುವ ಪ್ರಸಂಗ ಎದುರಾಯಿತು. ದೇವಾಲಯದ ಗರ್ಭಗುಡಿಯಲ್ಲಿ ಭಕ್ತರಿಗೆ ಅರ್ಚನೆ ಮಾಡಲು ಅವಕಾಶವನ್ನು ನಿಷೇಧಿಸಿ ಕೇವಲ ದರ್ಶನ ವ್ಯವಸ್ಥೆ ಕಲ್ಪಿಸಲಾಗಿತ್ತು.
ವಿಶೇಷ ಪೂಜೆ: ಇದಕ್ಕೂ ಮುನ್ನ ಬೆಳಗಿನ ಜಾವ 3 ಗಂಟೆಯಿಂದಲೇ ಗರ್ಭಗುಡಿಯಲ್ಲಿ ಶತ ರುದ್ರಾಭಿಷೇಕ, ಏಕದಶಾವರ, ಏಕವಾರ, ನಿತ್ಯೋತ್ಸವ ಪೂಜೆ, ಸಂಗಮ ಕಾಲದ ಪೂಜೆ, ಪಂಚಾಮೃತ ಅಭಿಷೇಕ, ಕ್ಷೀರಾಭಿಷೇಕ ಹಾಗೂ 11 ಬಾರಿ ಮಹಾರುದ್ರ ಪಾರಾಯಣವನ್ನು ಪ್ರಧಾನ ಆಗಮಿಕ ಜೆ.ನಾಗಚಂದ್ರ ದೀಕ್ಷಿತ್ ನೇತೃತ್ವದಲ್ಲಿ ನೆರವೇರಿಸಲಾಯಿತು. ನಂತರ ಎಲ್ಲ ಗುಡಿಗಳಲ್ಲೂ ಬಿಲ್ವಾರ್ಚನೆ ನೆರವೇರಿಸಲಾಯಿತು.
ಶ್ರೀಕಂಠಸ್ವಾಮಿ ಹಾಗೂ ಪಾರ್ವತಿ ಅಮ್ಮನ ಗುಡಿಯಲ್ಲಿ ವಿವಿಧ ಬಗೆಯ ಪುಷ್ಪಾಲಂಕಾರವನ್ನು ಮಾಡಲಾಗಿತ್ತು. ದೇವಾಲಯದಲ್ಲಿರುವ ಶಿವನ ವಿವಿಧ ರೂಪದ ನೂರಾರು ವಿಗ್ರಹಗಳಿಗೆ ವಿಶೇಷ ಪೂಜೆ ಸಲ್ಲಿಸಿ ಬಿಲ್ವಾರ್ಚನೆ ನೆರವೇರಿಸಲಾಯಿತು. ಶಿವರಾತ್ರಿ ವಿಶೇಷವಾಗಿ ನಾಲ್ಕು ಜಾವದಲ್ಲಿ ವಿಶೇಷ ಪೂಜೆ ಜರುಗಿತು.
ಪ್ರಸನ್ನ ನಂಜುಂಡೇಶ್ವರ ದೇವಾಲಯ: ಚಿಕ್ಕಯ್ಯನಛತ್ರದಲ್ಲಿರುವ ಪ್ರಸನ್ನ ನಂಜುಂಡೇಶ್ವರಸ್ವಾಮಿ ದೇವಾಲಯದಲ್ಲಿ ಮಹಾಶಿವರಾತ್ರಿ ಅಂಗವಾಗಿ ವಿಶೇಷ ಪೂಜೆ ಕೈಂಕರ್ಯ ನೆರವೇರಿತು. ಗರ್ಭಗುಡಿಯಲ್ಲಿ ವಿಶೇಷ ಪುಷ್ಪಾಲಂಕಾರವನ್ನು ಕೈಗೊಳ್ಳಲಾಗಿತ್ತು. ನೂರಾರು ಭಕ್ತರು ಆಗಮಿಸಿ ದರ್ಶನ ಪಡೆದರು.
ಶರಣ ಸಂಗಮ ಮಠ: ತಾಲೂಕಿನ ದೇವೀರಮ್ಮನಹಳ್ಳಿ ಬಡಾವಣೆಯಲ್ಲಿರುವ ಶರಣ ಸಂಗಮ ಮಠದಲ್ಲಿ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ 108 ಶಿವಲಿಂಗಗಳ ದಿವ್ಯ ದರ್ಶನವನ್ನು ಏರ್ಪಡಿಸಲಾಗಿತ್ತು. ರುದ್ರಾಕ್ಷಿ ಮಾಲೆ ಸೇವೆಗೈಯಲಾಯಿತು. ಶಿವನ ಲಿಂಗಕ್ಕೆ ಭಕ್ತರು ಬಿಲ್ವಾರ್ಚನೆ ಪೂಜೆ ಸಲ್ಲಿಸಿ ಕೃತಾರ್ಥರಾದರು.
ಶಿವಜಯಂತಿ: ನಗರದ ಥಾಮಸ್ ಲೇಔಟ್‌ನಲ್ಲಿರುವ ಪ್ರಜಾಪಿತ ಈಶ್ವರೀಯ ವಿದ್ಯಾಲಯದ ಆವರಣದಲ್ಲಿ ಮಹಾಶಿವರಾತ್ರಿ ಅಂಗವಾಗಿ 84ನೇ ಶಿವ ಜಯಂತಿ ಆಚರಿಸಲಾಯಿತು. ನಗರದ ಅರಮನೆ ಮೈದಾನದಲ್ಲಿ ಯುವ ಬ್ರಿಗೇಡ್ ಹಾಗೂ ಧರ್ಮ ಜಾಗೃತಿ ಬಳಗದ ವತಿಯಿಂದ ಸಂಜೆ ಲೋಕ ಕಲ್ಯಾಣಾರ್ಥ ಲಕ್ಷ ಶಿವ ಪಂಚಾಕ್ಷರಿ ಹೋಮವನ್ನು ನಡೆಸಲಾಯಿತು.
ಸುತ್ತೂರಿನಲ್ಲೂ ಪೂಜೆ: ತಾಲೂಕಿನ ಸುತ್ತೂರು ವೀರಸಿಂಹಾಸನ ಮಹಾಸಂಸ್ಥಾನ ಮಠದ ಗದ್ದುಗೆ ಆವರಣದಲ್ಲಿ ಶಿವಸ್ಮರಣೆ ಅಂಗವಾಗಿ ಶಿವರಾತ್ರೀಶ್ವರ ಶಿವಯೋಗಿಗಳ ಕರ್ತೃಗದ್ದುಗೆ, ಮಹದೇಶ್ವರ, ಸೋಮೇಶ್ವರ, ವೀರಭದ್ರೇಶ್ವರ ಹಾಗೂ ನಾರಾಯಣಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಜರುಗಿತು. ಶಿವದೀಕ್ಷೆ ಹಾಗೂ ಬೆಳ್ಳಿರಥ ಪ್ರಾಕಾರೋತ್ಸವದಲ್ಲಿ ಭಕ್ತರು ಪಾಲ್ಗೊಂಡಿದ್ದರು.