ನ್ಯೂಸ್

ಅಭಿವೃದ್ಧಿಗೆ ಅವೈಜ್ಞಾನಿಕ ಕಾಮಗಾರಿ ಕಪ್ಪುಚುಕ್ಕಿ: ಮುಚ್ಚಿರುವ ನೀರುಗಾಲುವೆ, ಚರಂಡಿಗಳು ಹೆದ್ದಾರಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜಮೀನುಗಳು ಜಲಾವೃತ

Ramanagara

ಚನ್ನಪಟ್ಟಣ : ನೂತನವಾಗಿ ನಿರ್ವಾಣವಾಗುತ್ತಿರುವ ಬೆಂಗಳೂರು-ಮೈಸೂರು

ಎನ್‌ಎಚ್ ಬೈಪಾಸ್ ರಸ್ತೆ ಅಭಿವೃದ್ಧಿಯ ಸಂಕೇತ ಎಂಬುದು ಎಲ್ಲರ ಅನಿಸಿಕೆಯಾಗಿತ್ತು. ಆದರೆ, ಕೆಲವೆಡೆ ಸಂಬಂಧಪಟ್ಟವರ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನದಿಂದಾಗಿ ಆಗಿರುವ ಎಡವಟ್ಟುಗಳು

ಇಡೀ ಕಾಮಗಾರಿಯನ್ನೇ ಶಪಿಸುವಂತೆ ವಾಡಿದೆ.

ಹೌದು... ಬೆಂಗಳೂರಿನಿಂದ ಮೈಸೂರುವರೆಗೆ ನೂತನ ರಸ್ತೆ ಕಾಮಗಾರಿಯೂ ಭರದಿಂದ ಸಾಗಿದೆ. ನಗರ ಹೊರವಲಯದಲ್ಲಿ ಹಾದುಹೋಗುವ ಈ ಬೈಪಾಸ್ ರಸ್ತೆ ಕಾಮಗಾರಿ ಈಗಾಗಲೇ ಮೂಕ್ಕಾಲು ಭಾಗ ಪೂರ್ಣಗೊಂಡಿದೆ. ಇದು ಬಹುಪಾಲು ಗ್ರಾಮೀಣ ಪ್ರದೇಶದಲ್ಲಿ ಹಾದುಹೋಗಿದ್ದು, ಭೂ ಸ್ವಾಧೀನಕ್ಕೆ ಹೆಚ್ಚಿನ ಹಣ ಸೇರಿ ಅಕ್ಕಪಕ್ಕದ ಪ್ರದೇಶದ ಅಭಿವೃದ್ಧಿಗೆ ಮುನ್ನುಡಿ ಬರೆದಿದೆ. ಆದರೆ, ಕೆಲವೆಡೆ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಅಭಿವೃದ್ಧಿಯ ಸಂಕೇತ

ಎಂದು ಹೆಗ್ಗಳಿಕೆ ಪಡೆದಿದ್ದ ರಸ್ತೆಗೆ ಕಪ್ಪುಚುಕ್ಕಿ ಇಟ್ಟಂತಾಗಿದೆ.

ಕೈಗೆ ಬಂದ ಬೆಳೆ ಮಳೆ ನೀರು ಪಾಲು : ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಚನ್ನಪಟ್ಟಣ ತಾಲೂಕಿನ ಚಿಕ್ಕನದೊಡ್ಡಿ ಗ್ರಾಮದ ರೈತ ಅಜಿತ್ (ರಾವೇಂದ್ರ) ಎಂಬಾತ ಹೆದ್ದಾರಿ ಪಕ್ಕದಲ್ಲಿರುವ 2 ಎಕರೆಯಲ್ಲಿ ಬೆಳೆದಿದ್ದ ಟೊಮ್ಯಾಟೊ ಬೆಳೆ ಮಳೆ ನೀರು ಪಾಲಾಗಿದೆ. ಹೆದ್ದಾರಿಯ ಕುಂತೂರುದೊಡ್ಡಿ ಹಾಗೂ ಕೋಮನಹಳ್ಳಿ ಮಧ್ಯ ಭಾಗದಲ್ಲಿ ಸೂಕ್ತ ರೀತಿಯಲ್ಲಿ ಚರಂಡಿ ನಿರ್ಮಿಸದಿರುವುದು ಇದಕ್ಕೆ ಕಾರಣವಾಗಿದೆ.

ಸೋಮವಾರ ಸುರಿದ ಭಾರಿ ಮಳೆಯಿಂದಾಗಿ ನೀರು ಹರಿಯಲು ಸಾಧ್ಯವಾಗದೆ, ಈತನ ಜಮೀನನ್ನು ಆವರಿಸಿದೆ. ಇದರಿಂದಾಗಿ ಇನ್ನೆರಡು ದಿನಗಳಲ್ಲಿ ಕಟಾವಿಗೆ ಸಿದ್ಧವಾಗಿದ್ದ ಟೊಮ್ಯಾಟೊ ಬೆಳೆ ನೀರು ಪಾಲಾಗಿದೆ. ಇಷ್ಟೇ ಅಲ್ಲದೆ ತಾಲೂಕಿನ ಬೈರಾಪಟ್ಟಣ ಬಳಿ ಹಾದುಹೋಗುವ ಈ ಹೆದ್ದಾರಿಯ ಒಂದು ಬದಿಯಿಂದ ಮತ್ತೊಂದು ಬದಿಗೆ ನೀರು ಹರಿಯಲು ಕಾಲುವೆ ಇತ್ತು. ಕಾಮಗಾರಿಗಾಗಿ ಹಲವು ತಿಂಗಳ ಹಿಂದೆಯೇ ಈ ಕಾಲುವೆ ಮುಚ್ಚಲಾಗಿದೆ. ಈ ಪ್ರದೇಶ ಮಳೂರು ಕೆರೆಯ ಅಚ್ಚುಕಟ್ಟು ಪ್ರದೇಶವಾಗಿದ್ದು, ಹೆದ್ದಾರಿಯ ಎರಡು ಬದಿ ರೈತರ ನೂರಾರು ಎಕರೆ ಗದ್ದೆಗಳಿವೆ. ಕಾಲುವೆ ಮುಚ್ಚಿರುವುದರಿಂದ ನೀರು ರೈತರ ಜಮೀನುಗಳಲ್ಲಿ ನಿಲ್ಲುತ್ತಿದೆ. ಭತ್ತ ನಾಟಿ ವಾಡಿರುವ ಗದ್ದೆಗಳಲ್ಲಿ ಆಳುದ್ದ ನೀರು ನಿಂತು ಬೆಳೆ ಸಂಪೂರ್ಣ ನಾಶವಾಗಿದೆ.

ಅಧಿಕಾರಿಗಳ ವಿರುದ್ಧ ಆಕ್ರೋಶ : ಈ ರಸ್ತೆಯನ್ನು ಡಿಬಿಎಲ್ ಸಂಸ್ಥೆ ಗುತ್ತಿಗೆ ವಹಿಸಿಕೊಂಡಿದ್ದು, ಸಂಸ್ಥೆ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಇದರ ಹೊಣೆ ಹೊತ್ತಿರುವ ಹೆದ್ದಾರಿ ಅಧಿಕಾರಿಗಳ ಬೇಜವಾಬ್ದಾರಿತನದಿಂದಾಗಿ ರೈತರು ಸಮಸ್ಯೆಗೆ ಸಿಲುಕಿ ಪರದಾಡುವಂತಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಾಲೂಕು ಆಡಳಿತ ಹಾಗೂ ಜನಪ್ರತಿನಿಧಿಗಳು ಸಮಸ್ಯೆಯನ್ನು

ಗಂಭೀರವಾಗಿ ಪರಿಗಣಿಸಬೇಕು ಎಂದು ರೈತರು ಮನವಿ ವಾಡಿದ್ದಾರೆ.

ಸಮಸ್ಯೆ ಬಗೆಹರಿಸಿಕೊಟ್ಟ ತಹಸೀಲ್ದಾರ್ : ವಿಷಯ ತಿಳಿದ ತಹಸೀಲ್ದಾರ್ ಎಲ್. ನಾಗೇಶ್ ಹಾಗೂ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ತೆರಳಿ ಪ್ರತಿಭಟನಾಕಾರರ ಮನವಿ ಆಲಿಸಿದರು. ಸಂಬಂಧಪಟ್ಟ ಅಧಿಕಾರಿಗಳನ್ನು ಕರೆಸಿ, ಕೂಡಲೇ ಸಮಸ್ಯೆ ಬಗಹರಿಸುವಂತೆ ತಾಕೀತು ಮಾಡಿದರು. ತಕ್ಷಣಕ್ಕೆ ಜೆಸಿಬಿ ವಾಹನಗಳ ಮೂಲಕ ಕಾಲುವೆ ಮಾಡಿಸಿ ನೀರು ಹರಿಯಲು ವ್ಯವಸ್ಥೆ ಮಾಡಿದರು. ಇದರೊಂದಿಗೆ ಚಿಕ್ಕನದೊಡ್ಡಿ ಗ್ರಾಮಕ್ಕೂ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಸಮಸ್ಯೆ ಬಗೆಹರಿಸುವ ಪ್ರಯತ್ನ ನಡೆಸಿದರು.

ಗ್ರಾಮದ ಅಚ್ಚುಕಟ್ಟು ಪ್ರದೇಶದಲ್ಲಿದ್ದ ನೀರುಗಾಲುವೆಯನ್ನು ಹೆದ್ದಾರಿ ಕಾಮಗಾರಿಗಾಗಿ ಮುಚ್ಚಿ ಹಲವು ತಿಂಗಳು ಕಳೆದಿದೆ. ಈ ಬಗ್ಗೆ ಹೋರಾಟ ನಡೆಸಿದರೂ ಪ್ರಯೋಜನವಾಗಿಲ್ಲ. ಒಂದು ಬದಿಯಿಂದ ಮತ್ತೊಂದು ಬದಿಗೆ ನೀರು ಹರಿಯಲು ಸಾಧ್ಯವಾಗದೆ, ಹತ್ತಾರು ಎಕರೆ ಗದ್ದೆ ನೀರು ಪಾಲಾಗಿದೆ. ಮಂಗಳವಾರ ತಹಸೀಲ್ದಾರ್ ಆಗಮಿಸಿದ ಮೇಲೆ ನೀರು ಹರಿಯಲು ಡಿಬಿಎಲ್ ಕಂಪನಿಯವರು ಕಾಲುವೆ ನಿರ್ಮಿಸಲು ಮುಂದಾಗಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಜತೆ ಸಮಸ್ಯೆಗಳ ಬಗ್ಗೆ ಸಂವಹನ ನಡೆಸಲು ಯಾರೊಬ್ಬರೂ ಸಿಗುತ್ತಿಲ್ಲ. ದಿಲೀಪ್ ಉಪಾಧ್ಯಕ್ಷ, ಬೈರಾಪಟ್ಟಣ ಗ್ರಾಪಂ
ಹೆದ್ದಾರಿ ಅಧಿಕಾರಿಗಳ ನಿರ್ಲಕ್ಷ್ಯ, ಬೇಜವಾಬ್ದಾರಿತನ ಹಾಗೂ ಅವೈಜ್ಞಾನಿಕವಾಗಿ ನಿರ್ಮಿಸಿರುವ ಚರಂಡಿಯಿಂದ ಕಟಾವಿಗೆ ಸಿದ್ಧವಾಗಿದ್ದ 2 ಎಕರೆಯಲ್ಲಿ ಬೆಳೆದಿದ್ದ ಟೊಮ್ಯಾಟೋ ಬೆಳೆ ನೀರು ಪಾಲಾಗಿದೆ. ಉತ್ತಮ ದರವಿದ್ದ ಕಾರಣ ಬೆಳೆಯ ಬಗ್ಗೆ ಸಾಕಷ್ಟು ನಿರೀಕ್ಷೆ ಇತ್ತು. ಆದರೆ, ಎಲ್ಲವೂ ಮಳೆನೀರಿನಲ್ಲಿ ಕೊಚ್ಚಿ ಹೋಗಿದೆ. ನಷ್ಟಕ್ಕೆ ಪರಿಹಾರ ಕಟ್ಟಿಕೊಡಬೇಕು. ಅಜಿತ್ (ರಾವೇಂದ್ರ) ರೈತ, ಚಿಕ್ಕನದೊಡ್ಡಿ