ನ್ಯೂಸ್

ಏರ್‌ಪೋರ್ಟ್ ಮಾದರಿಯಲ್ಲಿ ಮೆಜೆಸ್ಟಿಕ್ ರೈಲು ನಿಲ್ದಾಣ ಅಭಿವೃದ್ಧಿ

ಬೆಂಗಳೂರು: ಏರ್‌ಪೋರ್ಟ್ ಮಾದರಿಯಲ್ಲಿ ಮೆಜೆಸ್ಟಿಕ್ ರೈಲು ನಿಲ್ದಾಣ ಅಭಿವೃದ್ಧಿ ಮಾಡುತ್ತೇವೆ ಎಂದು ರೈಲ್ವೆ ಇಲಾಖೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಅಭಿವೃದ್ಧಿಗೆ ಡಿಪಿಆರ್ ಸಿದ್ಧವಾಗಿದೆ. ರೈಲು ನಿಲ್ದಾಣ ಅಭಿವೃದ್ಧಿ ಬಗ್ಗೆ ರೈಲ್ವೆ ಮಂಡಳಿ ಕೆಲ ಸ್ಪಷ್ಟನೆ ಕೇಳಿದೆ. ಮುಂದಿನ ದಿನಗಳಲ್ಲಿ ರೈಲ್ವೆ ಮಂಡಳಿ ಮುಂದೆ ಇಡುತ್ತೇವೆ. ಒಳ್ಳೆಯ ಕೆಲಸಗಳಿಗೆ ಪ್ರಧಾನಿ ನರೇಂದ್ರ ಮೋದಿ ಬೇಡ ಎನ್ನುವುದಿಲ್ಲ. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಜತೆ ಚರ್ಚಿಸಿ ಕೆಲಸ ಆರಂಭಿಸುತ್ತೇವೆ ಎಂದು ತಿಳಿಸಿದ್ದಾರೆ.

ಸುಮಾರು ೧೫೦೦ ಕೋಟಿ ರೂ. ವೆಚ್ಚದಲ್ಲಿ ಏರ್‌ಪೋರ್ಟ್‌ಗಿಂತ ವಿಭಿನ್ನವಾಗಿ ಮೆಜೆಸ್ಟಿಕ್ ರೈಲು ನಿಲ್ದಾಣ ಅಭಿವೃದ್ಧಿ ಮಾಡುತ್ತೇವೆ. ಏರ್‌ಪೋರ್ಟ್‌ನಲ್ಲಿ ಸಿಗುವ ಎಲ್ಲಾ ಸವಲತ್ತುಗಳು ಇಲ್ಲಿ ಸಿಗಲಿದೆ. ೧೬೦ ಎಕರೆ ಜಾಗ ಇದೆ. ನಿರೋದ್ಯೋಗಿಗಳಿಗೆ ಅನುಕೂಲವಾಗಲಿದೆ ಎಂದರು.

ಶಾಸಕ ರವಿ ಗಣಿಗ ಆರೋಪಕ್ಕೆ ವಿ.ಸೋಮಣ್ಣ ಕಿಡಿ

ಬಿಜೆಪಿಯಿಂದ ಕಾಂಗ್ರೆಸ್ ಶಾಸಕರಿಗೆ ೧೦೦ ಕೋಟಿ ರೂ. ಆಫರ್ ನೀಡಿರುವ ಬಗ್ಗೆ ಶಾಸಕ ರವಿ ಗಣಿಗ ಮಾಡಿರುವ ಆರೋಪ ವಿಚಾರವಾಗಿ ಮಾತನಾಡಿದ ಅವರು, ರವಿ ಗಣಿಗ ಶಾಸಕರಾಗಿ ಉತ್ತಮ ಕೆಲಸ ಮಾಡಲಿ. ಹೀಗೆ ಆರೋಪ ಮಾಡೋದು ಅವರ ಗೌರವಕ್ಕೆ ತಕ್ಕುದಾದುದಲ್ಲ ಎಂದಿದ್ದಾರೆ. ಶೇ.೪೦ ಕಮೀಷನ್ ಆರೋಪ ಮಾಡಿದ್ರಲ್ವಾ, ಅದೇ ರೀತಿಯ ಆರೋಪ ಇದು ಎಂದರು.

ಬಿಪಿಎಲ್ ಕಾರ್ಡ್ ರದ್ದು ಮಾಡಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ಈ ತರದ ನಿರ್ಧಾರವನ್ನು ಸಿಎಂ ಸಿದ್ದರಾಮಯ್ಯ ಮಾಡಬಾರದು. ಕೋವಿಡ್ ಹಗರಣ ತನಿಖೆ ವಿಚಾರವಾಗಿ ಮಾತನಾಡಿ, ಉಪ್ಪು ತಿಂದವರು ನೀರು ಕುಡಿತ್ತಾರೆ. ತನಿಖೆ ಮಾಡಲಿ ಬಿಡಿ ಎಂದು ಹೇಳಿದರು.