ಶಿವಮೊಗ್ಗ: ಒಂದು ಪ್ರಕರಣವನ್ನು ವಿಭಿನ್ನವಾಗಿ ಎಲ್ಲ ಆಯಮಗಳಲ್ಲಿ ಆಲೋಚಿಸುವಂತಹ ಪ್ರತಿಫಲಿತ ಚಿಂತನೆಗಳನ್ನು ವಕೀಲಿ ವೃತ್ತಿಯಲ್ಲಿ ಬೆಳೆಸಿಕೊಳ್ಳಬೇಕು ಎಂದು ಹೈಕೋರ್ಟ್ ನ್ಯಾಯಮೂರ್ತಿ ಇ.ಎಸ್.ಇಂದರೇಶ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಸೋಮವಾರ ಸಿ.ಭೀಮಸೇನರಾವ್ ಕಾನೂನು ಮಹಾವಿದ್ಯಾಲಯದಿಂದ ಏರ್ಪಡಿಸಿದ್ದ ಅಂತಿಮ ವರ್ಷದ ಕಾನೂನು ವಿದ್ಯಾರ್ಥಿಗಳಿಗೆ ಗ್ರಾಜುಯೇಷನ್ ಡೇ ಉದ್ಘಾಟಿಸಿ ಮಾತನಾಡಿದರು.
ಕಾನೂನು ಪದವಿ ಪಡೆದ ನಂತರವೇ ನಿಜವಾದ ವಕೀಲ ವಿದ್ಯಾರ್ಥಿ ಜೀವನ ಪ್ರಾರಂಭವಾಗುವುದು. ಬರವಣಿಗೆ, ನಿರೂಪಣೆ ಶಬ್ದಕೋಶಗಳ ಬಳಕೆ, ವ್ಯಾಖ್ಯಾನದಂತಹ ಕೌಶಲತೆಗಳೇ ವಕೀಲಿ ವೃತ್ತಿಯ ಬಹುದೊಡ್ಡ ಅವಶ್ಯಕತೆಯಾಗಿದೆ. ಕೋರ್ಟ್‌ನಲ್ಲಿ ಹೆಚ್ಚು ಸಮಯ ಕಳೆಯಬೇಕು. ವಿವಿಧ ಕಾಯ್ದೆಗಳ ಬಗ್ಗೆ, ಪ್ರಕರಣಗಳ ಕುರಿತು ಹಿರಿಯ ವಕೀಲರ ಜತೆಗೆ ಚರ್ಚಿಸುತ್ತ ವಾಸ್ತವತೆಯ ಜ್ಞಾನ ಪಡೆಯಬೇಕು. ಜೀವನ ಅನುಭವಗಳು ನಿಜವಾದ ಉತ್ಕೃಷ್ಟ ಜ್ಞಾನ ನೀಡುತ್ತದೆ ಎಂದರು.
ನ್ಯಾಯಾಲಯದ ತೀರ್ಪುಗಳನ್ನು ಪರಿಪೂರ್ಣವಾಗಿ ಅಧ್ಯಯನ ನಡೆಸಬೇಕು. ನಮ್ಮ ಆಲೋಚನೆಯೆ ನಿಜವಾದ ಎಐ(ಕೃತಕ ಬುದ್ಧಿಮತ್ತೆ) ತಂತ್ರಜ್ಞಾನಗಳು ನಮಗೆ ಹೊಸ ಕಲಿಕೆಗೆ ಅವಕಾಶ ಮಾಡಿಕೊಡಬಹುದೇ ವಿನಃ, ಅನುಷ್ಠಾನಗೊಳಿಸುವ ಕಲೆ ನಮ್ಮ ಸಾಮಾನ್ಯ ಜ್ಞಾನದ ಮೇಲೆಯೆ ಅವಲಂಬಿತವಾಗಿರುತ್ತದೆ. ವಕೀಲ ವೃತ್ತಿ ನಿಜವಾದ ಆನಂದದಾಯಕ ಬದುಕನ್ನು ಹೊಂದಿದೆ. ನೊಂದವರ ದನಿಯಾಗಿ ನ್ಯಾಯ ಒದಗಿಸಿದ ಸಾರ್ಥಕತೆಯ ನಿದ್ದೆ ವಕೀಲಿ ವೃತ್ತಿಯಲ್ಲಿ ಮಾತ್ರ ಪಡೆಯಬಹುದು ಎಂದು ಹೇಳಿದರು.
ವಕೀಲರು ಧರಿಸುವ ಕಪ್ಪು ಕೋಟ್, ನೊಂದವರ ನೋವುಗಳನ್ನು ನಾವು ಹೊರುತ್ತೇವೆಂಬ ಅರ್ಥವನ್ನು ಸಂಕೇತಿಸುತ್ತದೆ. ವೃತ್ತಿಯಲ್ಲಿ ಮೊದಲ ಹತ್ತು ವರ್ಷ ಯಾವುದೇ ಸೀಮಿತತೆಯಿಲ್ಲದೆ ಕತ್ತೆಯಂತೆ ಕೆಲಸ ಮಾಡಿದರೆ, ಹನ್ನೊಂದನೇ ವರ್ಷ ನೀವೇ ಸ್ಪರ್ಧಾತ್ಮಕ ಯುಗದ ಕುದುರೆಯಾಗಿ ರೂಪಗೊಂಡಿರುತ್ತಿರಿ. ಗ್ರೌಂಡ್ ಸ್ಯೂಟ್ ಪೆಟಿಷನ್ ಗಳನ್ನು ಬರೆಯುವಾಗ ನೇರವಾಗಿ ಪ್ರಕರಣದ ಮುಖ್ಯ ವಿಚಾರಗಳ ಬಗ್ಗೆ ಬರೆಯುತ್ತಾ ಹೋಗಬೇಕು. ಅದು ನ್ಯಾಯಾಲಯದ ತೀರ್ಪುಗಳ ಮೇಲೆ ನಿಜಕ್ಕೂ ಪರಿಣಾಮಕಾರಿ ಪ್ರಭಾವ ಬೀರಲಿದೆ ಎಂದು ಸಲಹೆ ನೀಡಿದರು.
ಮಾಜಿ ಎಂಎಲ್‌ಸಿ ಗಣೇಶ ಕಾರ್ಣಿಕ್ ಮಾತನಾಡಿ, ಯಾವುದೇ ಸಣ್ಣ ಕೆಲಸಗಳು ಆಸಕ್ತಿಯಿಂದ ನಿರ್ವಹಿಸಬೇಕು. ಕಾನೂನು ಪದವೀಧರರಾಗಿ ಹೊರಹೊಮ್ಮುವಾಗ ಉತ್ತಮ ವಕೀಲನಾಗುವ ಜತೆಗೆ ಸಮಾಜಮುಖಿ ಪ್ರಜೆಯಾಗಿ ಕೆಲಸ ಮಾಡಬೇಕು. ಶಿಕ್ಷಣ ನಮ್ಮಲ್ಲಿರುವ ಅದ್ಭುತ ಶಕ್ತಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಪೂರಕ ಶಕ್ತಿಯನ್ನು ನೀಡುತ್ತದೆ ಎಂದು ಹೇಳಿದರು.
ಎನ್‌ಇಎಸ್ ಅಧ್ಯಕ್ಷ ಜಿ.ಎಸ್.ನಾರಾಯಣ ರಾವ್, ಕಾರ್ಯದರ್ಶಿ ಎಸ್.ಎನ್.ನಾಗರಾಜ, ನಿರ್ದೇಶಕರಾದ ಎಂ.ಆರ್.ಅನಂತದತ್ತ, ಎಚ್.ಸಿ.ಶಿವಕುಮಾರ್, ಆಜೀವ ಸದಸ್ಯರಾದ ವಸಂತಕುಮಾರ್, ಶೈಕ್ಷಣಿಕ ಆಡಳಿತಾಧಿಕಾರಿ ಎ.ಎನ್.ರಾಮಚಂದ್ರ ಉಪಸ್ಥಿತರಿದ್ದರು. ಪ್ರಾಚಾರ್ಯ ಡಾ.ಎ.ಅನಲಾ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಮೌನಾಚರಣೆ ಅರ್ಪಿಸಲಾಯಿತು.