ನ್ಯೂಸ್

ಅಭಿವೃದ್ಧಿಯ ಕಡೆಗೆ ನನ್ನ ಹೆಜ್ಜೆ

ಡಿ.ಪಿ.ನಾಗರಾಜ ಶ್ರೇಷ್ಠಿ

ಚಿತ್ರದುರ್ಗ: ಕ್ಷೇತ್ರದ ಅಭಿವೃದ್ಧಿಯೇ ನನ್ನ ಗುರಿ, ಎಲ್ಲ ಹಳ್ಳಿಗಳನ್ನು ಸುತ್ತಿ ಅಭಿವೃದ್ಧಿ ಒಂದು ಭಾಗವನ್ನಾಗಿ ರೂಪಿಸುವುದಾಗಿ ಚಿತ್ರದುರ್ಗ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಹೇಳಿದರು.

ತಾಲೂಕಿನ ಸೊಲ್ಲಾಪುರ ನಾಯಕರಹಟ್ಟಿ ಹಾಗೂ ಉಪ್ಪಾನಾಯಕನಹಳ್ಳಿಯಲ್ಲಿ ಬುಧವಾರ ಜಲ ಜೀವನ್ ಮಿಷನ್ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಕ್ಷೇತ್ರದ ಜನರು ನನ್ನನ್ನು ಆಯ್ಕೆ ಮಾಡಿದ್ದಾರೆ. ಅಪಪ್ರಚಾರಕ್ಕೆ ತಲೆಕೆಡಿಸಿಕೊಳ್ಳದೆ ಅಭಿವೃದ್ಧಿ ಕಡೆಗೆ ಹೆಜ್ಜೆ ಇಡುವೆ ಎಂದರು.

ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣ ಮಾಡುವುದಿಲ್ಲ. ಎಲ್ಲರೂ ನಮ್ಮವರೇ ಎನ್ನುವ ಮನೋಭಾವ ನನ್ನದು. ರಾಜಕಾರಣ ಶಾಶ್ವತವಲ್ಲ, ಅಭಿವೃದ್ಧಿ ಕೆಲಸಗಳೇ ಶಾಶ್ವತ ಎಂದು ನಂಬಿರುವವನು ನಾನು. ಹಾಗಾಗಿ ಕ್ಷೇತ್ರದ ವಿವಿಧ ಗ್ರಾಮಗಳ ಕುಂದು ಕೊರತೆಗಳನ್ನು ಪಟ್ಟಿ ಮಾಡಿ ಸಾಧ್ಯವಾದಷ್ಟು ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡುತ್ತಿದ್ದೇನೆ ಎಂದು ತಿಳಿಸಿದರು.

ಸೊಲ್ಲಾಪುರ ನಾಯಕರಹಟ್ಟಿ ನಿವಾಸಿಗಳಿಗೆ ಕಂದಾಯ ಗ್ರಾಮ ಯೋಜನೆಯಡಿ ಶೀಘ್ರ ಸಚಿವರ ಸಮ್ಮುಖದಲ್ಲಿ ಹಕ್ಕುಪತ್ರಗಳನ್ನು ವಿತರಿಸಲಾಗುವುದು. ಮಹಿಳೆಯರ ಸ್ವಯಂ ಉದ್ಯೋಗಕ್ಕೆ ಸಾಕಷ್ಟು ಸರ್ಕಾರದ ಯೋಜನೆಗಳು ಜಾರಿ ಇವೆ. ಅಂತಹ ಯೋಜನೆಗಳ ಸದ್ಬಳಕೆ ಮಾಡಿಕೊಂಡು ಸ್ವಯಂ ಉದ್ಯೋಗದಲ್ಲಿ ತೊಡಗಿಸಿಕೊಳ್ಳುವ ಮೂಲಕ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದರು.

ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಶಿವಣ್ಣ, ಕೆಡಿಪಿ ಸದಸ್ಯರಾದ ಸಂತೋಷ್, ನಾಗರಾಜ್, ಜಾನುಕೊಂಡ ಗ್ರಾಪಂ ಅಧ್ಯಕ್ಷೆ ಮಂಜುಳಾಸ್ವಾಮಿ, ಸದಸ್ಯರಾದ ನಿಜಲಿಂಗಪ್ಪ, ವೆಂಕಟಾಚಲ, ಚಿಂತಾಮಣಿ, ಅಂಜಿನಿ, ಗ್ರಾಮಸ್ಥರಾದ ಹನುಮಂತಪ್ಪ, ಶಶಿಕುಮಾರ್, ರಮೇಶ್, ಮಯೂರ್, ಸ್ವಾಮಿ, ರಂಗಪ್ಪ, ಲೋಕೇಶ್, ಕುಮಾರ್, ಸ್ವಾಮಿ ಇತರರಿದ್ದರು.