ನ್ಯೂಸ್

ಅಭಿವೃದ್ಧಿ ಯೋಜನೆ ಅಜೆಂಡಾ; ದೆಹಲಿಗೆ ಸಿಎಂ ಬೊಮ್ಮಾಯಿ: ಡಬಲ್ ಇಂಜಿನ್ ಸರ್ಕಾರ ಸಾಕಾರಕ್ಕೆ ಯತ್ನ

ಬೆಂಗಳೂರು: ಕೇಂದ್ರ ಸರ್ಕಾರದ ಮುಂದಿರುವ ರಾಜ್ಯದ ಪ್ರಮುಖ ಯೋಜನೆಗಳಿಗೆ ಸಮ್ಮತಿ ಪಡೆದು, ಅವುಗಳನ್ನು ರ್ತಾಕ ಅಂತ್ಯಕ್ಕೆ ಕೊಂಡೊಯ್ಯುವ ಉದ್ದೇಶದಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೋಮವಾರ ದೆಹಲಿಗೆ ತೆರಳಿದ್ದಾರೆ. ಅಭಿವೃದ್ಧಿ ಯೋಜನೆಗಳು ಸಿಎಂ ಬೊಮ್ಮಾಯಿ ದೆಹಲಿ ಪ್ರವಾಸದ ಪ್ರಧಾನ ಅಜೆಂಡಾ. ಕೈಗಾರಿಕಾ ಮತ್ತು ವಾಣಿಜ್ಯ, ಜಲಶಕ್ತಿ, ಕಲ್ಲಿದ್ದಲು ಮತ್ತು ಗಣಿ, ರೈಲ್ವೆ, ನಾಗರಿಕ ವಿಮಾನಯಾನ ಸಚಿವರನ್ನು ಅವರು ಭೇಟಿಯಾಗುವ ಸಾಧ್ಯತೆಗಳಿವೆ. ಉತ್ತರ ಕರ್ನಾಟಕದ ಮಹತ್ವಾಕಾಂಕ್ಷೆಯ ಮೂರು ಪ್ರಮುಖ ನೀರಾವರಿ ಯೋಜನೆಗಳು, ದಕ್ಷಿಣ ಕರ್ನಾಟಕದ ರಾಷ್ಟ್ರೀಯ ಹೆದ್ದಾರಿ, ಸಮಗ್ರ ಕರ್ನಾಟಕಕ್ಕೆ ಸಂಬಂಧಿಸಿದ ನೂತನ ರೈಲ್ವೆ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಬೇಕಾದ ಕ್ರಮಗಳ ಬಗ್ಗೆ ಸಮಾಲೋಚಿಸಲಿದ್ದಾರೆ.

ಚುನಾವಣೆಗೆ ಸಿದ್ಧತೆ: ಪ್ರಧಾನಿ ನರೇಂದ್ರ ಮೋದಿ ‘ಡಬಲ್ ಇಂಜಿನ್ ಸರ್ಕಾರ’ದ ಲಾಭಗಳ ಬಗ್ಗೆ ರಾಜ್ಯದ ಜನರ ಗಮನಸೆಳೆದಿದ್ದು, ಸಕಾರಾತ್ಮಕ ಅಭಿಪ್ರಾಯ ರೂಪುಗೊಳ್ಳುತ್ತಿದೆ. ಗುಜರಾತ್ ಚುನಾವಣೆ ಬಳಿಕ ವರಿಷ್ಠರ ಗಮನ ರಾಜ್ಯದತ್ತ ಹೊರಳಲಿದೆ. ಅದಕ್ಕೂ ಮುನ್ನ ಭೂಮಿಕೆ ಸಿದ್ಧಗೊಳಿಸಬೇಕು ಎನ್ನುವುದು ಬೊಮ್ಮಾಯಿ ಬಯಕೆಯಾಗಿದೆ.

ಚುನಾವಣೆಗೆ ಪೂರಕವಾದ ವಾತಾವರಣ ಸೃಷ್ಟಿಗೆ ರಾಜ್ಯ ಸರ್ಕಾರ, ಪಕ್ಷದ ಸಂಘಟನೆ ನಡೆಸುತ್ತಿರುವ ತಾಲೀಮಿಗೆ ಕೇಂದ್ರ ಸಚಿವರು ಸಾಥ್ ನೀಡಿದರೆ ಬಲ ಹೆಚ್ಚಲಿದೆ. ಸಚಿವರು ಹೆಚ್ಚಿನ ಮುತುವರ್ಜಿ ವಹಿಸಿದರೆ ಸಂಬಂಧಿಸಿದ ಅಧಿಕಾರಿಗಳು ಕ್ರಿಯಾಶೀಲರಾಗಲಿದ್ದು, ಯೋಜನೆಗಳಿಗೆ ಗ್ರೀನ್ ಸಿಗ್ನಲ್ ಲಭಿಸಿದರೆ ಹೊಸ ಅಲೆ ಸೃಷ್ಟಿಯಾಗಲಿದೆ. ಜನರ ವಿಶ್ವಾಸ ಗಳಿಸಲು ಉದ್ದೇಶಿತ ಜನಸಂಕಲ್ಪ ಯಾತ್ರೆ, ಕಾರ್ಯಕರ್ತರಲ್ಲಿ ಹುರುಪು ತುಂಬುವ ಮೋರ್ಚಾ ಸಮಾವೇಶಗಳು ಮಹತ್ವ ಪಡೆದುಕೊಳ್ಳಲಿದೆ ಎನ್ನುವುದು ಬೊಮ್ಮಾಯಿ ಲೆಕ್ಕಾಚಾರ.

ಅಸಮಾಧಾನ ಶಮನ ಯತ್ನ: ಮಹಾರಾಷ್ಟ್ರ ಗಡಿ ತಗಾದೆ ನ. 30ರಂದು ಸುಪ್ರೀಂ ಕೋರ್ಟ್​ನಲ್ಲಿ ವಿಚಾರಣೆಗೆ ಬರಲಿದ್ದು, ಮುನ್ನಾ ದಿನವೇ ಸಿಎಂ ಬೊಮ್ಮಾಯಿ ದೆಹಲಿಯಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಹಿರಿಯ ವಕೀಲ ಮುಕುಲ್ ರೋಹಟಗಿ ಜತೆಗೆ ಮಾತುಕತೆಗೆ ತೀರ್ವನಿಸಿದ್ದು, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಭೇಟಿ ಈ ಪ್ರವಾಸದ ಮುಖ್ಯ ಉದ್ದೇಶ ಎಂದು ಸಿಎಂ ಹೇಳಿದ್ದಾರೆ. ಈ ಮೂಲಕ ಸಚಿವಾಕಾಂಕ್ಷಿಗಳಿಗೆ ಸಂದೇಶವೊಂದನ್ನು ರವಾನಿಸಿ ಅಸಮಾಧಾನ ಶಮನಗೊಳಿಸಲು ಯತ್ನಿಸಿದ್ದಾರೆ. ಗುಜರಾತ್ ಚುನಾವಣೆಯಲ್ಲಿ ವ್ಯಸ್ತವಾಗಿರುವ ರಾಷ್ಟ್ರೀಯ ನಾಯಕರು ಕಾಲಾವಕಾಶ ನೀಡುವುದು ಅನುಮಾನ ಎನ್ನಲಾಗುತ್ತಿದೆ. ಸಚಿವ ಸಂಪುಟ ಪುನಾರಚನೆ ಅಥವಾ ವಿಸ್ತರಣೆ ಕುರಿತು ದೆಹಲಿ ನಾಯಕರೊಂದಿಗೆ ಚರ್ಚೆ ಮಾಡುತ್ತಿಲ್ಲ. ಒತ್ತಡ ಹೇರುತ್ತಿಲ್ಲವೆಂಬ ಸಿಟ್ಟು ಆಕಾಂಕ್ಷಿಗಳಲ್ಲಿದೆ. ಇದನ್ನು ಶಮನ ಮಾಡಲು ಬೊಮ್ಮಾಯಿ ಮುಂದಾಗಿದ್ದಾರೆ.

ಅಧ್ಯಕ್ಷ ಜೆ.ಪಿ. ನಡ್ಡಾ ಭೇಟಿಗಾಗಿ ದೆಹಲಿಗೆ ತೆರಳುತ್ತಿದ್ದು, ಇನ್ನೂ ಕಾಲಾವಕಾಶ ಸಿಕ್ಕಿಲ್ಲ. ಕೇಂದ್ರ ಸಚಿವರನ್ನು ಭೇಟಿ ಮಾಡಿ ರಾಜ್ಯದ ಯೋಜನೆಗಳ ಬಗ್ಗೆ ರ್ಚಚಿಸುವೆ. ಜತೆಗೆ ಹಿರಿಯ ವಕೀಲ ಮುಕುಲ್ ರೋಹಟಗಿ ಅವರೊಂದಿಗೆ ಚರ್ಚೆ ನಡೆಸುವೆ. | ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ

ಪ್ರಮುಖ ಪ್ರಸ್ತಾವನೆಗಳು

  • ರಾಜ್ಯಕ್ಕೆ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮಂಜೂರು
  • ಭದ್ರಾ ಮೇಲ್ದಂಡೆ ಯೋಜನೆ ರಾಷ್ಟ್ರೀಯ ಯೋಜನೆಯಾಗಿ ಅನುಮತಿ
  • ಕೃಷ್ಣಾ ಎರಡನೇ ನ್ಯಾಯಾಧಿಕರಣದ ತೀರ್ಪಿನ ಅಧಿಸೂಚನೆಗೆ ಅವಕಾಶ
  • ಕಳಸಾ-ಬಂಡೂರಿ ನಾಲಾ ಪರಿಷ್ಕೃತ ಯೋಜನೆಗೆ ಸಮ್ಮತಿಸಲು ಮನವಿ
  • ಮೈಸೂರು-ಬೆಂಗಳೂರು ದಶಪಥ ಹೆದ್ದಾರಿ ತಾಂತ್ರಿಕ ತೊಡಕು ನಿವಾರಣೆ
  • ರಾಷ್ಟ್ರೀಯ ಹೆದ್ದಾರಿ, ನೂತನ ರೈಲ್ವೆ ಯೋಜನೆಗಳ ಕಾಮಗಾರಿ ವೇಗ ವೃದ್ಧಿ