ಬೆಂಗಳೂರು: ಗಣಿ ಮತ್ತು ಭೂ ವಿಜ್ಞಾನ ವ್ಯಾಪ್ತಿಗೆ ಬರುವ ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಷನ್ ಲಿಮಿಟೆಡ್(ಕೆ.ಎಸ್.ಎಂ.ಸಿ.ಎಲ್) ಸಂಸ್ಥೆಯಿಂದ ಶಾಲೆಗಳ ಕೊಠಡಿ, ವಾಣಿಜ್ಯ ಸಮುಚ್ಚಯ ಕಾಮಗಾರಿ ಹಮ್ಮಿಕೊಳ್ಳಲಾಗಿದೆ(Development of government schools by KSMCL)ಎಂದು ಗಣಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ(S S Mallikarjuna) ತಿಳಿಸಿದರು.
ಕೆ.ಎಸ್.ಎಂ.ಸಿ.ಎಲ್ ಸಂಸ್ಥೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಹಿರಿಯ ಅಧಿಕಾರಿಗಳಿಂದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಹಿತಿ ಪಡೆದು ಮಾತನಾಡಿದರು.
ಕೆ.ಎಸ್.ಎಂ.ಸಿ.ಎಲ್ ಸಂಸ್ಥೆಯ ಒಟ್ಟು ಆದಾಯ ಮತ್ತು ಲಾಭದ ನಿರೀಕ್ಷೆಯಿದೆ. ನಿವ್ವಳ ಆದಾಯ ತೆರಿಗೆಯ ನಂತರ 492 ಕೋಟಿ ರೂ. ಆಗುವ ನಿರೀಕ್ಷೆಯಿದೆ. ಸಂಸ್ಥೆಯು ರೇಷ್ಮೆ ಇಲಾಖೆಯೊಂದಿಗೆ ಜಂಟಿ ಸಹಭಾಗಿತ್ವದೊಂದಿಗೆ ಕಚೇರಿ ಹಾಗೂ ವಾಣಿಜ್ಯ ಸಮುಚ್ಚಯ ಕಟ್ಟಡ ನಿರ್ಮಾಣಕ್ಕೆ 666 ಕೋಟಿ ರೂ. ವೆಚ್ಚ ಮಾಡಲು ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ ಎಂದರು.
ಕೆಎಸ್‌ಎಂಸಿಎಲ್ ನಿಂದ ಸರ್ಕಾರಿ ಶಾಲಾ ಕೊಠಡಿಗಳ ನಿರ್ಮಾಣವು ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಒಟ್ಟು 14.68ಕೋಟಿ ರೂ.ಗಳನ್ನು ಕಾರ್ಪೋರೇಟ್ ಸಾಮಾಜಿಕ ಜವಾಬ್ದಾರಿಯಡಿ ವಿನಿಯೋಗಿಸಲಾಗುವುದು ಎಂದು ತಿಳಿಸಿದರು.
ಕೆಎಸ್‌ಎಂಸಿಎಲ್ ಸಂಸ್ಥೆಯಿಂದ ಹಮ್ಮಿಕೊಂಡಿರುವ ಉತ್ತಮ ಕಾರ್ಯಗಳನ್ನು ಮುಂದುವರೆಸಿಕೊಂಡು ಹೋಗುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಶು ಸಂಗೋಪನೆ ಹಾಗೂ ರೇಷ್ಮೆ ಇಲಾಖೆ ಸಚಿವ ಕೆ. ವೆಂಕಟೇಶ್, ಕೆಎಸ್‌ಎಂಸಿಎಲ್ ನ ಅಧ್ಯಕ್ಷ ಜಿ.ಎಸ್.ಪಾಟೀಲ, ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ್ ಬಿಳಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.