ಸೊರಬ: ಶಾಲಾ ಹಂತದಲ್ಲಿ ವಿದ್ಯಾರ್ಥಿಗಳು ಕೌಶಲ ಹೆಚ್ಚಿಸಿಕೊಳ್ಳಲು ಪ್ರತಿಭಾ ಕಾರಂಜಿ ಸಹಕಾರಿ ಎಂದು ಗ್ರಾಮೀಣ ಶಿಕ್ಷಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಲೇಶ್ ನವುಲೆ ಹೇಳಿದರು.
ತಾಲೂಕಿನ ಹೊಳೆಕಟ್ಟಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಸಮೂಹ ಸಂಪನ್ಮೂಲ ಕೇಂದ್ರ ಶಿಗ್ಗಾ ವ್ಯಾಪ್ತಿ ಶಿಗ್ಗಾ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಮಾತನಾಡಿ, ಇಂತಹ ಕಾರ್ಯಕ್ರಮಗಳಿಂದ ಸ್ಪರ್ಧಾತ್ಮಕ ಮನೋಭಾವ ವೃದ್ಧಿಯಾಗುತ್ತದೆ. ಪಠ್ಯೇತರ ಚಟುವಟಿಕೆಗಳಲ್ಲೂ ಮಕ್ಕಳು ಆಸಕ್ತಿ ವಹಿಸಬೇಕು ಎಂದು ತಿಳಿಸಿದರು.
ಹೊಳೆಕಟ್ಟೆ ಎಸ್‌ಡಿಎಂಸಿ ಅಧ್ಯಕ್ಷ ಎಚ್.ವಿ.ರವೀಂದ್ರ ಮಾತನಾಡಿ, ಆಧುನಿಕತೆ ಪ್ರಭಾವದಲ್ಲಿ ಸಂಸ್ಕೃತಿ, ಆಚಾರ-ವಿಚಾರಗಳು ಮರೆಯಾಗುತ್ತಿವೆ. ಅವುಗಳನ್ನು ಉಳಿಸಲು ವಿದ್ಯಾರ್ಥಿಗಳು ಮುಂದಾಗಬೇಕು. ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಪರಂಪರೆ, ಕಲೆ, ಜಾನಪದ ಹಾಗೂ ಸಾಹಿತ್ಯ ಅನಾವರಣ ಆಗುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಶಿಗ್ಗಾ ಗ್ರಾಪಂ ಅಧ್ಯಕ್ಷೆ ಸೋಮಮ್ಮ, ಸಮೂಹ ಸಂಪನ್ಮೂಲ ಕೇಂದ್ರ ವ್ಯಕ್ತಿ ರಾಘವೇಂದ್ರ, ಭೀಮರಾಜ್, ಸಿಆರ್‌ಪಿ ಸುದರ್ಶನ್, ಮುಖ್ಯ ಶಿಕ್ಷಕ ಚಂದ್ರಪ್ಪ, ಕುಂದಗಸವಿ ಎಸ್‌ಡಿಎಂಸಿ ಅಧ್ಯಕ್ಷ ನೋಪಿ ಶಂಕರ್, ಗ್ರಾಪಂ ಸದಸ್ಯ ನಾಗಪ್ಪ ತಳೆಬೈಲು ಇತರರಿದ್ದರು.