ಹುಣಸೂರು: ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ(ಟಿಎಪಿಸಿಎಂಎಸ್)ವು ಆರ್ಥಿಕ ಸದೃಢತೆಯತ್ತ ಸಾಗುವ ಮೂಲಕ ರೈತರಿಗೆ ಹೆಚ್ಚಿನ ನೆರವು ನೀಡಲು ಮುಂದಾಗಿರುವುದು ಶ್ಲಾಘನೀಯ ಎಂದು ಶಾಸಕ ಜಿ.ಡಿ.ಹರೀಶ್‌ಗೌಡ ಅಭಿಪ್ರಾಯಪಟ್ಟರು.
ನಗರದ ಸಂತೆಮಾಳ ಮುಂಭಾಗದ ಅಕ್ಕಿಗಿರಣಿ ಆವರಣದಲ್ಲಿ ಸೋಮವಾರ ಸಂಘದ ವತಿಯಿಂದ ನೂತನವಾಗಿ ನಿರ್ಮಾಣಗೊಂಡಿರುವ 9 ಮಳಿಗೆಗಳ ಉದ್ಘಾಟನೆ ಮತ್ತು ಸಂಘದ 2023-24ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಭೆಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
2023-24ನೇ ಸಾಲಿನಲ್ಲಿ ಸಂಘವು 10.10 ಲಕ್ಷ ರೂ.ಗಳ ನಿವ್ವಳ ಲಾಭ ಗಳಿಸಿರುವುದು ಸಂಘದ ಆರ್ಥಿಕತೆಗೆ ಭದ್ರ ಬುನಾದಿ ಹಾಕಿದಂತಾಗಿದೆ. ಅಲ್ಲದೇ ಇದೀಗ ಸಂಘದ ವತಿಯಿಂದ ಶಿಥಿಲಾವಸ್ಥೆಯಲ್ಲಿದ್ದ 9 ಮಳಿಗೆಗಳನ್ನು ಮರು ನಿರ್ಮಾಣ ಮಾಡಲಾಗಿದ್ದು, 2ನೇ ಹಂತದಲ್ಲಿ ಇನ್ನು 9 ಮಳಿಗೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಆರ್ಥಿಕ ಭದ್ರತೆ ಇದ್ದಲ್ಲಿ ಮಾತ್ರ ಅಭಿವೃದ್ಧಿ ಸಾಧ್ಯ. ಸಂಘದ ಅಧ್ಯಕ್ಷರಾದಿಯಾಗಿ ಎಲ್ಲರೂ ಅತ್ಯಂತ ಪಾರದರ್ಶಕವಾಗಿ ಕರ್ತವ್ಯ ನಿರ್ವಹಿಸುತ್ತಿರುವುದು ಉತ್ತಮವಾಗಿದೆ. ಟಿಎಪಿಸಿಎಂಎಸ್‌ನ ಆಸ್ತಿಯಾಗಿರುವ ಪಿಎಲ್‌ಡಿ ಬ್ಯಾಂಕ್ ಆವರಣ ಮತ್ತು ಕಸಬಾ ವಿಎಸ್‌ಎಸ್‌ಎನ್ ಭಾಗಗಳಲ್ಲೂ ಕೂಡ ಹಲವು ರೀತಿಯ ಅಭಿವೃದ್ಧಿಕಾರ್ಯಗಳು ನಡೆದಿವೆ ಎಂದರು.
ಹೊಸ ಸಾಲ ಇಲ್ಲ, ಡಿಪಾಸಿಟ್‌ನಲ್ಲಿ ಇಳಿಕೆ: ರಾಜ್ಯಾದ್ಯಂತ ಡಿಸಿಸಿ ಬ್ಯಾಂಕ್‌ಗಳಿಗೆ ಚುನಾವಣೆ ನಡೆಯುತ್ತಿದೆ. ಆದರೆ ಮೈಸೂರು ಚಾಮರಾಜನಗರ ಜಿಲ್ಲೆಯ ಡಿಸಿಸಿ ಬ್ಯಾಂಕ್‌ಗೆ ಮಾತ್ರ ಚುನಾವಣೆ ನಡೆಸಲು ಸರ್ಕಾರ ಮೀನಾಮೇಷ ಎಣಿಸುತ್ತಿದೆ. ಸಹಕಾರ ಕ್ಷೇತ್ರದಲ್ಲಿ ರಾಜಕೀಯ ಹಸ್ತಕ್ಷೇಪ ಬೇಡವೆನ್ನುತ್ತಲೇ ಮೀಸಲಾತಿ ಹೆಸರಿನಲ್ಲಿ ನಾಮನಿರ್ದೇಶನ ಮಾಡಲು ಸರ್ಕಾರ ಹೊರಡುವ ಮೂಲಕ ಸಹಕಾರ ಕ್ಷೇತ್ರವನ್ನು ಹಾಳು ಮಾಡಲು ಹೊರಟಿದೆ. ತಾವು ಅಧ್ಯಕ್ಷರಾಗಿ 5 ವರ್ಷಗಳ ಅವಧಿಯಲ್ಲಿ 300 ಕೋಟಿ ರೂ.ಗಳಿದ್ದ ಡಿಪಾಸಿಟ್ ಅನ್ನು 1000 ಸಾವಿರ ಕೋಟಿ ರೂ.ಗಳಿಗೆ ಏರಿಸಿದ್ದೆ. ಇದೀಗ ಕೇವಲ 6 ತಿಂಗಳಲ್ಲಿ ಡಿಪಾಸಿಟ್ ಮೊತ್ತ 800 ಕೋಟಿ ರೂ.ಗೆ ಇಳಿದಿದೆ. ರೈತರ ಸಾಲ ನವೀಕರಣ ಆಗುತ್ತಿಲ್ಲ. ಹೊಸ ಸಾಲದ ಮಾತೇ ಇಲ್ಲ. ಇಂತಹ ಪರಿಸ್ತಿತಿಯನ್ನು ಸರ್ಕಾರ ತಂದಿರುವುದು ದುರಂತವೇ ಸರಿ ಎಂದು ಬೇಸರಿಸಿದರು.
ಸಂಘದ ಅಧ್ಯಕ್ಸ ಬಸವಲಿಂಗಯ್ಯ ಮಾತನಾಡಿ, ಸಂಘದ ಷೇರುದಾರರು ಮತ್ತು ಆಡಳಿತ ಮಂಡಳಿ ನಿರ್ದೇಶಕರ ನೆರವಿನಿಂದ ಹೊಸದಾಗಿ 9 ಮಳಿಗೆಗಳ ನಿರ್ಮಾಣ ಕಾರ್ಯ ಸಂಪನ್ನಗೊಂಡಿದೆ. ಇನ್ನೂ 9 ಮಳಿಗೆಗಳ ಕಾಮಗಾರಿ ಪ್ರಗತಿಯಲ್ಲಿದೆ. ಇನ್ನು ಮುಂದೆ ಬಾಡಿಗೆಯಿಂದ ವಾರ್ಷಿಕ 2.10 ಲಕ್ಷ ರೂ.ಗಳ ಆದಾಯ ದೊರಕಲಿದೆ. ದಲಿತ ಸಮಾಜದ ಬಡಕುಟುಂಬದಿಂದ ಬಂದ ನನ್ನನ್ನು ಶಾಸಕ ಹರೀಶ್‌ಗೌಡ ಅಧ್ಯಕ್ಷನನ್ನಾಗಿಸಿ ಮಾದರಿಯಾಗಿದ್ದಾರೆ. ಬಡವರ ಪರ, ರೈತಪರ ಕಾಳಜಿ ಹೊಂದಿರುವ ಪ್ರಾಮಾಣಿಕ ನಾಯಕತ್ವ ತಾಲೂಕಿಗೆ ದೊರಕಿದೆ. ಹಾಗಾಗಿ ಎಲ್ಲರೂ ಒಂದಾಗಿ ದುಡಿದು ರೈತರಿಗೆ ಅನುಕೂಲ ಆಗುವ ಕಾರ್ಯಗಳನ್ನು ನಡೆಸೋಣ ಎಂದರು.
ರಾಜ್ಯ ಮಾರಾಟ ಮಹಾಮಂಡಳದ ನಿರ್ದೇಶಕ ಜಯರಾಂ ಮಾತನಾಡಿ, ಮಹಾಮಂಡಳದ ವತಿಯಿಂದ ನೀಡಿದ್ದ 10 ಲಕ್ಷ ರೂ.ಗಳ ಅನುದಾನವನ್ನು ಸಂಘವು ಸದ್ಬಳಕೆ ಮಾಡಿಕೊಂಡಿರುವುದು ಸಂತಸ ತಂದಿದೆ ಎಂದರು.
ಸಮಾರಂಭದಲ್ಲಿ ಉಪಾಧ್ಯಕ್ಷ ರೇವಣ್ಣ, ನಿರ್ದೇಶಕರಾದ ಎ.ಸಿ.ಕೆಂಪೇಗೌಡ, ಬಿ.ನಾಗರಾಜು, ಬಿ.ಎನ್.ವೆಂಕಟೇಶ್, ರಮೇಶ್, ಎಚ್.ಎನ್.ಚಂದ್ರಶೇಖರ್, ಎಚ್.ಪ್ರೇಮ್‌ಕುಮಾರ್, ಸುಜಾತ, ಇಂದುಕಲಾ, ಮಂಗಳಗೌರಿ, ಪ್ರಭಾರ ಕಾರ್ಯದರ್ಶಿ ಹೇಮಲತಾ, ಸಿಬ್ಬಂದಿ ರವಿಕುಮಾರ್, ಸಿ.ವೆಂಕಟೇಶ್, ಎಚ್.ಪಿ.ಮಧು ಸೇರಿದಂತೆ ಸಾವಿರಕ್ಕೂ ಹೆಚ್ಚು ಷೇರುದಾರರು ಪಾಲ್ಗೊಂಡಿದ್ದರು.
ಶಾಸಕ ಜಿ.ಡಿ.ಹರೀಶ್‌ಗೌಡ ಅವರನ್ನು ಸಂಘದ ಕಚೇರಿ ಆವರಣದಿಂದ ಮೆರವಣಿಗೆ ಮೂಲಕ ಸಮಾರಂಭ ನಡೆಯುವ ಸ್ಥಳಕ್ಕೆ ಮೆರವಣಿಗೆ ಮೂಲಕ ಕರೆತರಲಾಯಿತು. ಮೆರವಣಿಗೆಯಲ್ಲಿ ಮೈಲಾಂಬೂರು ಗ್ರಾಮದ ಮೈಲಾರಲಿಂಗೇಶ್ವರ ಗುಡ್ಡರ ಕುಣಿತ ತಂಡವು ಆಕರ್ಷಕ ನೃತ್ಯದೊಂದಿಗೆ ಹೆಜ್ಜೆ ಹಾಕಿತು. ಮಂಗಳವಾದ್ಯ, ಕಳಶಹೊತ್ತ ಮಹಿಳೆಯರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ದಾರಿಯುದ್ದಕ್ಕೂ ಹೂವಿನ ಮಳೆ ಸುರಿಸಲಾಯಿತು.