ನ್ಯೂಸ್

ಸಂಘಟನೆಯಿಂದ ಕಾರ್ಮಿಕರ ಅಭಿವೃದ್ಧಿ

ಪ್ರಸಿನ್ ಕೆ.ಆರ್

ಪಿರಿಯಾಪಟ್ಟಣ: ಸಂಘಟನಾ ಶಕ್ತಿಯಿಂದ ಮಾತ್ರ ಕಾರ್ಮಿಕರರು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಮಲ್ನಾಡ್ ಕೇಬಲ್ ನೆಟ್‌ವರ್ಕ್ ಸಂಸ್ಥೆಯ ಮುಖ್ಯಸ್ಥ ಕೃಷ್ಣ ಅಬ್ಬೆಮನೆ ಹೇಳಿದರು.

ಪಟ್ಟಣದಲ್ಲಿ ಮಂಗಳವಾರ ಆಯೋಜಿಸಿದ್ದ ಪಿರಿಯಾಪಟ್ಟಣ ತಾಲೂಕು ಮಲ್ಲಿಕಾರ್ಜುನ ಕೇಬಲ್ ಆಪರೇಟರ್ ಸಂಘದ ವಾರ್ಷಿಕ ಸಭೆ ಉದ್ಘಾಟಿಸಿ ಮಾತನಾಡಿದರು. ಕೇಬಲ್ ಸಂಪರ್ಕ ನೀಡುವ ಕಂಪನಿ ಹಾಗೂ ಕೇಬಲ್ ಆಪರೇಟರ್‌ಗಳ ನಡುವೆ ಆಗಾಗ್ಗೆ ಭಿನ್ನಾಭಿಪ್ರಾಯ ಬರುವುದು ಸಹಜ. ಆದರೆ, ಇಬ್ಬರೂ ಹೊಂದಿಕೊಂಡು ಹೋಗುವ ಮೂಲಕ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸಬೇಕು ಎಂದರು. ಕೇಬಲ್ ಆಪರೇಟರ್ ಸಂಘದಲ್ಲಿ ಯಾವುದೇ ಸಾವು, ನೋವು ಉಂಟಾದ ಸಂದರ್ಭದಲ್ಲಿ ಮಲ್ನಾಡ್ ಕಂಪನಿ ತಮ್ಮ ಜತೆಗಿರುತ್ತದೆ ಎಂದು ಭರವಸೆ ನೀಡಿದರು.

ಮಲ್ಲಿಕಾರ್ಜುನ ಕೇಬಲ್ ಆಪರೇಟರ್ ಸಂಘದ ಅಧ್ಯಕ್ಷ ಶ್ರೀನಿವಾಸ್ ಮೂರ್ತಿ ಮಾತನಾಡಿ, ಕೇಬಲ್ ಆಪರೇಟರ್‌ಗಳ ಸಮಸ್ಯೆಗಳಿಗೆ ಮಲ್ನಾಡ್ ಕಂಪನಿ ಸ್ಪಂದಿಸುತ್ತಿದ್ದು, ಆಪರೇಟರ್‌ಗಳಿಗೆ ಅಗತ್ಯ ಸವಲತ್ತುಗಳನ್ನು ನೀಡುವ ಮೂಲಕ ಆರ್ಥಿಕ ಸಬಲತೆ ಹೊಂದಬೇಕು ಎಂದರು.

ಆಪರೇಟರ್‌ಗಳ ಸಂಘವನ್ನು ನೋಂದಣಿ ಮಾಡಿಸಿ ಸದಸ್ಯರಿಗೆ ಸಾಲ ಸೌಲಭ್ಯ ಒದಗಿಸಲಾಗುವುದು ಎಂದರು. ಮಲ್ನಾಡ್ ಕಂಪನಿಯ ಸಿಎಫ್‌ಒ ಮೋಹನ್ ಮಾತನಾಡಿದರು. ಕಾರ್ಯದರ್ಶಿ ರಾಜಶೇಖರ್ ವಾರ್ಷಿಕ ವರದಿ ಮಂಡಿಸಿದರು. ಸಂಘದ ಅಧ್ಯಕ್ಷ ಶ್ರೀನಿವಾಸ ಮೂರ್ತಿ ಸೇರಿದಂತೆ ಸದಸ್ಯರನ್ನು ಸನ್ಮಾನಿಸಲಾಯಿತು.

ಮಲ್ಲಿಕಾರ್ಜುನ ಸ್ವಾಮಿ ಕೇಬಲ್ ಆಪರೇಟರ್ ಸಂಘದ ಗೌರವಾಧ್ಯಕ್ಷ ನಂಜರಾಜ ಅರಸ್, ಉಪಾಧ್ಯಕ್ಷ ಮಂಜೇಗೌಡ, ಖಜಾಂಚಿ ಪುಟ್ಟರಾಜೇಗೌಡ ಹಾಗೂ ಸಂಘದ ನಿರ್ದೇಶಕರು, ಸದಸ್ಯರು ಇದ್ದರು.