ಹಳುವಳ್ಳಿ ಶ್ರೀ ಸುಂದರರಾಮ ದೇವಸ್ಥಾನದಲ್ಲಿ ನಡೆದ ಭಗವನ್ನಾಮ ಸಂಕೀರ್ತನೆ ಕಾರ್ಯಕ್ರಮದಲ್ಲಿ ಹೊರನಾಡು ದೇವಸ್ಥಾನದ ಧರ್ಮಕರ್ತ ಜಿ.ಭೀಮೇಶ್ವರ ಜೋಷಿ ಮಾತನಾಡಿದರು. 
ನ್ಯೂಸ್

ಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆ ಬೆಳೆಸಿ

ಕಳಸ: ಕಳಸ ತಾಲೂಕಿನ ಹಳುವಳ್ಳಿ ಶ್ರೀ ಸುಂದರರಾಮ ದೇವಸ್ಥಾನದಲ್ಲಿ ಶನಿವಾರ ಮತ್ತು ಭಾನುವಾರ ಭಗವನ್ನಾಮ ಸಂಕೀರ್ತನೆ ನಡೆಯಿತು.
ಭಾನುವಾರ ದೇವಸ್ಥಾನಕ್ಕೆ ಭೇಟಿ ನೀಡಿ ಮಾತನಾಡಿದ ಹೊರನಾಡು ದೇವಸ್ಥಾನದ ಧರ್ಮಕರ್ತ ಜಿ.ಭೀಮೇಶ್ವರ ಜೋಷಿ, ಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆ ಬೆಳೆದಾಗ ಮಾತ್ರ ದೇವಸ್ಥಾನಗಳು ಅಭಿವೃದ್ಧಿಗೊಳ್ಳಲು ಸಾಧ್ಯವಾಗುತ್ತದೆ ಎಂದರು.
ಈ ದೇವಸ್ಥಾನದ ಮುಖ್ಯಸ್ಥ ಪುಂಡಲೀಕ ಭಟ್ ತನ್ನ ವೃದ್ಧಾಪ್ಯ ಜೀವನದಲ್ಲಿ ಮನುಷ್ಯ ಎಲ್ಲವನ್ನೂ ಬಿಟ್ಟು ವೈರಾಗ್ಯದೆಡೆ ಹೋಗುವ ಸಂದರ್ಭ ವೈರಾಗ್ಯ ಮಾರ್ಗ ತೋರಿಸುವ ನಿಟ್ಟಿನಲ್ಲಿ ರಾಮನನ್ನು ಪ್ರತಿಷ್ಠೆ ಮಾಡಿಸಿ ವೈರಾಗ್ಯ ಮುಕ್ತಿಯನ್ನು ಕಾಣುವುದಕ್ಕೆ ಸಾಧ್ಯ ಎನ್ನುವುದನ್ನು ತೋರಿಸುವಂತಹ ವ್ಯವಸ್ಥೆ ಮಾಡಿದ್ದಾರೆ. ರಾಮ ಮಂದಿರ ನಿರ್ಮಾಣ ಮಾಡಿದ್ದಾರೆ ಎಂದು ಹೇಳಿದರು.
ಶನಿವಾರ ವೇದಾಂತ ಘನಪಾಠಿಗಳಿಂದ ಸಂಕಲ್ಪಪೂರ್ವಕವಾಗಿ ಆರಂಭವಾಗಿ ನಂತರ ಭಜನೆ ಗುರುಕೀರ್ತನೆಯೊಂದಿಗೆ ಜಯದೇವ ಕವಿಗಳ 24 ಅಷ್ಟಪದಿ ಕೀರ್ತನೆ, ರಾತ್ರಿ ದಿವ್ಯನಾಮ ಸಂಕೀರ್ತನೆ, ನೃತ್ಯ ಮತ್ತು ದೀಪ ಪ್ರದಕ್ಷಿಣೆ, ಭಜನಾ ಕಾರ್ಯಕ್ರಮ ನಡೆಯಿತು.
ಭಾನುವಾರ ಬೆಳಗ್ಗೆ ಊಂಚವೃತ್ತಿ ಭಜನೆ, ದೀಪಾರಾಧನೆ, ರಾಧಾ ಕಲ್ಯಾಣ ಮತ್ತು ಆಂಜನೇಯ ಉತ್ಸವ ನಡೆಯಿತು. ಕಾರ್ಯಕ್ರಮದಲ್ಲಿ ರಾಷ್ಟ್ರಮಟ್ಟದ ಕಲಾವಿದರಾದ ಸತ್ಯನಾರಾಯಣ ಭಾಗವತರ್ ಚೆನ್ನೈ, ಬಾಲಕೃಷ್ಣ ಭಾಗವತರ್ ಕೊಯಮತ್ತೂರು, ರವಿ ಭಾಗವತರ್ ಚೆನ್ನೈ, ಬಾಲಗಣಪತಿ ಭಾಗವತರ್, ಬಾಲಸುಬ್ರಹ್ಮಣ್ಯ ಭಾಗವತರ್, ಭಾಸ್ಕರ್ ಭಾಗವತರ್ ಇದ್ದರು.