ನ್ಯೂಸ್

ವಿಕಸಿತ ಭಾರತಕ್ಕೆ ವಾರ್ಷಿಕ ಶೇ. 10 ನಾಮಿನಲ್ ಜಿಡಿಪಿ ಬೆಳವಣಿಗೆ ಅಗತ್ಯ

ಸುದೀಪ್​ ವಿ.ಎನ್​

ನವದೆಹಲಿ: 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿಸ ಬೇಕೆಂದರೆ ವಾರ್ಷಿಕ ಸರಾಸರಿ ಶೇ. 10ರಷ್ಟು ನಾಮಿನಲ್ ಜಿಡಿಪಿ ಬೆಳವಣಿಗೆ ದರ ಅಗತ್ಯ ಎಂದು ಸಿಐಐ ಅಧ್ಯಕ್ಷ ರಾಜೀವ್ ಮೆಮಾನಿ ಹೇಳಿದ್ದಾರೆ.

ದೇಶದಲ್ಲಿ ಉತ್ಪಾದನೆಯಾದ ಸರಕು, ಸೇವೆಗಳ ಮೌಲ್ಯವನ್ನು ಪ್ರಸ್ತುತ ಮಾರುಕಟ್ಟೆ ಬೆಲೆ ಬಳಸಿ ನಾಮಿನಲ್ ಜಿಡಿಪಿಯನ್ನು ಅಳೆಯಲಾಗುತ್ತದೆ. ಹಣದುಬ್ಬರಕ್ಕೆ ಹೊಂದಾಣಿಕೆ ಮಾಡದೆ ಇರುವುದರಿಂದ ನೈಜ ಜಿಡಿಪಿಯಿಂದ ಇದು ಭಿನ್ನ.

ಭಾರತ ಮತ್ತು ಅಮೆರಿಕ ನಡುವಿನ ತಾತ್ಕಾಲಿಕ ವ್ಯಾಪಾರ ಒಪ್ಪಂದ ಶೀಘ್ರದಲ್ಲೇ ಅಂತಿಮಗೊಳ್ಳಲಿದೆ. ಇದು ಅನಿಶ್ಚಿತತೆಯನ್ನು ತೊಲಗಿಸಿ ಭಾರತೀಯ ಕಂಪನಿಗಳಿಗೆ, ವಿಶೇಷವಾಗಿ ಕಾರ್ವಿುಕಕೇಂದ್ರಿತ ಕ್ಷೇತ್ರಗಳಲ್ಲಿ ದೊಡ್ಡ ಮಾರುಕಟ್ಟೆಯನ್ನು ಸೃಷ್ಟಿಸಲಿದೆ. ಈ ಒಪ್ಪಂದ ತಂತ್ರಜ್ಞಾನ ವರ್ಗಾವಣೆ, ಹೆಚ್ಚಿನ ಜಂಟಿ ಉದ್ಯಮಗಳು ಮತ್ತು ಪಾಲುದಾರಿಕೆಗಳಿಗೆ ದಾರಿ ಮಾಡಿಕೊಡುತ್ತದೆ ಎಂದು ತಿಳಿಸಿದ್ದಾರೆ.

ಭಾರತದ ಆರ್ಥಿಕತೆ ಪ್ರಸ್ತುತ ಹಣಕಾಸು ವರ್ಷದಲ್ಲಿ ಶೇ. 6.4ರಿಂದ 6.7ರಷ್ಟು ಬೆಳವಣಿಗೆಯಾಗಲಿದೆ ಎಂದು ನಿರೀಕ್ಷಿಸಲಾಗಿದ್ದು, ಇದಕ್ಕೆ ದೇಶೀಯ ಉದ್ಯಮಗಳ ಬಲವಾದ ಬೆಂಬಲವಿದೆ. ಆದರೂ ಭೌಗೋಳಿಕ ರಾಜಕೀಯ ಅನಿಶ್ಚಿತತೆಯಿಂದ ಕೆಲವು ಅಪಾಯಗಳಿವೆ. ಒಟ್ಟಾರೆ ಆರ್ಥಿಕ ಸ್ಥಿತಿಯಲ್ಲಿ ಭಾರತ ಉತ್ತಮ ಸ್ಥಾನದಲ್ಲಿದೆ. ಆರ್ಥಿಕತೆ ತುಂಬಾ ಸ್ಥಿರವಾಗಿವೆ. ಬಂಡವಾಳ ಮಾರುಕಟ್ಟೆ, ಆರ್​ಬಿಐ, ಬ್ಯಾಂಕ್​ಗಳು ಉತ್ತಮ ಸ್ಥಿತಿಯಲ್ಲಿವೆ. ಕಾರ್ಪೆರೇಟ್ ಬ್ಯಾಲೆನ್ಸ್ ಶೀಟ್​ಗಳು ಉತ್ತಮ ಸಾಧನೆ ತೋರುತ್ತಿವೆ ಎಂದು ಅವರು ವಿವರಿಸಿದ್ದಾರೆ. ಆರ್​ಬಿಐ 2026ರ ಮಾರ್ಚ್​ನಲ್ಲಿ ಕೊನೆಗೊಳ್ಳುವ ಹಣಕಾಸು ವರ್ಷಕ್ಕೆ ಭಾರತದ ಜಿಡಿಪಿ ಬೆಳವಣಿಗೆಯ ಅಂದಾಜನ್ನು ಶೇ. 6.5ರಲ್ಲಿ ಉಳಿಸಿಕೊಂಡಿದೆ ಎಂದು ಹೇಳಿದ್ದಾರೆ.