ತೀರ್ಥಹಳ್ಳಿ: ಕಳೆದ ಐದು ವರ್ಷಗಳ ಅವಧಿಯಲ್ಲಿ ಪಟ್ಟಣದ ಜನತೆಯ ನಿರೀಕ್ಷೆಗೆ ಪೂರಕವಾಗಿ ಕಾರ್ಯನಿರ್ವಹಿಸಿದ ತೃಪ್ತಿ ಇದೆ. ಈ ಅವಧಿಯಲ್ಲಿ ಸಹಕಾರ ನೀಡಿದ ಪಟ್ಟಣದ ಜನತೆ ಹಾಗೂ ಪ್ರತಿಯೊಬ್ಬ ಸದಸ್ಯರಿಗೂ ಕೃತಜ್ಞತೆ ಸಲ್ಲಿಸುತ್ತಿದ್ದೇವೆ ಎಂದು ಪಪಂ ಅಧ್ಯಕ್ಷ ರತ್ನಾಕರ ಶೆಟ್ಟಿ ಹೇಳಿದರು.
ಪಟ್ಟಣ ಪಂಚಾಯಿತಿ ಆಡಳಿತ ಮುಕ್ತಾಯವಾದ ಹಿನ್ನೆಲೆಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 21 ವರ್ಷಗಳ ನಂತರ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ದೊರೆತಿದ್ದು, 5 ವರ್ಷಗಳ ಪೂರ್ಣ ಅವಧಿಗೆ ಆಡಳಿತ ನಡೆಸುವ ಅವಕಾಶ ದೊರೆತಿದೆ. ಈ ಅವಧಿಯಲ್ಲಿ ಪಟ್ಟಣದ ಅಭಿವೃದ್ಧಿಯನ್ನು ಗಮನದಲ್ಲಿಟ್ಟಿಕೊಂಡು ವಿಪಕ್ಷಗಳ ಸಹಕಾರವನ್ನೂ ಪಡೆದು 26 ಕೋಟಿ ರೂ.ಗೂ ಮಿಕ್ಕಿ ಅಭಿವೃದ್ಧಿ ಕಾರ್ಯ ನಿರ್ವಹಿಸಿದ್ದೇವೆ ಎಂದರು.
ಪಟ್ಟಣದ ಸ್ವಚ್ಛತೆಗೆ ಆದ್ಯತೆ, ಬಡ ಕುಟುಂಬಗಳಿಗೆ ಕುಡಿಯುವ ನೀರಿನ ಉಚಿತ ನಲ್ಲಿ ಸಂಪರ್ಕ, 23 ಅಲೆಮಾರಿ ಕುಟುಂಬಗಳಿಗೆ ಉಚಿತ ನಿವೇಶನ ವಿತರಣೆ, ಪಪಂ ಕಚೇರಿಯಲ್ಲೇ ನೀರಿನ ತೆರಿಗೆ ಪಾವತಿಗೆ ಕೌಂಟರ್ ಸ್ಥಾಪನೆ, ಶೌಚಗೃಹ ಗುಂಡಿ ಸ್ವಚ್ಛತೆಗೆ ಸಕ್ಕಿಂಗ್ ಮಷಿನ್ ಹಾಗೂ ಒಂದು ಜೆಸಿಬಿ ಖರೀದಿ, ಗೋಪಾಲ ಗೌಡ ರಂಗಮಂದಿರಕ್ಕೆ ಅತ್ಯಾಧುನಿಕ ಧ್ವನಿ ಮತ್ತು ಬೆಳಕಿನ ವ್ಯವಸ್ಥೆ, ತುಂಗಾ ನದಿಯಲ್ಲಿರುವ ರಾಮಮಂಟಪಕ್ಕೆ ಹೋಗಲು ಅನುಕೂಲವಾಗುವಂತೆ ಕಬ್ಬಿಣದ ಸೇತುವೆ ನಿರ್ಮಾಣ, ರಾಮೇಶ್ವರ ದೇವಸ್ಥಾನದ ಆವರಣಕ್ಕೆ ಇಂಟರ್ ಲಾಕ್ ಹಾಸು ನಿರ್ಮಾಣ ಹೀಗೆ ಹತ್ತು ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇವೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಕ್ಷೇತ್ರದ ಶಾಸಕರಾದ ಆರಗ ಜ್ಞಾನೇಂದ್ರ, ಮಾಜಿ ಶಾಸಕ ಕಿಮ್ಮನೆ ರತ್ನಾಕರ್ ಹಾಗೂ ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಅವರ ನೆರವು ನಿರ್ಣಾಯಕವಾಗಿದೆ. ಕಾದಿರಿಸಿದ್ದರೂ ಕುವೆಂಪು ಬಯಲು ರಂಗಮಂದಿರ, ಫುಡ್ ಕೋರ್ಟ್ ಮತ್ತು ಈಜುಕೊಳ ನಿರ್ಮಾಣ ನಮ್ಮ ಅವಧಿಯಲ್ಲಿ ನಿರ್ಮಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿದರು. ಉಪಾಧ್ಯಕ್ಷೆ ಗೀತಾ ರಮೇಶ್ ಇದ್ದರು.